ದಾವಣಗೆರೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿರುವ ಭರವಸೆಯಂತೆ ಮುಂದಿನ 6 ತಿಂಗಳಲ್ಲಿ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ-2 ಎ ಮೀಸಲಾತಿ ನೀಡಬೇಕು. ಇಲ್ಲವಾದಲ್ಲಿ ಅ.15ರಿಂದ ಮತ್ತೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಒತ್ತಾಯಿಸಿ ಪಾದಯಾತ್ರೆಯ ನಂತರ ಬೆಂಗಳೂರಲ್ಲಿ ಸಮಾಜ ಬಾಂಧವರು ಅನಿರ್ದಿಷ್ಟಾವಧಿ ಹೋರಾಟ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದನದಲ್ಲಿ 6 ತಿಂಗಳಲ್ಲಿ ಮೀಸಲಾತಿ ನೀಡಲಾಗುವುದು ಎಂಬ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೋರಾಟಕ್ಕೆ ಅಲ್ಪ ವಿರಾಮ ನೀಡಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮಾಜಕ್ಕೆ 2 ಎ ಮೀಸಲಾತಿ ನೀಡುವ ವಿಶ್ವಾಸ ಇದೆ. ಏಕೆಂದರೆ ಅವರು ಭರವಸೆ ನೀಡಿರುವುದು ನಾಲ್ಕು ಗೋಡೆಗಳ ಮಧ್ಯೆದಲ್ಲಿ ಅಲ್ಲ. ಸೆ.15ರ ಒಳಗಾಗಿ ಮೀಸಲಾತಿ ನೀಡಲಾಗುವುದು ಎಂದು ಸದನದಲ್ಲಿ ಭರವಸೆ ನೀಡಿದ್ದಾರೆ. ಅದು ಕಡತದಲ್ಲಿ ದಾಖಲಾಗಿರುತ್ತದೆ. ಒಂದೊಮ್ಮೆ ಅ.15ರ ಒಳಗಾಗಿ 2 ಎ ಮೀಸಲಾತಿ ಕೊಡದಿದ್ದರೆ ಮತ್ತೆ ಧರಣಿ ಸತ್ಯಾಗ್ರಹ ನಡೆಸಲಾಗುವುದು. 25 ಲಕ್ಷಕ್ಕೂ ಹೆಚ್ಚು ಜನರ ಸೇರಿಸಿ ಬೃಹತ್ ರ್ಯಾಲಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳು ಶಾಲಾ ದಾಖಲಾತಿಯಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕು. ಜನಗಣತಿ ಸಂದರ್ಭದಲ್ಲೂ ಸಹ ಸಮಾಜ ಬಾಂಧವರು ಲಿಂಗಾಯತ ಪಂಚಮಸಾಲಿ ಎಂದೇ ಬರೆಸಬೇಕು. ಇಲ್ಲದೇ ಹೋದಲ್ಲಿ ಮೀಸಲಾತಿ ಸಿಗದೆ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಎಲ್ಲರೂ ಜನಗಣತಿ ಮತ್ತು ಶಾಲಾ ದಾಖಲಾತಿಗಳಲ್ಲಿ ಲಿಂಗಾಯತ ಪಂಚಮಸಾಲಿ ಎಂದೇ ಬರೆಸಬೇಕು ಎಂದು ತಿಳಿಸಿದರು. ಪಂಚಮಸಾಲಿ ಸಮಾಜದ ಬಹು ದಶಕಗಳ ಬೇಡಿಕೆ 2 ಎ ಮೀಸಲಾತಿಯ ಆದೇಶ ಬರುವವರೆಗೆ ಸಮಾಜ ಬಾಂಧವರು ಮೈ ಮರೆಯಬಾರದು. ಇದೇ ದಾವಣಗೆರೆಯಿಂದ ಭಿನ್ನಾಭಿಪ್ರಾಯ ಮರೆತು ಹೋರಾಟ ನಡೆಸಲಾಗಿದೆ. ಹರಿಹರ ಪೀಠದ ವಚನಾನಂದ ಸ್ವಾಮೀಜಿಯವರು ಕಾಲಿನಲ್ಲಿ ಬೊಬ್ಬೆ ಬಂದರೂ ಹೋರಾಟ ದಲ್ಲಿ ಪಾಲ್ಗೊಂಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಾದಯಾತ್ರೆ ಮತ್ತು ಧರಣಿ ಸತ್ಯಾಗ್ರಹಕ್ಕೆ ನಿರೀಕ್ಷೆಗೂ ಮೀರಿ ಅಭೂತಪೂರ್ವ ಬೆಂಬಲ ನೀಡಿದವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಶರಣು ಶರಣಾರ್ಥಿ ಸಂದೇಶ ಯಾತ್ರೆಯನ್ನು ಬೆಂಗಳೂರಿನಿಂದ ಪ್ರಾರಂಭಿಸಲಾಗಿದೆ. ದಾವಣಗೆರೆಯಿಂದ ಕಾರಿಗನೂರಿನ ಜೆ.ಎಚ್. ಪಟೇಲ್‌ರ ಸಮಾಧಿ ನಂತರ ಉಡುತಡಿಗೆ ತೆರಳಿ, ಅಲ್ಲಿಂದ ಹಿರೇಕೇರೂರುಗೆ ತೆರಳಿ, ವಾಸ್ತವ್ಯ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಗೋಪನಾಳ್ ಮಾತನಾಡಿ, ಮಠದ ನಿರ್ಮಾಣಕ್ಕಾಗಿ ಒಂದು ಗ್ರಾಮದಿಂದ 1 ಲಕ್ಷ ನೀಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಮಲ್ಲಿಕಾರ್ಜುನ ಅಕ್ಕಿ, ನಗರಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.