ಕಡೂರು: ತಾಲೂಕಿನ ಮಲ್ಲೇಶ್ವರದ ಗ್ರಾಮ ದೇವತೆ ಶ್ರೀಸ್ವರ್ಣಾಂಬಾ ದೇವಿ ಬ್ರಹ್ಮ ರಥೋತ್ಸವ ಸಂಭ್ರಮ ಸಡಗರದಿಂದ ನೆರವೇರಿತು. ಶುಕ್ರವಾರ ಬೆಳಿಗ್ಗೆ ದೇವಿಗೆ ಅಭಿಷೇಕ, ನಿತ್ಯಪೂಜೆ, ಅರ್ಚನೆ, ಶ್ರೀ ಮಾತೆಯ ಗಜಾರೋಹಣೋತ್ಸವ ನಡೆಸಲಾಯಿತು, ಶ್ರೀ ಸ್ವಣಾಂಬಾ ಕಲ್ಯಾಣ ಮಂಟಪದಲ್ಲಿ ಪುರಸ್ಸರ ಕಲ್ಯಾಣೋತ್ಸವ ಹಾಗೂ ಕನ್ನಿಕಾ ಪೂಜಾ ನಡೆಯಿತು.
ಸಂಪ್ರದಾಯದಂತೆ ನಡೆದ ಪೂಜೆಯ ನಂತರ ಶ್ರೀದೇವಿಯ ಉತ್ಸವ ಮೂರ್ತಿಯನ್ನು ಭಕ್ತರು ಹೊತ್ತು ತಂದಾಗ ನೆರೆದಿದ್ದ ಸಾವಿರಾರು ಭಕ್ತರು ಉತ್ಸಾಹದಿಂದ ದೇವಿಯ ಮೇಲೆ ಅರಿಶಿನ ಕುಂಕುಮವನ್ನು ಎರಚಿ ಸಂಭ್ರಮಿಸಿದರು.
ಶ್ರೀ ಸ್ವರ್ಣಾಂಬಾ, ಶ್ರೀಅರಳೀಮರದಮ್ಮ ಮತ್ತು ಚೌಡ್ಲಾಪುರದ ಶ್ರೀಕರಿಯಮ್ಮ ದೇವಿಯವರನ್ನು ಭಕ್ತರು ದೇವಾಲಯದ ಭಾಗದಲ್ಲಿ ಮೂರು ಸುತ್ತು ಪ್ರದರ್ಶನ ಮಾಡಿದಾಗ ಭಕ್ತರು ಎರಚಿದ ಅರಿಶಿನ ಕುಂಕುಮದಿಂದ ದೇವರನ್ನು ಹೊತ್ತವರು ಅರಿಶಿನ ಕುಂಕುಮದಿಂದ ಮುಳಗಿ ಹೋಗಿದ್ದರು.
ಶಕ್ತಿ ದೇವತೆ ಶ್ರೀ ಸ್ವರ್ಣಾಂಬಾ ದೇವಿಯು ಹುತ್ತದಲ್ಲಿ ನೆಲೆಸಿದ್ದು, ತವರು ಮನೆಯಿಂದ ಹೊರಟ ಹೆಣ್ಣು ಮಗಳಿಗೆ ಅರಿಶಿನ ಕುಂಕುಮ ನೀಡುವ ಭಾವನೆಯಲ್ಲಿ ಭಕ್ತರು ದೇವಿಗೆ ಅರಿಶಿನ ಸಮರ್ಪಣೆ ಮಾಡುತ್ತಾರೆ. ದಕ್ಷಿಣ ಭಾರತದಲ್ಲೇ ದೇವರಿಗೆ ಅರಿಶಿನ ಮತ್ತು ಕುಂಕುಮ ಎರಚುವುದು ತಾಲೂಕಿನ ಮಲ್ಲೇಶ್ವರ ಜಾತ್ರಾ ಮಹೋತ್ಸವದಲ್ಲಿ ಎನ್ನುವುದು ಈ ಜಾತ್ರಾ ಮಹೋತ್ಸವದ ವಿಶೇಷವಾಗಿದೆ. ಬೆಳಗ್ಗೆ ಸಾಂಪ್ರದಾಯಿಕ ರಥ ಪೂಜೆ ಮತ್ತು ಬಲಿ ಪೂಜೆ ನಡೆದ ನಂತರ ಶ್ರೀದೇವಿಯ ವಿಗ್ರಹವನ್ನು ರಥಾರೋಹಣ ಮಾಡಿಸಲಾಯಿತು. ನೆರೆದ ಭಕ್ತರು ಬಾಳೆಹಣ್ಣುಗಳನ್ನು ರಥದ ಕಳಸಕ್ಕೆ ಎಸೆದು ಭಕ್ತಿ ಸಮರ್ಪಿಸುತ್ತಿದ್ದಂತೆಯೇ ಭಕ್ತರು ಹರ್ಷೋದ್ದಾರಗಳ ನಡುವೆ ರಥವನ್ನು ಎಳೆದರು. ನಂತರ ನಾಡಿನ ನಾನಾ ಮೂಲೆಗಳಿಂದ ಬಂದ ಭಕ್ತರು ಶ್ರೀದೇವಿಗೆ ಹೂವು ಹಣ್ಣು ಸಮರ್ಪಿಸಿ ಪೂಜೆ ಸಲ್ಲಿಸಿದರು. ಶ್ರೀ ಸ್ವರ್ಣಾಂಬಾ ದೇವಾಲಯದ ಧರ್ಮಾಧಿಕಾರಿ ಎಂ.ಟಿ. ಶ್ರೀನಿವಾಸ್, ಶಾಸಕ ವೈ.ಎಸ್.ವಿ ದತ್ತ, ಕೆ.ಎಂ. ಕೆಂಪರಾಜು, ದೇಗುಲದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಎಂ.ಟಿ. ಸತ್ಯನಾರಾಯಣ, ಆಡಳಿತ ಮಂಡಳಿ ಸದಸ್ಯರಾದ ಚಂದ್ರಶೇಖರಪ್ಪ, ಲೋಕೇಶ್ ಬಸಪ್ಪ, ಧರ್ಮಣ್ಣ, ಕಡೂರು ಪಟ್ಟಣ, ಮಲ್ಲೇಶ್ವರ ಗ್ರಾಮಸ್ಥರು ಮತ್ತು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ದೇವಿಯ ಕೃಪೆಗೆ ಪಾತ್ರರಾದರು.