ಬಾಗಲಕೋಟೆ: ಜಮಖಂಡಿ ಉಪ ಚುನಾವಣೆಯಲ್ಲಿ ಗೌಡ್ರು- ಕುಲಕರ್ಣಿ ಅವರ ನಡುವಿನ ಕಾದಾಟ ಜೋರಾಗಿದೆ. ಇಬ್ಬರ ಮಧ್ಯೆ ಗೆಲ್ಲೋದ್ಯಾರು ಎಂಬ ಚರ್ಚೆ ನಡೆಯುತ್ತಿದೆ.
ಉತ್ತರ ಕರ್ನಾಟಕ ಭಾಷೆಯಲ್ಲಿ ಜಮಖಂಡಿ ಉಪ ಚುನಾವಣೆಯನ್ನು ಗೌಡ್ರು- ಕುಲಕರ್ಣಿಯವರ ಕಾದಾಟ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ದಿ| ಸಿದ್ದು ನ್ಯಾಮಗೌಡರ ಪುತ್ರ ಆನಂದ ನ್ಯಾಮಗೌಡ ಅವರಿಗೆ ಸಣ್ಣ ಗೌಡ್ರು ಎಂದು ಕರೆಯುತ್ತಿದ್ದು, ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಅವರಿಗೆ ಬ್ರಿಟಿಷರ ಕಾಲದಿಂದ ಕಂದಾಯ ದಾಖಲೆ ಬರೆಯುತ್ತಿದ್ದ ಕುಲಕರ್ಣಿಗಳಿಗೆ ಹೋಲಿಸಲಾಗುತ್ತಿದೆ. ಹೀಗಾಗಿ ಗೌಡ್ರು-ಕುಲಕರ್ಣಿ ಮಧ್ಯೆ ಯಾರು ಗೆಲ್ಲುತ್ತಾರೆಂಬ ಕುತೂಹಲ ಮೂಡಿದೆ.
ಜಮಖಂಡಿ ಉಪ ಚುನಾವಣೆ ಈಗ ಪ್ರತಿಷ್ಠೆಯ ಕಣವಾಗಿದೆ. ಒಟ್ಟು ಏಳು ಜನ ಕಣದಲ್ಲಿದ್ದು, ಬಿಜೆಪಿಯಿಂದ ಶ್ರೀಕಾಂತ ಕುಲಕರ್ಣಿ ಹಾಗೂ ಕಾಂಗ್ರೆಸ್-ಜೆಡಿಎಸ್ ಬೆಂಬಲಿತರಾಗಿ ಕಾಂಗ್ರೆಸ್‌ನ ಆನಂದ ಸಿದ್ದು ನ್ಯಾಮಗೌಡ ತೀವ್ರ ಪೈಪೋಟಿಯಲ್ಲಿದ್ದಾರೆ. ಇವರೊಂದಿಗೆ ಪ್ರಜಾ ಪರಿವರ್ತನೆ ಪಾರ್ಟಿಯ ಪರಶುರಾಮ ಮಹಾರಾಜನವರ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಯಮನಪ್ಪ ಗುಣದಾಳ, ಪಕ್ಷೇತರರಾಗಿ ಬೆಂಗಳೂರಿನ ಸಾಮಾಜಿಕ ಹೋರಾಟಗಾರ ಅಂಬ್ರೋಸ್ ಡಿ. ಮೆಲ್ಲೊ, ರವಿ ಶಿವಪ್ಪ ಪಡಸಲಗಿ, ಸಂಗಮೇಶ ಚಿಕ್ಕನರಗುಂದ ಅಂತಿಮ ಕಣದಲ್ಲಿದ್ದಾರೆ.
ಏಳು ಅಭ್ಯರ್ಥಿಗಳಲ್ಲಿ ಕಾಂಗ್ರೆಸ್-ಬಿಜೆಪಿ ನೇರ ಹಣಾಹಣಿ ನಡೆಯುತ್ತಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರದ ಗೆಲುವಿನ ಅಂತರ ಕೇವಲ 2,795 ಮತಗಳಿತ್ತು. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ಶ್ರೀಶೈಲ ದಳವಾಯಿ 19,753 ಮತ ಪಡೆದಿದ್ದರೆ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದ ಸಂಗಮೇಶ ನಿರಾಣಿ 24,461 ಮತ ಪಡೆದಿದ್ದರು. ಜೆಡಿಎಸ್‌ಗೆ ಬಂಡಾಯ ಅಭ್ಯರ್ಥಿಯಾಗಿದ್ದ ತೌಫಿಕ ಪಾರತನಹಳ್ಳಿ 1200 ಮತ ಪಡೆದಿದ್ದರು. ಈಗ ಉಪ ಚುನಾವಣೆಗೆ ಮತ್ತೆ ಸ್ಪರ್ಧಿಸಿರುವ ಪ್ರಜಾ ಪರಿವರ್ತನ ಪಾರ್ಟಿಯ ಪರಶುರಾಮ ಮಹಾರಾಜನವರ 5,167 ಮತ ಪಡೆದಿದ್ದರು.
