ಶೃಂಗೇರಿ: ಪಟ್ಟಣದ ಗೌರಿಶಂಕರ್ ಸಭಾಂಗಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸ್ಥಾಪಿಸಿದ್ದ ಗಣಪತಿಯನ್ನು ಶ್ರದ್ಧಾ-ಭಕ್ತಿಯಿಂದ ತುಂಗಾ ನದಿಯಲ್ಲಿ ವಿಸರ್ಜಿಸಲಾಯಿತು.
ಸಾರ್ವಜನಿಕ ಗಣೇಶೋತ್ಸವದ 60ನೇ ವರ್ಷದ ಪ್ರಯುಕ್ತ ಈ ಬಾರಿ 15 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಭಾನುವಾರ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿ, ಭಕ್ತರಿಗೆ ಆಶೀರ್ವಚನ ನೀಡಿದ್ದರು. ಇದಲ್ಲದೇ, ಪ್ರತಿ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರತಿ ದಿನ ಕಲ್ಪೋಕ್ತ ಪೂಜೆ, ಮಹಾಮಂಗಳಾರತಿ, ರಾತ್ರಿ ರಂಗ ಪೂಜೆ ಹಾಗೂ ಸೆ.13ರಂದು ಗಣಹೋಮ ಮತ್ತು ಏಕನಾರಿಕೇಳ ಗಣಹೋಮ ನಡೆಸಲಾಗಿತ್ತು.
ಶ್ರೀ ಮಹಾಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಪಟ್ಟಣದ ರಾಜ ಬೀದಿಗಳಲ್ಲಿ ನಡೆದ ಉತ್ಸವದ ಮೆರವಣಿಗೆಗೆ ಆಟೋ ಚಾಲಕರ ಸಂಘದ ಅಧ್ಯಕ್ಷ ಗುರುರಾಜ್ ಚಾಲನೆ ನೀಡಿದರು. ಉತ್ಸವದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿಯ ಸೃಷ್ಟಿ ಆರ್ಟ್ಸ್ನ ಕೀಲುಕುದುರೆ ಮತ್ತು ಗೊಂಬೆ ಬಳಗದ ನೃತ್ಯ ಪ್ರದರ್ಶನ ಮೆರವಣಿಗೆಗೆ ರಂಗು ಮೂಡಿಸಿತ್ತು. ಮೆರವಣಿಗೆ ಅಂಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿಗ್ರಹವನ್ನು ಹರೀಶ್ ಡೋಂಗ್ರೆ ತಂಡ ನಿರ್ಮಾಣ ಮಾಡಿತ್ತು.
ಸಮಿತಿ ಅಧ್ಯಕ್ಷ ಬಿ.ಶಿವಶಂಕರ್, ಸದಸ್ಯರಾದ ಟಿ.ಕೆ.ಪರಾಶರ, ಹರೀಶ್ ಶೆಟ್ಟಿ, ವೇಣುಗೋಪಾಲ್, ಶೃಂಗೇರಿ ಸುಬ್ಬಣ್ಣ, ಸುಬ್ರಹ್ಮಣ್ಯ ಆಚಾರ್ಯ, ವಿಜೇಶ್ ಕಾಮತ್, ಲತಾಗುರುದತ್ತ, ಎಂ.ಎಲ್.ಪ್ರಕಾಶ್, ಕುಮಾರ್, ರೂಪಾ ಮುರುಳೀಧರ ಪೈ, ರವೀಂದ್ರ ಮತ್ತಿತರರು ಹಾಜರಿದ್ದರು.