ಮುಂಬಯಿ: ಫೋರ್ಟ್ ಪರಿಸರದ ಮೋದಿ ಸ್ಟ್ರೀಟ್‌ನಲ್ಲಿ ಕಳೆದ ಸುಮಾರು ಏಳೂವರೆ ದಶಕಗಳಿಂದ ಸೇವಾ ನಿರತವಾಗಿರುವ ತುಳು ಕನ್ನಡಿಗರ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಅಮೃತ ಮಹೋತ್ಸವ ಸಂಭ್ರಮದ ಪೂರ್ವಭಾವಿ ಸಭೆಯು ಅ. 21 ರಂದು ಸಂಜೆ ಅಂಧೇರಿ ಪೂರ್ವದ ಮಿಲಿಟರಿ ರಸ್ತೆಯಲ್ಲಿನ ಕೀಸ್ ಹೊಟೇಲ್ಸ್ ನೆಸ್ಟರ್ ಸಭಾಗೃಹದಲ್ಲಿ ನಡೆಯಿತು.
ಗೌರವಾಧ್ಯಕ್ಷ ಹರೀಶ್ ಜಿ. ಅಮೀನ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವೆಯಿಂದ ಪರಿಪೂರ್ಣತಾ ಬದುಕು ಸಾಧ್ಯವಾಗುತ್ತದೆ. ಇವುಗಳಿಗೆಲ್ಲಾ ದೈವ-ದೇವರುಗಳ ಅನುಗ್ರಹವೂ ಅಷ್ಟೇ ಮುಖ್ಯವಾಗಿದೆ. ಭಗವಂತನ ಕೃಪೆಯಿಲ್ಲದೆ ಏನೂ ಸಾಧ್ಯವಾಗದು. ಎಲ್ಲವನ್ನೂ ದೇವರು ತನ್ನ ಸೃಷ್ಟಿಯಲ್ಲಿ ನಿರ್ಮಿಸಿರುತ್ತಾನೆ. ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ವಹಿಸಿ ಅವರಿಂದ ದೇವರು ಸೇವೆ ಮಾಡಿಸಿಕೊಳ್ಳುತ್ತಾನೆ. ಅಂತೆಯೇ ಈ ಸೇವಾ ಸಮಿತಿಯಲ್ಲಿ ಕಳೆದ ಎರಡು ದಶಕಗಳಿಂದ ಗೌರವಾಧ್ಯಕ್ಷನಾಗಿ ಸೇವಾ ನಿರತನಾಗಿರುವೆ. ಶ್ರೀ ಶನೀಶ್ವರನ ಅನುಗ್ರಹದೊಂದಿಗೆ ಮಹಾನಗರದ ಜನತೆ ನನಗೆ ಇಷ್ಟೊಂದು ದೊಡ್ಡ ಜವಾಬ್ದಾರಿ ಪ್ರಾಪ್ತಿಸಿದ್ದಾರೆ. ಇದಕ್ಕೆ ಬದ್ಧನಾಗಿ ಶ್ರಮಿಸಿರುವೆ. ಸೇವಾ ಸಮಿತಿಯ ಅಮೃತಮಹೋತ್ಸವ ಮತ್ತು ಸ್ವಂತದ ದೇವಸ್ಥಾನ ನಿರ್ಮಿಸುವ ಸಂಕಲ್ಪ ಹೊಂದಿದ್ದು ತಮ್ಮೆಲ್ಲರ ಸಹಯೋಗದೊಂದಿಗೆ ನೆರವೇರಲಿ ಎಂಬ ಆಶಯ ಇಟ್ಟು ಕೊಂಡಿದ್ದೇನೆ ಎಂದು ನುಡಿದರು.
