ಜೈನ ಧರ್ಮದ ಇಪ್ಪತ್ಮೊರನೆಯ ತೀರ್ಥಂಕರ ಶ್ರೀ ಪಾರ್ಶ್ವನಾಥ ಸ್ವಾಮಿಯ ವೃತ್ತಾಂತವನ್ನು ಪ್ರಚುರಪಡಿಸುವಾಗ ಯಕ್ಷ ಧರಣೇಂದ್ರ ಮತ್ತು ಯಕ್ಷಿ ಪದ್ಮಾವತಿ ದೇವಿಯ ಮಹಿಮೆಯನ್ನು ತಿಳಿಸಬೇಕಾಗುತ್ತದೆ.
ಜಿನದತ್ತರಾಯ ಉತ್ತರ ಭಾರತದ ಮಥುರೆಯಿಂದ ದಕ್ಷಿಣ ಭಾರತದತ್ತ ಬಂದು ಹುಂಚ (ಹೊಂಬುಜ) ದಲ್ಲಿ ನೆಲೆನಿಂತು, ಆತನ ಆರಾಧ್ಯದೇವಿ ಪದ್ಮಾವತಿ ಮಾತೆಯ ಅನುಗ್ರಹದಿಂದ ರಾಜ್ಯ ಸ್ಥಾಪಿಸಿದ ಕಥೆಯನ್ನಾಧರಿಸಿ ಯಕ್ಷಗಾನ ಕಥಾ ಪ್ರಸಂಗವೊಂದನ್ನು ಬರೆದು, ಪ್ರಕಟಿಸಿ ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ವಿಶಿಷ್ಠ ಯಕ್ಷಗಾನ ವೈಭವ-ನಾಟ್ಯ ವೈಭವ ಎಂಬ ಕಾರ್ಯಕ್ರಮವು ಯಶಸ್ವಿಯಾಗಿ ಹೊಂಬುಜ ಅತಿಶಯ ಶ್ರೀಕ್ಷೇತ್ರದಲ್ಲಿ ಇತ್ತೀಚೆಗೆ ಜರುಗಿತು.
ಪೌರಾಣಿಕ, ಐತಿಹಾಸಿಕ ಘಟನಾವಳಿಯನ್ನು ಆಧರಿಸಿ, ಯಕ್ಷರಂಗದ ಪ್ರದರ್ಶನಕ್ಕೆ ಅಣಿಯಾಗುವಂತೆ ಪ್ರಸಂಗಕರ್ತ ಬೇಳೂರು ವಿಷ್ಣುಮೂರ್ತಿ ನಾಯಕರು 339 ಪದ್ಯಗಳುಳ್ಳ ಕೃತಿಯನ್ನು ರಚಿಸಿದ್ದಾರೆ.
ಯಕ್ಷರಂಗದ ತೆಂಕುತಿಟ್ಟು ಪದ್ಧತಿಯಲ್ಲಿ ಡಾ| ಪ್ರಖ್ಯಾತ ಶೆಟ್ಟಿ (ಭಾಗವತಿಕೆ), ಗುರುಪ್ರಸಾದ್ ಬೊಳಿಂಜಡ್ಕ (ಮದ್ದಳೆ), ಪದ್ಮನಾಭ ಉಪಾಧ್ಯಾಯ (ಚಂಡೆ), ರಾಜೇಂದ್ರಕೃಷ್ಣ (ಚಕ್ರತಾಳ) ಹಾಗೂ ಮುಮ್ಮೇಳದಲ್ಲಿ ಮಾರ್ನಾಡ್ ಅಕ್ಷಯ ಕುಮಾರ, ಲೋಕೇಶ ಮುಚ್ಚಾರು ಉತ್ತಮ ಪ್ರದರ್ಶನ ಸಂಯೋಜಿಸಿದರು.
ಗಾನ ಮತ್ತು ನಾಟ್ಯ ವೈಭವದ ವಿಶಿಷ್ಠ ಪ್ರಯೋಗವು ಯಕ್ಷಗಾನಾಸಕ್ತರಿಗೆ ಮುದ ನೀಡಿತು. ಬಡಗುತಿಟ್ಟು ಸಂಯೋಜನೆಯಲ್ಲಿ ಭಾಗವತರಾಗಿ ಜಿ. ರಾಘವೇಂದ್ರ ಮಯ್ಯ ಹಾಲಾಡಿ, ಆಗುಂಬೆ ಮಂಜುನಾಥ ಗೌಡ, ಹರಿಹರಪುರ ಶಿವಶಂಕರ ಭಟ್, ನಾಗರಕೊಡಿಗೆ ನಾಗೇಶ ಕುಲಾಲ ಹಿಮ್ಮೇಳದಲ್ಲಿ ಯಲ್ಲಾಪುರ ರಾಘವೇಂದ್ರ ಹೆಗಡೆ, ಶ್ರೀನಿವಾಸ ಪ್ರಭು (ಚಂಡೆ) ಮತ್ತು ಮುಮ್ಮೇಳದಲ್ಲಿ ಹೆನ್ನೆಬೈಲು ವಿಶ್ವನಾಥ ಪುಜಾರಿ, ಉಪ್ಪೂರು ಸುಧೀರ್, ಪ್ರಸನ್ನ ಶೆಟ್ಟಿಗಾರ್, ವಂಡ್ಸೆ ಗೋವಿಂದ, ಬಿಲ್ಲೇಶ್ವರ ಶ್ರೀನಿವಾಸ ಜನಮೆಚ್ಚುಗೆ ಗಳಿಸಿದರು.
ಡಾ| ಎಸ್.ಎನ್. ಅಮೃತ ಮಲ್ಲ