Advertisement

ರಾಮ ಪುರುಷರಿಗೆ ಶುಭವರ್ಣ ಪ್ರಶಸ್ತಿ

06:13 PM Nov 14, 2019 | mahesh |

ಖ್ಯಾತ ಸ್ತ್ರೀ ಪಾತ್ರಧಾರಿ ಜೋಡುಕಲ್ಲು ರಾಮ ಪುರುಷರಿಗೆ 2019ರ ಸಾಲಿನ ಮರಕಡ ಕುಮೇರುಮನೆ ಶ್ರೀಮತಿ ಲಿಂಗಮ್ಮ ತನಿಯಪ್ಪ ಕೋಟ್ಯಾನ್‌ ಸ್ಮರಣಾರ್ಥ ನೀಡಲಾಗುವ “ಶುಭವರ್ಣ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ.

Advertisement

ಬಡತನ ಮತ್ತು ಆ ಕಾಲದ ಸ್ಥಿತಿಗತಿಯ ಕಾರಣದಿಂದಾಗಿ ರಾಮ ಪುರುಷರು ಶಾಲೆಗೆ ಹೋದದ್ದು 5ನೇ ತರಗತಿಯ ತನಕ, ಮೂಡಂಬೈಲಿನಲ್ಲಿ.

ಯಕ್ಷಗಾನದ ಯಾವುದೇ ಪ್ರಾಥಮಿಕ ಜ್ಞಾನ ಇಲ್ಲದೆ ನೇರವಾಗಿ ಕೊಲ್ಲೂರು ಮೇಳ ಸೇರಿ, ಅಲ್ಲಿಯೇ ಎಲ್ಲವನ್ನೂಕಲಿತರು.ಆಗ ಮೇಳ ತಿರುಗಾಟವೇ ಯಕ್ಷಗಾನದ ಶಾಲೆ. ಕೊಲ್ಲೂರು ಮೇಳದಲ್ಲಿ ಕಾವೂರು ಕೇಶವ ಮತ್ತು ವಾಸುದೇವ ಪ್ರಭುಗಳ ಗರಡಿಯಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು.ನಂತರ ಮೇಳದ ಎಲ್ಲ ಹಿರಿಯಕಲಾವಿದರ ಮಾರ್ಗದರ್ಶನದಲ್ಲಿ ಪ್ರಸಂಗ ನಡೆ, ಪಾತ್ರಗಳ ಸ್ವಭಾವಗಳೆಲ್ಲವನ್ನೂ ಕಲಿತರು.ಅವರಿಗೆ ಹೆಚ್ಚು ಒಲವಿದ್ದುದು ಸ್ತ್ರೀ ಪಾತ್ರಗಳಲ್ಲಿ.ಅದರಲ್ಲೇ ಪ್ರಭುತ್ವವನ್ನು ಸಂಪಾದಿಸಿ ಕೊನೆಗೆ ಸ್ತ್ರೀ ಪಾತ್ರಧಾರಿಯಾಗಿಯೇ ನಿವೃತ್ತಿಯನ್ನು ಹೊಂದಿದರು.ಕೊಲ್ಲೂರು (2 ವರ್ಷ), ಕೂಡ್ಲು (2 ವರ್ಷ), ಉಪ್ಪಳ (21 ವರ್ಷ) ಹೀಗೆ ಎರಡೂವರೆ ದಶಕಗಳ ಕಾಲ ಯಕ್ಷಸೇವೆ ಮಾಡಿದರು.ತುಳು -ಕನ್ನಡ ಎರಡರಲ್ಲೂ ಸೈ ಎನಿಸಿಕೊಂಡರು.ಅವರ ಸ್ತ್ರೀ ಪಾತ್ರದ ವೈಶಿಷ್ಟತೆಯೆಂದರೆ ಪಾತ್ರದ ಚೌಕಟ್ಟನ್ನು ಮೀರದೆ ಸ್ವಭಾವಕ್ಕನುಗುಣವಾಗಿ ಭಾವನಾತ್ಮಕವಾದ ಅಭಿನಯ.ಶರ್ಮಿಷ್ಟೆ, ದೇವಯಾನಿ, ಭ್ರಮರಕುಂತಳೆ, ಕಿನ್ನಿದಾರು, ಚಿತ್ರಾಂಗದೆ, ದಾಕ್ಷಾಯಿಣಿ, ಪದ್ಮಾವತಿ ಮೊದಲಾದ ಅವರ ಪಾತ್ರಗಳು ಜನಮೆಚ್ಚುಗೆಯನ್ನು ಗಳಿಸಿದ್ದವು.ತಿರುಗಾಟದಿಂದ ನಿವೃತ್ತರಾದ ಮೇಲೆ ಕೋಡಪದವು, ಪೈವಳಿಕೆ, ಮುಡಿಪುಗಳ ಕಲಾವೃಂದಗಳಲ್ಲಿ ವರ್ಣಾಲಂಕಾರ ಮತ್ತು ವಸ್ತ್ರಾಲಂಕಾರದಲ್ಲಿ ತೊಡಗಿಸಿಕೊಂಡು ತನ್ನ ನೈಪುಣ್ಯತೆಯನ್ನುಜೀವನೋಪಾಯಕ್ಕೆ ಬಳಸಿಕೊಂಡರು.ಇದರೊಂದಿಗೆ ಅನೇಕ ಕಡೆಗಳಲ್ಲಿ ನಾಟ್ಯ ತರಗತಿಗಳನ್ನು ನಡೆಸಿ ಬಹಳ ಶಿಷ್ಯರನ್ನು ಹೊಂದಿದ್ದಾರೆ.

ಮರಕಡದಲ್ಲಿ ನ.16ರಂದು ಶುಭವರ್ಣ ಯಕ್ಷಸಂಪದದ ಮೂರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ. ಪ್ರಶಸ್ತಿ ಪ್ರದಾನವಾದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ “ಅತಿಥಿದೇವೋ ಭವ-ಆಚಾರ್ಯದೇವೋ ಭವ – ಪರಮದೇವೋ ಭವ’ ಎಂಬ ಆಖ್ಯಾನ ಪ್ರದರ್ಶನಗೊಳ್ಳಲಿದೆ.

ಪದ್ಮಪ್ರಿಯಾ

Advertisement
Advertisement

Udayavani is now on Telegram. Click here to join our channel and stay updated with the latest news.

Next