ಅಮೃತ ಮಹೋತ್ಸವ ಪೂರ್ವ ಭಾವಿ ಸಭೆಗೆ ಶ್ರೀ ಶನೀಶ್ವರ ದೇವಾಲಯ ನೆರೂಲ್ ಇದರ ವ್ಯವಸ್ಥಾಪಕ ಟ್ರಸ್ಟಿ ಧರ್ಮದರ್ಶಿ ರಮೇಶ್ ಎಂ. ಪೂಜಾರಿ ದೀಪ ಪ್ರಜ್ವಲಿಸಿ ಚಾಲನೆ ನೀಡಿ, ಈ ದೇವತಾ ಕಾರ್ಯದಲ್ಲಿ ಭಕ್ತರು, ತುಳು-ಕನ್ನಡಿಗರು ಸಹಕರಿಸಿ ಯೋಜನೆಯ ಯಶಸ್ಸಿಗೆ ಸಹಕರಿಸಬೇಕು. ದೇವರ ಅನುಗ್ರಹದಿಂದ ಎಲ್ಲ ಯೋಜನೆಗಳು ಸುಸೂತ್ರವಾಗಿ ನಡೆಯುವಂತಾಗಲಿ ಎಂದರು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾರತ್ ಬ್ಯಾಂಕಿನ ನಿರ್ದೇಶಕ ಎಲ್. ವಿ. ಅಮೀನ್, ಗೌರವ ಅತಿಥಿಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಉದ್ಯಮಿ ಗಿಲ್ಬರ್ಟ್ ಡಿಸೋಜಾ ಉಪಸ್ಥಿತರಿದ್ದು ಸಂದಭೋìಚಿತ ವಾಗಿ ಮಾತನಾಡಿದರು.
ವಿ. ಕೆ. ಪೂಜಾರಿ, ಶಿವರಾಮ ಕೋಟ್ಯಾನ್ ಘಾಟ್ಕೊàಪರ್, ಜಯಂತಿ ವಿ. ಉಳ್ಳಾಲ್, ರವೀಂದ್ರ ಕೋಟ್ಯಾನ್, ಲಕ್ಷ್ಮೀ ಎನ್. ಕೋಟ್ಯಾನ್ ಅಂಧೇರಿ, ಶ್ರೀನಿವಾಸ ಸಾಫಲ್ಯ, ಜೆ. ಎಂ. ಕೋಟ್ಯಾನ್, ಚೇತನ್ ಶೆಟ್ಟಿ, ಬೋಳ ರವಿ ಪೂಜಾರಿ, ಟಿ. ಎಂ. ಕೋಟ್ಯಾನ್, ನವೀನ್ ಪೂಜಾರಿ, ರವಿ ಸುವರ್ಣ ಡೊಂಬಿವಲಿ, ಪ್ರಕಾಶ್ ಮೂಡಬಿದಿರೆ, ಚಿತ್ರಾಪು ಕೆ. ಎಂ. ಕೋಟ್ಯಾನ್, ಶಂಕರ್ ಪೂಜಾರಿ, ಕೋರಿಯೋಗ್ರಾಫರ್ ಸನ್ನಿಧ್ ಪೂಜಾರಿ, ಎಸ್. ಎನ್. ಗಾಲ, ಚೇತನ್ ಶೆಟ್ಟಿ, ಪ್ರಭಾಕರ್ ಬೆಳುವಾಯಿ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದು ತಮ್ಮ ಸಲಹೆಗಳನ್ನಿತ್ತು ಸೇವಾ ಸಮಿತಿಯ ಅಮೃತ ಮಹೋತ್ಸವ ಯಶಸ್ಸಿಗೆ ಶುಭ ಹಾರೈಸಿದರು.
ಕು| ಸಾಧ್ವಿ ಶೆಟ್ಟಿ ಅವರ ನೃತ್ಯ ದೊಂದಿಗೆ ಸಭೆ ಪ್ರಾರಂಭಗೊಂಡಿತು. ಭುವಾಜಿ ಜಗದೀಶ್ ನಿಟ್ಟೆ ಪ್ರಾರ್ಥನೆಗೈದರು. ಸೇವಾ ಸಮಿತಿಯ ಅಧ್ಯಕ್ಷ ಜೆ. ಜೆ. ಕೋಟ್ಯಾನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಸಮಿತಿಯ ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ, ಕೋಶಾಧಿಕಾರಿ ಶರತ್ ಪೂಜಾರಿ, ಮತ್ತಿತರ ಪದಾ ಧಿಕಾರಿಗಳು, ಹರೀಶ್ ಶಾಂತಿ ಅಂಧೇರಿ ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ವಸಂತ್ ಎನ್. ಸುವರ್ಣ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಚಿತ್ರ-ವರದಿ : ರೋನ್ಸ್‌ಬಂಟ್ವಾಳ್