ಸಾಗರ: ರಾಜ್ಯ ಸರ್ಕಾರ ನಮ್ಮ ಜೊತೆ ಇದೆ. ಸಂಘ ಪರಿವಾರ ನಮ್ಮ ಬೆಂಬಲಕ್ಕಿದೆ. ಶಾಸಕರ ಕುಮ್ಮಕ್ಕಿನಿಂದ ನಡೆದಿರುವ ದೌರ್ಜನ್ಯಕ್ಕೆ ಹೆದರುವುದಿಲ್ಲ. ಶಾಸಕರ ವಿರುದ್ಧವಾಗಿಯೇ ನಿಲ್ಲುವೆ ಎಂದು ಶಿಮುಲ್ ಅಧ್ಯಕ್ಷ, ಎಂಡಿಎಫ್‌ನ ನಿಕಟಪೂರ್ವ ಉಪಾಧ್ಯಕ್ಷ ಹಾಗೂ ಪರ್ಯಾಯ ಸರ್ವಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಘೋಷಿಸಲ್ಪಟ್ಟ ಶ್ರೀಪಾದಹೆಗಡೆ ನಿಸರಾಣಿ ಸವಾಲಿನ ಧ್ವನಿಯಲ್ಲಿ ಘೋಷಿಸಿದರು.
ಎಲ್‌ಬಿ ಕಾಲೇಜಿನ ದೇವರಾಜ ಅರಸು ಕಲಾಭವನದಲ್ಲಿ ಗುರುವಾರ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಮಲೆನಾಡು ಅಭಿವೃದ್ಧಿ ಪ್ರತಿಷ್ಟಾನದ 56ನೇ ಸರ್ವಸದಸ್ಯರ ಸಭೆಯ ಹೈಡ್ರಾಮಾದ ನಂತರ ಪರ್ಯಾಯ ಸರ್ವಸದಸ್ಯರ ಸಭೆ ನಡೆಸಿದ ಅವರು, ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರ ಮಾತನಾಡಿ, ಇಂತಹ ದೌರ್ಜನ್ಯವನ್ನು ಸೊರಬದಲ್ಲಿ ನೋಡಿದ್ದೇನೆ. ಇದು ನನಗೇನೂ ಹೊಸದಲ್ಲ. ಸಾಗರ ತಾಲೂಕಿಗೆ ಇದು ಒಳ್ಳೆಯದಲ್ಲ. ದೌರ್ಜನ್ಯದ ಮೂಲಕ ಸಂಸ್ಥೆಯನ್ನು ಆಳಬಹುದು ಎಂದುಕೊಂಡಿದ್ದರೆ ಅದು ಅವರ ಕನಸು ಎಂದು ವ್ಯಂಗ್ಯವಾಡಿದರು.
ಪೊಲೀಸರು ರಕ್ಷಣೆ ಕೊಡಲು ವಿಫಲರಾಗಿದ್ದಾರೆ. ನನಗೆ, ನನ್ನ ಮಗಳು, ಮಗನ ಮೇಲೆ ಹಲ್ಲೆ ನಡೆದಿದೆ. ಈ ಎಲ್ಲ ಘಟನೆಗಳನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇನೆ. ಇದಕ್ಕೆ ತಕ್ಕ ಪಾಠ ಕಲಿಸಲಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಮುಂದಿನ ಕ್ರಮಗಳಿಗೆ ನಡೆಸುತ್ತೇನೆ. ತಾಲೂಕಿನ ಪ್ರತಿಯೊಂದು ಹಳ್ಳಿಗೆ ಮೈಕ್ ಹಾಕಿಕೊಂಡು ಹೋಗಿ ನಡೆದ ಘಟನೆಗಳನ್ನು ಹೇಳುತ್ತೇನೆ. ಹೆಚ್ಚೆಂದರೆ ನನ್ನ ಜೀವ ತೆಗೆಯಬಹುದು ಎಂತಾದರೆ ಅದಕ್ಕೂ ನಾನು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೈಕ್ ನಂಬರ್ ಪ್ಲೇಟ್‌ನಲ್ಲೇ ಹಾಸ್ಯ ಬರಹ: ಯುಪಿಯ ಮೂವರು ಜೈಲು ಪಾಲು!
