Advertisement

ಶ್ರೀ ಕೃಷ್ಣ ಮಠದಲ್ಲಿ ವೈಭವದ ಕೋಟಿ ತುಳಸಿ ಅರ್ಚನೆ ಸಂಪನ್ನ

09:13 AM Sep 24, 2019 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ರವಿವಾರ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥ ಕೋಟಿ ತುಳಸಿ ಅರ್ಚನೆ ಸಂಪನ್ನ ಗೊಂಡಿತು.

Advertisement

ಜಿಲ್ಲೆಯ 28 ವಲಯಗಳ ಬ್ರಾಹ್ಮಣ ಸಂಘಗಳ ಸುಮಾರು 2,800 ಸದಸ್ಯರು ಪಾಲ್ಗೊಂಡು ವಿಷ್ಣು ಸಹಸ್ರನಾಮ ಪಾರಾಯಣವನ್ನು ತಲಾ ನಾಲ್ಕು ಬಾರಿ ನಡೆಸಿಕೊಟ್ಟರು. ಹಾಸನ,ಬೆಂಗಳೂರು,ಪಂಢರಪುರ,ಹೊಳೆ ನರಸೀಪುರ, ಮೈಸೂರು ಮೊದಲಾದೆಡೆಗಳಿಂದ ತುಳಸಿ ದಳಗಳನ್ನು ಭಕ್ತರು ನೀಡಿದ್ದರು.

ಶ್ರೀ ಪಲಿಮಾರು ಮಠಾಧೀಶ ರಲ್ಲದೆ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಅರ್ಚನೆಗಳನ್ನು ನಡೆಸಿಕೊಟ್ಟರು.

ಗರ್ಭಗುಡಿಯಲ್ಲಿರುವ ವಿಗ್ರಹಕ್ಕೆ ಅರ್ಚನೆ ನಡೆದಂತೆ ರಾಜಾಂಗಣ ದಲ್ಲಿಯೂ ಶ್ರೀಕೃಷ್ಣನ ಪ್ರತಿಮೆಗೆ ಅರ್ಚನೆಗಳನ್ನು ಸ್ವಾಮೀಜಿಯವರು ನಡೆಸಿಕೊಟ್ಟರು.

ಆಶೀರ್ವಚನ ನೀಡಿದ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶಾಸ್ತ್ರದ ಸಾರ ಮಹಾಭಾರತ. ಅದರಲ್ಲಿಯೂ ಗೀತೆ ಮತ್ತು ವಿಷ್ಣು ಸಹಸ್ರನಾಮ ಮಹಾಭಾರತದ ಸಾರ ವಾಗಿದೆ. ಗೀತೆ ಕೃಷ್ಣಗೀತೆಯಾದರೆ, ವಿಷ್ಣುಸಹಸ್ರನಾಮ ಭಕ್ತ ಭೀಷ್ಮರು ದೇವರ ಅನೇಕ ನಾಮಗಳನ್ನು ಕೊಂಡಾಡಿದ ಭಕ್ತಗೀತೆ. ಇದರ ಒಂದೊಂದು ನಾಮವೂ ನೂರು ನಾಮಗಳನ್ನು ಕೊಡುತ್ತಿದೆ. ನಮಗೆ ನಾಲಗೆ ಮತ್ತು ದೇವರ ನಾಮಗಳೆರಡೂ ಇರುವಾಗ ನಾವು ಅವುಗಳನ್ನು ಉಪಯೋಗಿಸುತ್ತಿಲ್ಲ. ಇಂತಹ ಅಮೂಲ್ಯ ವಿಷ್ಣುಸಹಸ್ರನಾಮದ ಪಾರಾಯಣದಿಂದ ಜಗತ್ತಿಗೆ, ದೇಶಕ್ಕೆ ಕಲ್ಯಾಣವಾಗಲಿ ಎಂದು ಹಾರೈಸಿದರು.

Advertisement

ಶ್ರೀಕೃಷ್ಣ ದೇವಕಿಗೆ ಮಾತ್ರ ಆನಂದ ಕೊಟ್ಟದ್ದಲ್ಲ. ಭಕ್ತರಿಗೂ ಆನಂದ ಕೊಡುತ್ತಾನೆ. ತುಳಸಿಗೆ ಸಮನಾದ ಇನ್ನೊಂದು ವಸ್ತುವಿಲ್ಲ. ಹೀಗಾಗಿಯೇ ಏನನ್ನು ಕೊಡುವಾಗಲೂ ತುಳಸಿ ಸಹಿತ ಕೊಡುತ್ತೇವೆ. ಇದರರ್ಥ ತುಳಸಿ ಸಮೇತ ಕೊಟ್ಟಾಗ ಅದು ಭಗವಂತನಿಗೆ ತಲುಪುತ್ತದೆ. ನಾವು ಮಾಡಿದ ನಿತ್ಯದ ಲಕ್ಷ ತುಳಸಿ ಅರ್ಚನೆಯೂ ಒಂದರ್ಥದಲ್ಲಿ ಫ‌ಲ ನೀಡಿದೆ. ನಮ್ಮ ದೇಶದ ಮುಕುಟಪ್ರಾಯವಾದ ಕಾಶ್ಮೀರ ಈಗ ಮುಕ್ತಗೊಂಡರೆ, ಮುಂದೆ ಪಾಕ್‌ ಆಕ್ರಮಿತ ಕಾಶ್ಮೀರವೂ ಭಾರತದ ತೆಕ್ಕೆಗೆ ಬರುವಂತಾಗಲಿ ಎಂದು ಶ್ರೀ ಪಲಿಮಾರು ಶ್ರೀಗಳು ಹಾರೈಸಿದರು.

ವಿಷ್ಣು ಸಹಸ್ರನಾಮವನ್ನು ಆರಂಭಿಸು ವಾಗ “ಓಂ ನಮೋ ಭಗವತೇ ವಾಸುದೇವಾಯ’ ಎಂದು ಹೇಳುವ ಕ್ರಮವಿದೆ. ಇದರರ್ಥ ನಮ್ಮ ನೋವನ್ನು ವಾಸಿ ಮಾಡು ಎಂಬ ಭೀಷ್ಮರ ಪ್ರಾರ್ಥನೆ. ಈ ಪ್ರಾರ್ಥನೆಯಿಂದ ನಮ್ಮ ದೇಶದ ಅನಿಷ್ಠಗಳು ನಿವಾರಣೆಯಾಗಲಿ ಎಂದು ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಆಶಿಸಿದರು. ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯ ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next