ರಾಷ್ಟ್ರಪ್ರಶಸ್ತಿ ವಿಜೇತ “ಹರಿವು’ ಚಿತ್ರವನ್ನು ನಿರ್ದೇಶಿಸಿದ್ದ ಮನ್ಸೋರೆ, ಇಷ್ಟು ದಿನ ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಇದೀಗ ಅವರ ಹೊಸದೊಂದು ಸಿನಿಮಾ ಉತ್ತರ ಕೊಟ್ಟಿದೆ. ಹೌದು, ಮನ್ಸೋರೆ ಅವರೊಂದು ಸಿನಿಮಾ ಶುರು ಮಾಡಲು ಹೊರಟಿದ್ದಾರೆ. ಆದರೆ, ಅವರ ಎರಡನೇ ಸಿನಿಮಾನೂ ಕಲಾತ್ಮಕ ಚಿತ್ರವಾಗಿರುತ್ತಾ? ಇದಕ್ಕೆ ಅವರ ಉತ್ತರ, “ಖಂಡಿತ ಇಲ್ಲ. ಇದು ಪರ್ಯಾಯ ಸಿನಿಮಾವಲ್ಲ.
ಹಾಗಂತ, ಕಲಾತ್ಮಕ ಸಿದ್ಧ ಸೂತ್ರಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿಲ್ಲ. ಇದು ಎಲ್ಲರಿಗೂ ಸಲ್ಲುವ ಚಿತ್ರವಾಗಲಿದೆ. ಸದ್ಯಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ. ಶ್ರುತಿ ಹರಿಹರನ್ ನಾಯಕಿಯಾದರೆ, ರಂಗಭೂಮಿ ಪ್ರತಿಭೆ ಸಂಪತ್‌ಕುಮಾರ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ವಿವರ ಕೊಡುವ ಮನ್ಸೋರೆ, ಕನ್ನಡ ಮಟ್ಟಿಗೆ ಇದೊಂದು ಹೊಸ ತರಹದ ಚಿತ್ರವಾಗಲಿದೆ ಎಂದು ಭರವಸೆ ಕೊಡುತ್ತಾರೆ.
“ಇಲ್ಲಿ ಚಿತ್ರಕಥೆಯಲ್ಲೊಂದು ಹೊಸ ಪ್ರಯೋಗವಿದೆ. ಬಿಗಿ ನಿರೂಪಣೆಯೊಂದಿಗೇ ಚಿತ್ರ ಸಾಗಲಿದೆ. ಪಕ್ಕಾ ಕಮರ್ಷಿಯಲ್ ಸಿನಿಮಾಗಳಲ್ಲಿರುವಂತೆ ಯಾವ ಮಸಾಲೆಯೂ ಇಲ್ಲಿರುವುದಿಲ್ಲ. ಆದರೆ, ಎಲ್ಲಾ ವರ್ಗಕ್ಕೂ ಸಲ್ಲುವಂತಹ ಚಿತ್ರ ಇದಾಗಲಿದೆ. ಒಂದು ಪಟ್ಟಣದ ಹುಡುಗಿ ಸ್ವತಂತ್ರವಾಗಿ ಓಡಾಡುತ್ತಾಳೆ, ಬದುಕುತ್ತಿದ್ದಾಳೆ ಅಂದಾಗ, ಆಕೆ ತುಂಬಾನೇ ಬೋಲ್ಡ್ ಆಗಿರುತ್ತಾಳೆ.