ಸಂಸ್ಥೆಯ ಅಭಿವೃದ್ಧಿ ಸಹಿಸದ ಶಾಸಕ ಹಾಲಪ್ಪ ಹರತಾಳು ತನ್ನ ಬೆಂಬಲಿಗರ ಜೊತೆ ಬಂದು ದೌರ್ಜನ್ಯ ಎಸಗಿದ್ದಾರೆ. ನನ್ನ ಮೇಲೆ, ನನ್ನ ಪತ್ನಿ, ಮಗ, ಮಗಳ ಮೇಲೆ ಹಲ್ಲೆಗೆ ಶಾಸಕರ ಬೆಂಬಲಿಗರು ಪ್ರಯತ್ನಿಸಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ. ಸರ್ವಸದಸ್ಯರ ಸಭೆ ನಡೆಸದೆ ಅಧ್ಯಕ್ಷರ ನೇಮಕ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಇಂತಹ ದೌರ್ಜನ್ಯ ಸರಿಯಲ್ಲ. ಸರ್ಕಾರ ಶಾಸಕರ ಬಗ್ಗೆ ಕ್ರಮ ಜರುಗಿಸಬೇಕು. ಎಂಡಿಎಫ್‌ಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಹೊಸದಾಗಿ ಸರ್ವಸದಸ್ಯರ ಸಭೆ ನಡೆಸಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು. ಕಾರ್ಯದರ್ಶಿ ಜಗದೀಶ್ ಗೌಡ ಅವರು ಆಸ್ಪತ್ರೆ ಸೇರುವಂತಾಗಿದೆ. ಈಗ ನಡೆದಿರುವ ಹರನಾಥರಾವ್ ಆಯ್ಕೆ ಅಸಿಧು. ಚುನಾವಣೆಯ ಮೂಲಕ ನ್ಯಾಯ ದೊರಕಿಸಿಕೊಡಬೇಕು. ತಾಕತ್ತಿದ್ದರೆ ಪ್ರಜಾತಾಂತ್ರಿಕವಾಗಿ ಚುನಾವಣೆ ನಡೆಸಿ ನೂತನ ಅಧ್ಯಕ್ಷರ ಆಯ್ಕೆಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಪಾಲ್ಗೊಂಡ ಎಂಡಿಎಫ್ ಆಡಳಿತ ಮಂಡಳಿ ಸದಸ್ಯ, ಬಿಜೆಪಿ ಪ್ರಮುಖ ಯು.ಎಚ್.ರಾಮಪ್ಪ ಮಾತನಾಡಿ, ಸದಸ್ಯರಾಗದೆ ದೊಡ್ಡ ಮನುಷ್ಯರು ಎನ್ನಿಸಿಕೊಂಡವರೆಲ್ಲ ವೇದಿಕೆಯ ಮೇಲೆ ಓಡಾಡಿದರು. ಇದು ಕಾಲೇಜು, ಸಂಸ್ಥೆಯ ಪರಂಪರೆಗೆ ತಕ್ಕುದಲ್ಲ. ನಮ್ಮೂರಿನ ಸಂಸ್ಕೃತಿಗೆ ಈಗಿನ ಬೆಳವಣಿಗೆ ಗೌರವ ತರುವುದಿಲ್ಲ. ಅವರು ತಮ್ಮ ತಮ್ಮ ಯೋಜನೆಗಳನ್ನು ಜಾರಿ ಮಾಡಲು ಮನಬಂದಂತೆ ಪ್ರಕ್ರಿಯೆ ನಡೆಸಿದ್ದಾರೆ. ಇದು ಸಿಂಧು ಅಲ್ಲ ಎಂದು ಪ್ರತಿಪಾದಿಸಿದರು.
ಸಭೆಯ ಅಧ್ಯಕ್ಷತೆಯನ್ನು ದಳವಾಯಿ ದಾನಪ್ಪ ವಹಿಸಿದ್ದರು. ಆಡಳಿತ ಮಂಡಳಿಯ ಎ.ಆರ್.ಲಂಬೋದರ, ರಾಜಶೇಖರ ಹಂದಿಗೋಡು, ಈಳಿ ಶ್ರೀಧರ್, ಕಲ್ಸೆ ಶ್ರೀಧರ್, ಎಸ್.ಜಿ.ಶ್ಯಾನಭಾಗ್, ಗಿರೀಶ್ ಕೋವಿ, ಅಖಿಲೇಶ್ ಚಿಪ್ಳಿ ಮೊದಲಾದವರು ಪಾಲ್ಗೊಂಡಿದ್ದರು.