ಮತ ವಿಭಜನೆಗೆ ತಡೆ:ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿಯ ಪಾರಂಪರಿಕ ಮತಗಳು ವಿಭಜನೆ ಆಗುವುದನ್ನು ತಡೆಯಲು ಭಿನ್ನಮತ ಶಮನಗೊಳಿಸಲಾಗಿದೆ. ಆದರೂ ಹಿಂದೆ ಅಸಮಾಧಾನಗೊಂಡು, ಈಗ ತಮ್ಮ ತಮ್ಮ ಪಕ್ಷದೊಂದಿಗೆ ಪುನಃ ಗುರುತಿಸಿಕೊಂಡರೂ, ಅವರೆಲ್ಲ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಕೊಡಿಸುತ್ತಾರಾ ಎಂಬ ಚರ್ಚೆಯೂ ನಡೆಯತ್ತಿದೆ. ಕಳೆದ ಚುನಾವಣೆಯಲ್ಲಿ ಬರೋಬ್ಬರಿ 20 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಈಗ ಏಳು ಜನ ಮಾತ್ರ ಕಣದಲ್ಲಿದ್ದರೂ ದಲಿತ ಹೋರಾಟದ ಮೂಲಕ ಮುಂಚೂಣಿಯಲ್ಲಿರುವ ಪರಶುರಾಮ ಮಹಾರಾಜನವರ ಪಡೆಯುವ ಮತಗಳೂ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವ ಸಂಭವ ಹೆಚ್ಚಿದೆ. ಹೀಗಾಗಿ ಪ್ರತಿಷ್ಠೆಯ ಕಣದಲ್ಲಿರುವ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳು, ಒಂದೊಂದು ಮತಗಳಿಗೂ ಲೆಕ್ಕ ಹಾಕಿ ಪ್ರಚಾರ ನಡೆಸಿದ್ದಾರೆ.
ಆನಂದ ಸಿದ್ದು ನ್ಯಾಮಗೌಡ ಪರ ಉತ್ತಮ ವಾತಾವರಣವಿದೆ. ಈಗಾಗಲೇ ಹಲವು ನಾಯಕರು ಪ್ರಚಾರ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಮತ್ತೂಮ್ಮೆ ಪ್ರಚಾರಕ್ಕೆ ಬರಲಿದ್ದಾರೆ. ಕ್ಷೇತ್ರದ ಗ್ರಾಪಂ ಮಟ್ಟದಿಂದಲೂ ಹಲವರಿಗೆ ಜವಾಬ್ದಾರಿ ನೀಡಿದ್ದೇವೆ. ನಮ್ಮ ಅಭ್ಯರ್ಥಿ ನಿಶ್ಚಿತವಾಗಿ ಗೆಲ್ಲುತ್ತಾರೆ.
– ಎಂ.ಬಿ. ಸೌದಾಗರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ
ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಹೀಗಾಗಿ ಕಾಂಗ್ರೆಸ್ ಅನ್ನು ಜನ ತಿರಸ್ಕರಿಸಲಿದ್ದಾರೆ. ಇನ್ನು ಜೆಡಿಎಸ್‌ಗೆ ನೆಲೆಯೇ ಇಲ್ಲ. ಅವರು ಮೈತ್ರಿ ಮಾಡಿಕೊಂಡರೂ ಕ್ಷೇತ್ರದ ಜನರು ಶ್ರೀಕಾಂತ ಕುಲಕರ್ಣಿ ಅವರನ್ನು ಗೆಲ್ಲಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕೆಂಬುದು ಜನರ ಬಯಕೆ ಕೂಡ ಆಗಿದೆ.
– ಸಿದ್ದು ಸವದಿ, ಬಿಜೆಪಿ ಜಿಲ್ಲಾಧ್ಯಕ್ಷ
– ಶ್ರೀಶೈಲ ಕೆ. ಬಿರಾದಾರ