ತೆರೆಯ ಮೇಲೆ ಕಾಣಿಸಿಕೊಳ್ಳುವ ನಟ, ನಟಿಯರಲ್ಲಿ ಕೇವಲ ಅಭಿನಯ ಮಾತ್ರ ಇರುತ್ತೆ ಅಂತಂದುಕೊಳ್ಳುವಂತಿಲ್ಲ. ಅವರಲ್ಲಿ ಹಾಡುವ ಕಲೆಯೂ ಉಂಟು. ಈಗಾಗಲೇ ಅದೆಷ್ಟೋ ನಟ ನಟಿಯರು ತಮ್ಮ ಚಿತ್ರಗಳಲ್ಲಿ ಅಭಿನಯಿಸುವುದರ ಜೊತೆಗೆ ಹಾಡುವ ಅವಕಾಶವನ್ನೂ ಬಳಸಿಕೊಂಡಿದ್ದಾರೆ.
ಈಗ ಆ ಸಾಲಿಗೆ ಶ್ರುತಿ ಪ್ರಕಾಶ್ ಕೂಡ ಸೇರಿದ್ದಾರೆ. ಹೌದು, “ಬಿಗ್‌ಬಾಸ್’ ಮೂಲಕ ಸುದ್ದಿಯಾದ ಶ್ರುತಿ ಪ್ರಕಾಶ್ ಈಗ ನಟಿಯಷ್ಟೇ ಅಲ್ಲ, ಗಾಯಕಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. ಹಾಗಂತ ಅವರನ್ನು ಇಲ್ಲಿ ಬಲವಂತವಾಗಿ ಹಾಡಿಸಿಲ್ಲ. ಮೂಲತಃ ಶ್ರುತಿ ಪ್ರಕಾಶ್ ಒಳ್ಳೆಯ ಹಾಡುಗಾತಿ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ.
ಹೌದು, ಶ್ರುತಿ ಪ್ರಕಾಶ್ ಗಾಯಕಿ ಎನಿಸಿಕೊಳ್ಳಲು ಕಾರಣ “ಲಂಡನ್‌ನಲ್ಲಿ ಲಂಬೋದರ’ ಚಿತ್ರ. ಶ್ರುತಿ ಪ್ರಕಾಶ್ ಅವರು “ಬಿಗ್‌ಬಾಸ್’ ಮನೆಯಿಂದ ಹೊರಬಂದಾಗ, ಸಾಕಷ್ಟು ಮಂದಿ ಕಥೆ ಹೇಳಿದ್ದರು. ಆದರೆ, ಶ್ರುತಿಪ್ರಕಾಶ್ ಮಾತ್ರ ಎಲ್ಲಾ ಕಥೆಗಳನ್ನು ಪಕ್ಕಕ್ಕೆ ಸರಿಸಿ, “ಲಂಡನ್‌ನಲ್ಲಿ ಲಂಬೋದರ’ ಚಿತ್ರದ ಕಥೆ ಒಪ್ಪಿದರು. ರಾಜ್ ಸೂರ್ಯ ನಿರ್ದೇಶನದ ಈ ಚಿತ್ರ ಈಗ ಬಿಡುಗೆಗೆ ಸಿದ್ಧವಾಗಿದೆ.
ಅಂದಹಾಗೆ, ಶ್ರುತಿ ಪ್ರಕಾಶ್ ಅವರು, ಪ್ರಣವ್ ಐಯ್ಯಂಗಾರ್ ಅವರು ಸಂಗೀತ ಸಂಯೋಜಿಸಿ, ಸಾಹಿತ್ಯ ಬರೆದಿರುವ “ಈ ಮನಸು ಅಲೆಮಾರಿ…’ ಎಂಬ ಹಾಡನ್ನು ಹಾಡಿದ್ದಾರೆ. ಶ್ರುತಿ ಪ್ರಕಾಶ್ ಅವರು ಹಾಡಿರುವ ಈ ಹಾಡು ಸದ್ಯಕ್ಕೆ ಸೋಷಿಯಲ್ ಮೀಡಿಯಾ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜೋರು ಸುದ್ದಿ ಮಾಡಿದೆ. ಚಿತ್ರದಲ್ಲಿ ಶ್ರುತಿ ಪ್ರಕಾಶ್ ಅವರಿಗೆ ಸಂತೋಷ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಸಂಪತ್‌ರಾಜ್, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಮತ್ತು ಸಾಧುಕೋಕಿಲ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.
ಈ ಚಿತ್ರದ ಶೀರ್ಷಿಕೆಗೆ ತಕ್ಕಂತೆಯೇ ಚಿತ್ರದ ಅರ್ಧಭಾಗ ಲಂಡನ್‌ನಲ್ಲೇ ಚಿತ್ರೀಕರಣವಾಗಿದೆ. ಕಥೆಯ ಬಗ್ಗೆ ಹೇಳುವುದಾದರೆ, ಇದು ದಿನ ಭವಿಷ್ಯ ಮತ್ತು ಜ್ಯೋತಿಷ್ಯ ಮೇಲೆ ಸಾಗುವ ಕಥೆ. ಚಿತ್ರದ ನಾಯಕ ನಿತ್ಯವೂ ತನ್ನ ಭವಿಷ್ಯದ ಪ್ರಕಾರವೇ ದಿನಚರಿ ಶುರುಮಾಡುತ್ತಾನೆ. ಅವನ ಲೈಫಲ್ಲಿ ಪ್ರತಿ ದಿನ ಏನೆಲ್ಲಾ ನಡೆಯುತ್ತೆ. ಆ ಲಂಬೋದರ ಲಂಡನ್‌ಗೆ ಯಾಕೆ ಹೋಗುತ್ತಾನೆ ಎಂಬುದು ಹೈಲೈಟ್. ಇಲ್ಲಿ ಹಾಸ್ಯಕ್ಕೆ ಹೆಚ್ಚು ಜಾಗ ಕಲ್ಪಿಸಲಾಗಿದೆ ಎಂಬುದು ನಿರ್ದೇಶಕರ ಮಾತು. ವಿದೇಶದಲ್ಲಿರುವ ಸಿನಿಮಾ ಪ್ರೀತಿಸುವ ಕೆಲವು ಕನ್ನಡಿಗರು ಪ್ರೀತಿಯಿಂದಲೇ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇಷ್ಟರಲ್ಲೆ ಚಿತ್ರದ ಟ್ರೇಲರ್ ಹೊರಬರಲಿದ್ದು, ಮಾರ್ಚ್ 29 ರಂದು ಚಿತ್ರ ದೇಶ, ವಿದೇಶದಲ್ಲೂ ತೆರೆ ಕಾಣಲಿದೆ.