Advertisement

ವರ್ಷಧಾರೆಗೆ ಅಡಕೆ ಬೆಳೆಗಾರ ಅತಂತ್ರ!

03:08 PM Oct 30, 2019 | Naveen |

ರಮೇಶ್‌ ಕರುವಾನೆ
ಶೃಂಗೇರಿ: ಅಕ್ಟೋಬರ್‌ ತಿಂಗಳಾಂತ್ಯದಲ್ಲೂ ಸುರಿಯುತ್ತಿರುವ ಮಳೆಯ ಹೊಡೆತಕ್ಕೆ ನಲುಗಿರುವ ಅಡಕೆ ಬೆಳೆಗಾರರು, ಇರುವಷ್ಟು ಅಡಕೆಯನ್ನು ಸಂಸ್ಕರಣೆ ಮಾಡಲು ಹೋರಾಟ ನಡೆಸಬೇಕಾಗಿದೆ. ಅಡಕೆಗೆ ತಗುಲಿರುವ ನಾನಾ ರೋಗಗಳು ಹಾಗೂ ಮಳೆಯ ಕಾಟದಿಂದ ರೈತರು ಹೈರಾಣಾಗಿದ್ದಾರೆ. ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಕಳೆದ ಆರೇಳು ದಶಕದಿಂದ ಹಳದಿ ಎಲೆ ರೋಗ ಮತ್ತಿತರ ರೋಗದಿಂದ ಬೆಳೆ ಅವನತಿ ಹಾದಿ ಹಿಡಿಯುತ್ತಿದ್ದು, ರೈತರು ಬದಲಿ ಬೆಳೆಯ ಹುಡಕಾಟದಲ್ಲಿದ್ದಾರೆ.

Advertisement

ತಾಲೂಕಿನಲ್ಲಿ 2600 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಅಡಕೆ ಬೆಳೆಯುತ್ತಿದ್ದರೂ, ಶೇ.60 ರಷ್ಟು ಭಾಗ ರೋಗ ಪೀಡಿತವಾಗಿ, ಅನೇಕ ತೋಟದಲ್ಲಿ ಅಡಕೆ ಮರವೇ ಇಲ್ಲವಾಗಿದೆ. ದೀರ್ಘಾವಧಿ  ಬೆಳೆಯಾದ ಅಡಕೆ ಮಲೆನಾಡಿನಲ್ಲಿ ಪರಂಪರಾಗತವಾಗಿ ಬೆಳೆದುಕೊಂಡು ಬಂದಿದೆ. ಅಧಿಕ ಮಳೆಯಾಗುವ ಪ್ರದೇಶವಾಗಿರುವುದರಿಂದ ಕೊಳೆ ರೋಗವೂ ಅಧಿಕ ಮಳೆಯಾದ ವರ್ಷ ತೋಟಗಳಿಗೆ ತೊಂದರೆ ಉಂಟು ಮಾಡುತ್ತಿದೆ. ಹಳದಿ ಎಲೆ ರೋಗ ಅಡಕೆ ಮರವನ್ನೇ ಕ್ಯಾನ್ಸರ್‌ ರೀತಿಯಲ್ಲಿ ಭಾದಿಸುತ್ತಿದ್ದು, ನಿಧಾನವಾಗಿ ಮರವನ್ನೇ ಸಾಯಿಸುತ್ತದೆ. ಇದರಿಂದ ತಾಲೂಕಿನಲ್ಲಿ ಹೆಚ್ಚಾಗಿರುವ ಮಧ್ಯಮ ವರ್ಗದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ಅಡಕೆ ಬೆಳೆಯ ಪ್ರಮುಖ ಸಮಸ್ಯೆ: ಗುಣಪಡಿಸಲಾಗದ ಹಳದಿ ಎಲೆ ರೋಗ, ಕೊಳೆ ರೋಗ, ಸುಳಿ ಕೊಳೆಯುವುದು ಸೇರಿದಂತೆ ವಿವಿಧ ರೋಗದಿಂದ ಅಡಕೆ ಬೆಳೆ ನಷ್ಟವಾಗುತ್ತಿದೆ. ಒಂದು ಎಕರೆ ಅಡಕೆ ಬೆಳೆಯುವ ರೈತರು ನೆಮ್ಮದಿಯ ಬದುಕು ನಡೆಸುತ್ತಿದ್ದರು. ರೋಗ ಕಾಣಿಸಿಕೊಂಡ ನಂತರ ಇಳುವರಿ ಕುಸಿತದಿಂದ ತೋಟವನ್ನು ನಿರ್ವಹಣೆ ಮಾಡಲಾಗದೇ, ಹಳ್ಳಿ ಬಿಟ್ಟು ನಗರವನ್ನು ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ರೋಗಪೀಡಿತ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುವುದಕ್ಕೂ ಹಿಂದೇಟು ಹಾಕುತ್ತಿದ್ದು, ನಿರ್ವಹಣೆ ಖರ್ಚು ಹೆಚ್ಚಾಗುತ್ತಿದೆ. ಬದಲಿ ಬೆಳೆಗಳ ಪರಿಚಯವಾದರೂ ಮಲೆನಾಡಿಗೆ ಕಾಫಿ, ಕಾಳು ಮೆಣಸು ಹೊರತುಪಡಿಸಿ ಉಳಿದ ಬೆಳೆ ಬೆಳೆಯಲಾಗುತ್ತಿಲ್ಲ.

