ವಿಜಯಪುರ: ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ಜೊತೆ ಪ್ರವಾಹ ಪರಿಸ್ಥಿತಿ ಗಂಭೀರವಾಗಿದೆ. ಇಂಥ ಸಂದರ್ಭದಲ್ಲಿ ಸಿ.ಎಂ. ಬದಲಾವಣೆಯಂಥ ಅಪ್ರಸ್ತುತ ವಿಷಯ ಚರ್ಚೆ ಸರಿಯಲ್ಲ. ಅವರ ಹೇಳಿಕೆಯಿಂದ ಸರ್ಕಾರ, ಪಕ್ಷಕ್ಕೆ ಮುಜುಗುರ ಆಗಲಿದೆ. ಹೀಗಾಗಿ ಸ್ವಪಕ್ಷೀಯ ಶಾಸಕ ಯತ್ನಾಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲಾರೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಬುಧವಾರ ಜಿಲ್ಲೆಯ ಆಲಮಟ್ಟಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ ಹೇಳಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿದರು.
ರಾಜ್ಯ ಸಂಕಷ್ಟದಲ್ಲಿರುವಾಗ ಸಿಎಂ ಬದಲಾವಣೆ ವಿಚಾರವೇಕೆ. ಇಷ್ಟಕ್ಕೂ ರಾಜ್ಯದಲ್ಲಿ ಕೊರೋನಾ ಹಾಗೂ ಪ್ರವಾಹದಂಥ ಗಂಭೀರ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.
ಇದನ್ನೂ ಓದಿ :ಕಾಂಗ್ರೆಸ್ ಪಾಕಿಸ್ತಾನದಲ್ಲಿ ಗೆಲ್ಲಬೇಕಷ್ಟೆ!ಕೈ ಮುಖಂಡರಿಗೆ ಮತ್ತೆ ಸಿಎಂ ಹುದ್ದೆ ಕನಸು
ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಬೇಕಿರುವ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಬಾಧಿತರಿಗೆ ನ್ಯಾಯ ಒದಗಿಸಿದ್ದಾರೆ. ಹೀಗಿದ್ದೂ ಸಿಎಂ ಬದಲಾವಣೆ ಚರ್ಚೆ ಸರಿಯಲ್ಲ, ಈಗ ಪ್ರಶ್ನೆಯೇ ಅಪ್ರಸ್ತುತ ಎಂದಿದ್ದಾರೆ.
ಯತ್ನಾಳ ಅವರು ನೀಡಿರುವ ಹೇಳಿಕೆ ಅವರ ವಯಕ್ತಿಕ ವಿಚಾರ. ಹೀಗಾಗಿ ಅದರ ಬಗ್ಗೆ ಕಾಮೆಂಟ್ ಮಾಡುವುದಿಲ್ಲ. ಈಗೇನಿದ್ದರೂ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನೋವು, ನಿವಾರಣೆ ಕುರಿತು ಮಾತ್ರ ಮಾತಾಡೋಣ ಎಂದರು.
ವಿಜಯಪುರ ನಗರದ ಅಭಿವೃದ್ಧಿಗೆ ಬಂದಿದ್ದ 125 ಕೋಟಿ ರೂ. ಕರೋನಾ ಅರ್ಥಿಕ ಬಿಕ್ಕಟ್ಟಿನ ಕಾರಣದಿಂದ ವಾಪಸ್ ಹೋಗಿದೆ.
ಈ ಅನುದಾನ ಮರಳಿ ತರಲು ಸಿಎಂ ಜೊತೆ ಮಾತನಾಡಿ, ಅನುದಾನ ತರಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.