ಲಕ್ನೋ:ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿಯಲ್ಲಿ ತಲೆಎತ್ತಲಿರುವ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈವರೆಗೆ ಒಟ್ಟು ಎಷ್ಟು ಹಣವನ್ನು ಸಂಗ್ರಹಿಸಿದೆ ಎಂಬುದನ್ನು ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ತಿಳಿಸಿದ್ದಾರೆ.
“ನನ್ನ ಅಂದಾಜಿನ ಪ್ರಕಾರ ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಆಗಸ್ಟ್ 4ರವರೆಗೆ 30ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹಣ ದೇಣಿಗೆಯಾಗಿ ಸ್ವೀಕರಿಸಿದೆ. ಅಲ್ಲದೇ ಮೊರಾರಿ ಬಾಪು ಅವರು ದೇಶದ ಜನರಿಂದ ಸಂಗ್ರಹಿಸಿದ್ದ ಸುಮಾರು 11 ಕೋಟಿ ರೂಪಾಯಿ ಹಣವನ್ನು ಇಂದು (ಆಗಸ್ಟ್ 5-2020) ಟ್ರಸ್ಟ್ ಗೆ ನೀಡಲಿದ್ದಾರೆ ಎಂದು ಎಎನ್ ಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ದೇಶದ ಜನರಿಂದ ಸಂಗ್ರಹವಾದ 11 ಕೋಟಿ ರೂಪಾಯಿ ಹಣವಲ್ಲದೆ, ವಿದೇಶದಲ್ಲಿ ವಾಸವಾಗಿರುವವರು 7 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ. ಆದರೆ ಟ್ರಸ್ಟ್ ವಿದೇಶದ ಹಣ ಸ್ವೀಕರಿಸಿಲ್ಲ, ಟ್ರಸ್ಟ್ ಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಪ್ರಮಾಣ ಪತ್ರ ಲಭ್ಯವಾಗುವವರೆಗೆ ಆ ಹಣ ಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಫೆಬ್ರುವರಿ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲು ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೇಮಕ ಮಾಡುವುದಾಗಿ ಘೋಷಿಸಿದ್ದರು.
ಆಗಸ್ಟ್ 5ರಂದು (2020) ಪ್ರಧಾನಿ ನರೇಂದ್ರ ಮೋದಿ ಅವರು 12.30ಕ್ಕೆ ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ 175 ಗಣ್ಯರನ್ನು ಮಾತ್ರ ಆಹ್ವಾನಿಸಲಾಗಿದೆ.