ರಮೇಶ ಕರುವಾನೆ
ಶೃಂಗೇರಿ: ಸತತ ಮಳೆಯಿಂದ ಮಲೆನಾಡಿನ ಪರ್ಯಾಯ ಉದ್ಯಮವಾದ ಪ್ರವಾಸೋದ್ಯಮಕ್ಕೂ ತೀವ್ರ ಹಿನ್ನಡೆಯಾಗಿದ್ದು, ವ್ಯಾಪಾರ, ವ್ಯವಹಾರದ ಮೇಲೆ ತೀವೃ ಪರಿಣಾಮ ಬೀರಿದೆ.
ಪ್ರತಿ ವರ್ಷ ಆಗಮಿಸುತ್ತಿದ್ದ ಪ್ರವಾಸಿಗರ ಸಂಖ್ಯೆ ಗಣನೀಯ ಕುಸಿತವಾಗಿದ್ದು, ಸಂಚಾರ, ಸಂಪರ್ಕದ ಭೀತಿಯಲ್ಲಿ ಜನ ಪ್ರವಾಸವನ್ನೇ ಮುಂದೂಡುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷದ ಮಳೆ ಮಲೆನಾಡು ಭಾಗಕ್ಕೆ ಹೆಚ್ಚು ಹಾನಿ ತಂದೊಡ್ಡಿದ್ದು, ಲಕ್ಷಾಂತರ ರೂ. ನಷ್ಟವಾಗಿರುವುದಲ್ಲದೇ ಪ್ರವಾಸೋದ್ಯಮ ಕ್ಷೇತ್ರಕ್ಕೂ ಪೆಟ್ಟು ನೀಡಿದೆ.
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಶಾರದಾ ಪೀಠ ರಾಜ್ಯದ ಪ್ರಮುಖ ಪ್ರವಾಸಿತಾಣವೂ ಹೌದು. ಪ್ರವಾಸಿಗರು, ಭಕ್ತಾದಿಗಳು ಇಲ್ಲಿ ಪ್ರತಿದಿನ ಆಗಮಿಸುತ್ತಾರೆ. ಬೆಂಗಳೂರು, ಮೈಸೂರು ಭಾಗದ ನಗರವಾಸಿಗಳು ಶನಿವಾರ, ಭಾನುವಾರದ ರಜೆಯೊಂದಿಗೆ ಒಂದು ಹೆಚ್ಚುವರಿ ರಜೆ ದೊರಕಿದರೂ ಬೇಲೂರು, ಹಳೆಬೀಡು, ಹೊರನಾಡು, ಶೃಂಗೇರಿಯ ಪ್ರವಾಸಕ್ಕೆ ಆಗಮಿಸುತ್ತಾರೆ. ನಂತರ ಧರ್ಮಸ್ಥಳ, ಸುಬ್ರಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಮರಳುತ್ತಾರೆ. ಶೃಂಗೇರಿ, ಹೊರನಾಡಿನಲ್ಲಿ ಇತ್ತೀಚಿನ ವರ್ಷದಲ್ಲಿ ವಾಸ್ತವ್ಯ ಹಾಗೂ ಊಟೋಪಚಾರದ ವ್ಯವಸ್ಥೆಯು ಅಚ್ಚುಕಟ್ಟಾಗಿದ್ದು, ಇದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಅಲ್ಲದೆ ಶಾರದಾ ಪೀಠದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರೆ ಮಕ್ಕಳಿಗೆ ಒಳಿತಾಗಲಿದೆ ಎಂಬ ನಂಬಿಕೆಯಲ್ಲಿ ಅಕ್ಷರಭ್ಯಾಸ ಮಾಡಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರವಾಸದ ಉದ್ದೇಶದಲ್ಲಿ ಇದು ಸೇರ್ಪಡೆಯಾಗಿದ್ದು, ದೇವಿ ದರ್ಶನ, ಜಗದ್ಗುರುಗಳ ಆಶೀರ್ವಾದ ಜತೆಗೆ ಅಕ್ಷರಭ್ಯಾಸಕ್ಕಾಗಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಿತ್ತು. ನಗರದ ಜಂಜಾಟ, ಒತ್ತಡದ ಜೀವನದಿಂದ ಹೊರ ಬರಲು ಪ್ರಕೃತಿ, ನದಿ ದಡದಲ್ಲಿ ಕಾಲಕಳೆಯಬೇಕೆನ್ನುವವರು ಮಲೆನಾಡಿಗೆ ಆಗಮಿಸುತ್ತಿದ್ದರು. ಆದರೆ ಈ ಬಾರಿಯ ಅತಿವೃಷ್ಟಿ ಮಲೆನಾಡಿನ ಚಿತ್ರಣವನ್ನೇ ಬದಲಿಸಿದ್ದು ಪ್ರವಾಸಿಗರು ಇತ್ತ ಸುಳಿಯದಂತೆ ಮಾಡಿದೆ.
