ಕದ್ರಿಯ ಗೋಪಾಲಕೃಷ್ಣ ಮಠದಲ್ಲಿ ಶೀಲಾ ನಾಯ್ಡು ಮತ್ತು ಬಳಗದವರು ನಡೆಸಿಕೊಟ್ಟ “ಶ್ರೀಕೃಷ್ಣ ಗಾರುಡಿ’ ಹರಿಕತೆ ಶ್ರವಣಾಮೃತವಾಗಿ ಮೂಡಿಬಂತು.
ಒಳ್ಳೆಯ ರಂಗ ಭಾವ, ತಾಳಗಳಿಂದ ಭಾವಪ್ರದವಾಗಿ ಶೀಲಾ ನಾಯ್ಡು ಅವರು ಕಥಾ ಕೀರ್ತನವನ್ನು ನಡೆಸಿಕೊಟ್ಟರು.ಕೇಳುಗರಿಗೆ ಹಿತವಾಗುವಂತೆ ಪ್ರವಚನದ ರೀತಿಯಲ್ಲಿ ಕಥೆಯನ್ನು ಹರಿದಾಸರು ವಿವರಿಸಿದ್ದು ಅಭಿನಂದನಾರ್ಹ.
ಮಹಾಭಾರತದ ಕುರುಕ್ಷೇತ್ರ ಯುದ್ದೋತ್ತರದಲ್ಲಿ ಭೀಮಾರ್ಜುನರಲ್ಲಿ ಮೂಡಿದ್ದ ಅಹಂಕಾರವನ್ನು ತೊಲಗಿಸಲು ಶ್ರೀಕೃಷ್ಣ ಮಾಡಿದ ಕಾರ್ಯಗಳನ್ನು ಶ್ರೀಕೃಷ್ಣ ಗಾರುಡಿ ಕಥಾ ಕಾಲಕ್ಷೇಪ ಸಮಯ ಸಾರ್ಥಕಗೊಳಿಸಿ ರಂಜಿಸಿತು.
ಅಗ್ರಮಾನ್ಯ ಹರಿದಾಸರಲ್ಲಿ ಒಬ್ಬರಾದ ಗುರುರಾಜ ನಾಯ್ಡು ಅವರ ಪುತ್ರಿ ಶೀಲಾ ನಾಯ್ಡು ಅವರ ಹರಿಕಥೆ ಜ್ಞಾನದಾಯಕವಾದ ಪೌರಾಣಿಕ ಅಂತಃಸತ್ವವನ್ನು ತಿಳಿಸಿದ ಶ್ರವಣಾಮೃತವಾಗಿ ಮೂಡಿಬಂತು. ಸಾರಬದ್ಧವಾದ ನೈತಿಕ ಮೌಲ್ಯವನ್ನು ಸುಂದರವಾಗಿ ಸಾದರಪಡಿಸಿದ ಉತ್ತಮ ಹರಿಕಥೆ ಇದಾಗಿತ್ತು.
ಶೀಲಾ ನಾಯ್ಡು ಅವರು ಅರ್ಥಪೂರ್ಣ ವಿನೋದಗಳನ್ನು ಹರಿಕಥೆಯಲ್ಲಿ ಪ್ರಕಟಿಸಿ ಶ್ರೋತೃಗಳ ಮನ ಗೆದ್ದರು.ಉತ್ತಮ ಹಿಮ್ಮೇಳವೂ ನೆರವು ನೀಡಿತು.ಸುಧಾಕರ ರಾವ್ ಪೇಜಾವರ ಅವರ ಉತ್ತಮ ನಿರೂಪಣೆ ಹರಿಕತೆಗೆ ಸಹಕಾರ ಒದಗಿಸಿತು.
ಎಲ್.ಎನ್.ಭಟ್ ಮಳಿ