ಶೃಂಗೇರಿ: ಹೊಸ ಹೊಸ ಲೇಖಕರನ್ನು ಪರಿಚಯಿಸುವ ಜವಾಬ್ದಾರಿ ಕಸಾಪದ್ದಾಗಿದ್ದು, ಲೇಖಕರ ಮೂಲಕ ಹೊಸ ಪುಸ್ತಕ ಬಿಡುಗಡೆಗೊಳಿಸಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಹೇಳಿದರು.
ಪಟ್ಟಣಕ್ಕೆ ಸಮೀಪದ ವಿದ್ಯಾನಗರದಲ್ಲಿರುವ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಸೇವಾದೀಕ್ಷೆ, ದತ್ತಿ ಉಪನ್ಯಾಸ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನೂತನ ಪದಾಧಿ ಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕನ್ನಡ ಭಾಷೆಯೆ ಏಳ್ಗೆಗೆ ವರ್ಷವಿಡೀ ಕಾರ್ಯಕ್ರಮ ರೂಪಿಸಬೇಕು. ಜಿಲ್ಲೆಯಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ಕೊಡಬೇಕು ಎಂಬ ದೃಷ್ಟಿಯಲ್ಲಿ ಇಲ್ಲಿ ಮಹಿಳಾ ಅಧ್ಯಕ್ಷರು ಕಳೆದ ಮೂರು ವರ್ಷದಲ್ಲಿ ಸಾಹಿತ್ಯ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು.
ಡಾ.ಹುಲ್ಸೆ ಮಂಜಪ್ಪಗೌಡ ದತ್ತಿ ನಿಧಿಯ ಕುವೆಂಪು ಸಾಹಿತ್ಯದಲ್ಲಿ ರಾಮಾಯಣ ದರ್ಶನಂ, ಮಲೆನಾಡು ವೈಚಾರಿಕತೆ ಮತ್ತು ಅಧ್ಯಾತ್ಮ ಎಂಬ ವಿಷಯವಾಗಿ ತೀರ್ಥಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಯಶೀಲ ಮಾತನಾಡಿ, ಮಲೆನಾಡಿನಲ್ಲಿ ಶಿಕ್ಷಣಕ್ಕೆ ಹಿಂದಿನಿಂದಲೂ ಮಹತ್ವ ನೀಡುತ್ತಿದ್ದಾರೆ. 60ರ ದಶಕದಲ್ಲಿಯೇ ಇಲ್ಲಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣದಿಂದ ಸಾಕಷ್ಟು ಜನರಿಗೆ ಉದ್ಯೋಗವಕಾಶ ದೊರಕಿದೆ. ಶ್ರೀ ಶಾರದಾ ಪೀಠವು ಅಧ್ಯಾತ್ಮಕ್ಕೆ ಹೆಸರುವಾಸಿಯಾಗಿದೆ. ಕುವೆಂಪು ರಾಮಾಯಣ ದರ್ಶನಂನಲ್ಲಿ ಮಲೆನಾಡಿನ ಚಿತ್ರಣವನ್ನು ಕುವೆಂಪು ಎಳೆ ಎಳೆಯಾಗಿ ಬಿಡಿಸಲಾಗಿದೆ ಎಂದರು.
ನೂತನ ಅಧ್ಯಕ್ಷರಾಗಿ ಡಾ.ಶ್ರೀಮಂದರ ಮತ್ತು ತಂಡ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಅನಾತಾ ಹೆಗ್ಗೋಡುರವರ ಪುಸ್ತಕ ಕೆಂಡ ಕೊಂಡಕೆ ನಾನು ಋಣವಾದೆ ಎಂಬ ಪುಸ್ತಕವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಕಾಶರಾವ್ ಬಿಡುಗಡೆಗೊಳಿಸಿದರು. ಕಸಾಪ ಅಧ್ಯಕ್ಷೆ ಪೂರ್ಣಿಮಾ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಬಿ.ಶಿವಶಂಕರ್, ತಾಪಂ ಸದಸ್ಯ ಕೆ.ಎಸ್.ರಮೇಶ್, ಶಿಲ್ಪಾ, ಬಿಇಒ ದಯಾವತಿ, ಕಸಾಪ ಪದಾ ಧಿಕಾರಿಗಳಾದ ಅಂಗುರ್ಡಿ ದಿನೇಶ್, ಮಂಜುನಾಥಗೌಡ,ಬೇಗಾನೆ ವಿವೇಕ್, ಶ್ರೀನಿವಾಸ್
ಮತ್ತಿತರರು ಇದ್ದರು.