ಶೃಂಗೇರಿ: ಪ್ರತಿ ವರ್ಷ ಮಳೆಗಾಲ ಬಂತೆದರೆ ಈ ಭಾಗದ ಜನರಿಗೆ ಭಯ ಕಾಡುತ್ತದೆ. ತುಂಬಿಹರಿಯುವ ಹಳ್ಳ ದಾಟೋದು ಹೇಗೆ ಎಂಬ ಚಿಂತೆ ಕಾಡುತ್ತೆ. ಸೇತುವೆ ಇಲ್ಲದ ಕಾರಣ ಇಲ್ಲಿಯ ಜನರ ಗೋಳು ಹೇಳತೀರದಾಗಿದೆ.
ಇದು ತಾಲೂಕಿನ ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಕ್ರೆ ಹಳ್ಳದ ಕಥೆ-ವ್ಯಥೆ. ಕಿಕ್ರೆ ಮತ್ತಿತರ ಹಳ್ಳಿಗೆ ಸಂಪರ್ಕ ಕಲ್ಪಿಸುವ ಕಿಕ್ರೆ ಹಳ್ಳಕ್ಕೆ ಸೇತುವೆ ನಿರ್ಮಾಣ ಅನಿವಾರ್ಯ. ಇಲ್ಲವಾದಲ್ಲಿ ಸಂಪರ್ಕವೇ ಕಡಿತಗೊಳ್ಳಲಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಹಳ್ಳ ಉಕ್ಕಿ ಹರಿಯುತ್ತದೆ. ಇದಕ್ಕೆ ಸೇತುವೆ ನಿರ್ಮಿಸಬೇಕೆಂಬ ಎರಡು ದಶಕದ ಬೇಡಿಕೆಗೆ ಇಂದಿಗೂ ಸ್ಪಂದನೆ ಸಿಕ್ಕಿಲ್ಲ.
ಸಣ್ಣದಾದ ಕಿಕ್ರೆ ಹಳ್ಳ ಮಳೆಗಾಲದಲ್ಲಿ ಅಪಾರ ನೀರಿನೊಂದಿಗೆ ದೊಡ್ಡ ನದಿಯಂತೆ ಹರಿಯುತ್ತದೆ. ಹಿಂದೆ ನಿರ್ಮಾಣವಾಗಿರುವ ಕಿರು ಸೇತುವೆ ಅವೈಜ್ಞಾನಿಕವಾಗಿದ್ದು, ಇದರಿಂದ ಪ್ರತಿ ವರ್ಷ ಗ್ರಾಮಸ್ಥರು ಮಳೆಗಾಲದಲ್ಲಿ ಉಕ್ಕಿ ಹರಿಯುವ ಹಳ್ಳದಿಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಒಂದು ದಶಕದಿಂದ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸುತ್ತಿದ್ದರೂ, ಸೇತುವೆ ನಿರ್ಮಾಣ ಮಾತ್ರ ಆಗಿಲ್ಲ. ಕಿಕ್ರೆ, ಜೈನರಮಕ್ಕಿ, ಮೇಗಳಬೈಲು, ಕೆಳಕೊಡಿಗೆ, ಕೆಳಕೊಪ್ಪ, ಸಸಿಮನೆ, ಕಿಕ್ರೆ ಎಸ್ಟೇಟ್, ತುಮ್ಮನಿಜಡ್ಡು, ಹುರುಳಿಹಕ್ಲು ಸಹಿತ ಅನೇಕ ಹಳ್ಳಿಗಳ ಜನರು ಈ ಸೇತುವೆ ಮೇಲೆ ಸಂಚರಿಸುತ್ತಾರೆ. ದೊಡ್ಡದಾದ ಹಳ್ಳಕ್ಕೆ ಕಿರಿದಾದ ಪೈಪ್ ಅಳವಡಿಸಿರುವುದರಿಂದ ಮಳೆಗಾಲದಲ್ಲಿ ಉಕ್ಕಿ ಹರಿಯುತ್ತದೆ. ಸೇತುವೆಗೆ ಬಳಸಲಾಗಿರುವ ಪೈಪಿನಲ್ಲಿ ಕಸ-ಕಡ್ಡಿ ತುಂಬಿ ನೀರು ಉಕ್ಕಿ ಹರಿಯುತ್ತದೆ. ರಭಸವಾದ ನೀರು ಹರಿಯುವುದರಿಂದ ಕಸ-ಕಡ್ಡಿಯನ್ನು ಮಳೆಗಾಲದಲ್ಲಿ ತೆಗೆಯುವುದು ಅಸಾಧ್ಯ. ಶಾಲೆಗೆ ತೆರಳುವ ಮಕ್ಕಳು, ಆಸ್ಪತ್ರೆಗೆ ತೆರಳುವ ರೋಗಿಗಳು, ಪ್ರತಿ ದಿನ ಸಂಚರಿಸುವ ಸಾರ್ವಜನಿಕರು ಮಳೆಗಾಲದಲ್ಲಿ ಪ್ರವಾಹ ಬಂತೆಂದರೆ ಗ್ರಾಮದಿಂದ ಬೇರೆಕಡೆ ತೆರಳಲು ಸಾಧ್ಯವಾಗುವುದಿಲ್ಲ. ಸಂಜೆ ವೇಳೆಗೆ ಪ್ರವಾಹ ಉಂಟಾದರೆ ಮನೆಗೆ ತಲುಪಲು ಸಾಧ್ಯವಾಗುವುದೇ ಇಲ್ಲ. ಇದು ಒಂದೆರೆಡು ವರ್ಷದ ಸಮಸ್ಯೆಯಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಹಳ್ಳದ ಸಮಸ್ಯೆಯಿಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಸೇತುವೆ ಎತ್ತರಿಸಿ ಹಳ್ಳದ ಪಕ್ಕದಲ್ಲಿರುವ ರಸ್ತೆಯನ್ನು ಏರಿಸಿದರೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ. ಸೇತುವೆಯ ಕಲ್ಲುಗಳು ಕಿತ್ತು ಹೋಗಿ, ಸೇತುವೆಯೂ ಹಾನಿಗೊಂಡಿದೆ.
ಪ್ರವಾಹ ಉಂಟಾದಾಗ ನೀರಿನ ಸೆಳೆತ ಅರಿಯದವಿದ್ಯಾರ್ಥಿಗಳು, ಸಾರ್ವಜನಿಕರು ಮನೆ ಸೇರುವತವಕದಲ್ಲಿ ಹಳ್ಳ ದಾಟುವ ಭಂಡ ಧೈರ್ಯ ಮಾಡು ತ್ತಾರೆ. ತಿಳಿಯದೇ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಸರ್ಕಾರ ಅನುದಾನ ನೀಡಿ ಸಂಭವ ನೀಯ ಅನಾಹುತಗಳನ್ನು ತಪ್ಪಿಸಬಹುದಾಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಹಳ್ಳ ಉಕ್ಕಿ ಹರಿದು ನಮಗೆ ತೀವ್ರ ಸಮಸ್ಯೆಯಾಗುತ್ತಿದೆ. ಹೊಸ ಸೇತುವೆ ಭರವಸೆ ದೊರೆತಿದೆ. ಆದರೆ, ಈ ವರ್ಷವೂ ನಿರ್ಮಾಣವಾಗಿಲ್ಲ. ಹತ್ತಾರು ಹಳ್ಳಿಗೆ ಅಗತ್ಯವಿರುವ ಸೇತುವೆಯನ್ನು ಕೂಡಲೇ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಕಲ್ಪಿಸಬೇಕು.
•ಮೇಗಳಬೈಲು ಚಂದ್ರಶೇಖರ್,
ಕಿಕ್ರೆ ಗ್ರಾಮ