ಕಾಫಿ, ಕಾಳುಮೆಣಸು ಬೆಲೆ ಕುಸಿತದಿಂದ ರೈತರಿಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದೆ. ಅಡಕೆಗೆ ರೋಗ ಬಂದ ನಂತರ ಕೊಳೆ ರೋಗ ಔಷಧಿ ಸಿಂಪಡಣೆಯಿಂದ ಎಲ್ಲಾ ಕೆಲಸಕ್ಕೂ ಕೂಲಿಯಾಳುಗಳು ಕೆಲಸ ಮಾಡಲು
ಅಧಿಕ ಕೂಲಿ ಕೇಳುತ್ತಾರೆ. ಇದರಿಂದ ಕ್ರಮೇಣ ಕೊಳೆ ಔಷಧಿ ಸಿಂಪಡಣೆ ಮಾಡಲಾಗದೇ ಇದ್ದ ಬೆಳೆಯನ್ನು ಕಳೆದುಕೊಳ್ಳುವಂತಾಗುತ್ತದೆ.

ಜಮೀನು ತೊರೆದ ರೈತರು: ಅಡಕೆ ರೋಗ ವ್ಯಾಪಕವಾಗಿ ಹರಡುತ್ತಿದ್ದಂತೆ ಸಣ್ಣ ಮತ್ತು ಮಧ್ಯಮ ರೈತರ ಮಕ್ಕಳು ಬದಲಿ ಉದ್ಯೋಗ ಹುಡುಕಾಟದಲ್ಲಿ ಬಹುತೇಕ ಯುವ ಜನಾಂಗ ನಗರ ಸೇರಿದರು. ಮನೆಯಲ್ಲಿದ್ದ ಪೋಷಕರು ತೋಟವನ್ನು ನಿರ್ವಹಣೆ ಮಾಡಲಾಗದೇ, ಮಾರಲೂ ಆಗದೇ ಮನೆ, ಜಮೀನು ಬಿಟ್ಟು ನಗರ ಸೇರಿರುವ ಹತ್ತಾರು ಉದಾಹರಣೆಗಳು ತಾಲೂಕಿನಲ್ಲಿವೆ.

Advertisement

ಶಾಶ್ವತ ಪರಿಹಾರ ಅಗತ್ಯ: ರೋಗಪೀಡಿತ ಅಡಕೆ ತೋಟಕ್ಕೆ ಶಾಶ್ವತ ಪರಿಹಾರ ಅಗತ್ಯವಿದ್ದು, ಸಂಶೋಧನೆಗಳು ಇನ್ನೂ ಪರಿಣಾಮಕಾರಿಯಾಗಿ ನಡೆಯಬೇಕಿದೆ. ರೋಗವಿರುವ ಸ್ಥಳದಲ್ಲಿ ಸಂಶೋಧನಾ ಕೇಂದ್ರ ಆಗಬೇಕೆಂಬ ಒತ್ತಾಯದಿಂದ ಶೃಂಗೇರಿಯಲ್ಲೂ ಅಡಕೆ ಸಂಶೋಧನಾ ಕೇಂದ್ರವನ್ನು ಆರಂಭಿಸಲಾಯಿತು. ಅಂದಾಜು 3 ಕೋಟಿ ರೂ. ವೆಚ್ಚದ ಸಂಶೋಧನಾ ಕೇಂದ್ರ ಆರಂಭವಾದರೂ, ವಿಜ್ಞಾನಿಗಳ ಕೊರತೆ, ಅನುದಾನದ ಕೊರತೆಯಿಂದ ಸಂಶೋಧನಾ ಕೇಂದ್ರದಿಂದ ರೈತರಿಗೆ ಪರಿಹಾರ ಮಾತ್ರ ದೊರೆತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next