ಆದರೆ, ಅವಳಲ್ಲೂ ಒಂದಷ್ಟು ನೋವುಗಳಿರುತ್ತವೆ. ಒಂದು ಚೌಕಟ್ಟಿನಲ್ಲೇ ಎಲ್ಲವನ್ನೂ ಮಾಡುತ್ತಿರುತ್ತಾಳೆ. ಆ ಚೌಕಟ್ಟಿನೊಳಗಿನ ಸಮಸ್ಯೆಗಳನ್ನು ಎದುರಿಸುತ್ತಲೇ ಬದುಕು ಸವೆಸುತ್ತಿರುತ್ತಾಳೆ. ಅದರಿಂದ ಹೊರಗೆ ಬರೋಕೆ ಎಷ್ಟೆಲ್ಲಾ ಕಷ್ಟಪಡ್ತಾಳೆ ಅನ್ನೋದು ಕಥೆ. ಅವಳು ಆ ಸಮಸ್ಯೆಯಿಂದ ಹೊರಬರೋಕೆ ಒಂದು ಪ್ರಮುಖ ಪಾತ್ರ ಕಾರಣವಾಗುತ್ತೆ. ಆ ಪಾತ್ರ ಕೂಡ ಒಂದು ಭ್ರಮೆಯಲ್ಲೇ ಬದುಕು ಕಟ್ಟಿಕೊಂಡಿರುತ್ತೆ.
ಅದರಿಂದ ಆ ಪಾತ್ರವನ್ನು ಹೊರತರುವಲ್ಲಿ ಆ ಹುಡುಗಿ ಪ್ರಯತ್ನಪಡುತ್ತಾಳೆ. ಆ ಭ್ರಮೆ ಏನೆಂಬುದನ್ನು ಸಿನಿಮಾದಲ್ಲೇ ನೋಡಬೇಕು’ ಎನ್ನುತ್ತಾರೆ ಮನ್ಸೋರೆ. ಇರಾನಿ ಸಿನಿಮಾ “ದಿ ಸಪರೇಷನ್’ ಚಿತ್ರದಂತೆಯೇ ಇಲ್ಲೂ ನಿರೂಪಣೆ ಇರುತ್ತೆದೆ ಎನ್ನುವ ಅವರು, “ಒಂದು ಹೆಣ್ಣಿನ ಸುತ್ತ ನಡೆಯೋ ಕಥೆಯಾದ್ದರಿಂದ ಸಂಧ್ಯಾರಾಣಿ ಅವರಿಂದಲೇ ಸಂಭಾಷಣೆ ಬರೆಸುತ್ತಿದ್ದು, ನಾನು ಚಿತ್ರಕಥೆ, ನಿರ್ದೇಶನದ ಜವಾಬ್ದಾರಿ ಹೊತ್ತಿದ್ದೇನೆ. ಸಂಪತ್‌ಕುಮಾರ್ ನನ್ನೊಂದಿಗೆ ಕಥೆ ಬಗ್ಗೆ ಚರ್ಚಿಸಿದ್ದಾರೆ.
ಯಾವ ಜಾನರ್ ಸಿನಿಮಾ ಅಂತ ಹೇಳ್ಳೋಕೆ ಆಗಲ್ಲ. ಆದರೆ, “ಕ್ವೀನ್’, “ಪೀಕು’ ಚಿತ್ರದ ಶೇಡ್ ಇಲ್ಲಿ ಕಾಣಲಿದೆ. ಇನ್ನು, “ಹರಿವು’ ಚಿತ್ರಕ್ಕೆ ಛಾಯಾಗ್ರಾಹಕರ ಸಹಾಯಕರಾಗಿದ್ದ ಗುರು ಇಲ್ಲಿ ಕ್ಯಾಮೆರಾ ಹಿಡಿಯುತ್ತಿದ್ದಾರೆ. ರಘುದೀಕ್ಷಿತ್ ಅವರಿಂದ ಸಂಗೀತ ಮಾಡಿಸುವ ಯೋಚನೆ ಇದೆ. ಆ ಬಗ್ಗೆ ಇನ್ನಷ್ಟೇ ಮಾತುಕತೆ ನಡೆಸಬೇಕು. ನಾಗೇಂದ್ರ ಅವರು ಸಂಕಲನ ಮಾಡಲಿದ್ದಾರೆ. ಉಳಿದಂತೆ ಇಲ್ಲಿ “ಜಯಮ್ಮನ ಮಗ’ ನಿರ್ದೇಶಕ ವಿಕಾಸ್ ಮುಖ್ಯ ಪಾತ್ರ ಮಾಡುತ್ತಿದ್ದಾರೆ’ ಎಂದು ವಿವರ ಕೊಡುತ್ತಾರೆ ಮನ್ಸೋರೆ.