ಸಂಚಾರ ಅವ್ಯವಸ್ಥೆ: ಮಲೆನಾಡಿನಲ್ಲಿ ಮಳೆ ಅರ್ಭಟದೊಂದಿಗೆ ಈ ವರ್ಷ ಪ್ರವಾಹ ತಂದ ಸಂಕಷ್ಟ, ಭೂಕುಸಿತದಿಂದ ಆಗಾಗ್ಗೆ ರಸ್ತೆ ಸಂಪರ್ಕ ಕಡಿತವಾಗುತ್ತಲೇ ಇದೆ. ಆದರೆ ಅಗತ್ಯಕ್ಕಿಂತ ಹೆಚ್ಚು ವರ್ಣ ರಂಜಿತವಾಗಿ ದೃಶ್ಯ ಮಾಧ್ಯಮಗಳು ಮಲೆನಾಡಿನ ಚಿತ್ರಣ ಬಿಂಬಿಸುತ್ತಿರುವುದರಿಂದ ಪ್ರವಾಸಿಗರು ಮಲೆನಾಡಿಗೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅನೇಕ ಘಾಟಿಗಳಲ್ಲಿ ಸಂಚಾರ ನಿರ್ಬಂಧವನ್ನು ಸರಕಾರವೇ ಮಾಡಿದ್ದು, ಪ್ರವಾಸಕ್ಕೆ ತೆರಳಿ ಸಮಸ್ಯೆ ಉಂಟಾಗುವುದಕ್ಕಿಂತ ಪ್ರವಾಸವನ್ನೇ ಮುಂದೂಡುವ ನಿರ್ಧಾರಕ್ಕೆ ಬಂದಿದ್ದಾರೆ.
ಶಾರದಾ ಪೀಠದ ಜಗದ್ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮಿಗಳು ಶೃಂಗೇರಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದು, ವ್ರತ ಸಂದರ್ಭದಲ್ಲಿ ಸಾಕಷ್ಟು ಭಕ್ತರು ಆಗಮಿಸುತ್ತಿದ್ದರು. ಈ ವರ್ಷದ ಅತಿವೃಷ್ಟಿಯಿಂದ ರಸ್ತೆ ಸಂಪರ್ಕ ಕಡಿತವಾಗುವ ಭೀತಿಯಲ್ಲಿ ಭಕ್ತಾದಿಗಳ ಸಂಖ್ಯೆ ಕುಸಿತವಾಗಿದೆ.
ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ವಸತಿಗೃಹ, ಅಂಗಡಿ, ಹೋಂಸ್ಟೇಗಳು, ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ವ್ಯವಹಾರವಿಲ್ಲದೇ ದಿನ ಕಳೆಯುವಂತಾಗಿದೆ.
ನಾವು ಶೃಂಗೇರಿಗೆ ಬರುವ ಮುನ್ನ ನಮ್ಮಲ್ಲಿಯೂ ಆತಂಕವಿತ್ತು. ಶಾರದಾ ಮಠದೊಳಕ್ಕೆ ನದಿಯ ನೀರು ಬಂದ ಸುದ್ದಿ ಬಂದಿತ್ತು. ತುಂಗಾ, ಭದ್ರಾ ನದಿಯ ಪ್ರವಾಹಕ್ಕೆ ಸಂಚಾರ ನಿಲುಗಡೆಯಾಗಿದೆ. ಭೂಕುಸಿತದಿಂದ ರಸ್ತೆ ಸಂಚಾರ ಸ್ತಬ್ಧವಾಗಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ನಾವು ಬರಲು ಹಿಂದೇಟು ಹಾಕಿದ್ದೆವು. ಆದರೆ ಇಲ್ಲಿ ಮಳೆ ಇದ್ದರೂ ಸಂಪರ್ಕ ರಸ್ತೆ ಉತ್ತಮವಾಗಿದೆ. ಪ್ರವಾಸಿಗರಿಗೆ ತೊಂದರೆ ಇಲ್ಲ. ರಾತ್ರಿ ಪ್ರಯಾಣ ಒಳ್ಳೆಯದಲ್ಲ. •
ರಾಜಶೇಖರ್,ಬೆಂಗಳೂರು.
ಕಳೆದ ಒಂದು ತಿಂಗಳಿನಿಂದ ಶೃಂಗೇರಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ತೀವ್ರ ಕುಸಿತವಾಗಿದೆ. ಇದರಿಂದ ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿರುವ ಜನರಿಗೆ ತೀವ್ರ ತೊಂದರೆಯಾಗಿದೆ. ಶೃಂಗೇರಿ ಸಂಪರ್ಕಿಸುವ ರಸ್ತೆ ಸಮರ್ಪಕವಾಗಿದ್ದರೂ, ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಿದ್ದಾರೆ.
•
ಎಚ್.ಎಸ್. ನಟೇಶ್,
ವಸತಿ ಗೃಹ ಮಾಲೀಕ, ಶೃಂಗೇರಿ.