ಮಂಡ್ಯ: ಶ್ರೀ ಕಾಲಭೈರವೇಶ್ವರನ ನೆಲೆವೀಡು, ನಾಥ ಪರಂಪರೆಯ ತಪೋಭೂಮಿ ಎಂದೇ ಖ್ಯಾತಿ ಗಳಿಸಿರುವ ಆದಿ ಚುಂಚನಗಿರಿಯಲ್ಲಿ ಸೋಮವಾರ ಬೆಳಗಿನ ಜಾವ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಅಡ್ಡಪಾಲಕಿಯೊಂದಿಗೆ ಸಂಪನ್ನಗೊಂಡ ಶ್ರೀ ಗಂಗಾಧರೇಶ್ವರಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.
ರಥೋತ್ಸವದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಭಾನುವಾರ ದಿನವಿಡೀ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ರಥೋತ್ಸವಕ್ಕೂ ಮುನ್ನ, ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಕಾಲಭೈರವೇಶ್ವರ ಪುಷ್ಕರಣಿಯಲ್ಲಿ ಜರುಗಿದ ತೆಪ್ಪೋತ್ಸವ ನೆರವೇರಿತು. ಇಡೀ ಬೆಟ್ಟವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ತೆಪ್ಪೋತ್ಸವ ಆರಂಭಗೊಳ್ಳುತ್ತಿದ್ದಂತೆ ಬಣ್ಣ ಬಣ್ಣದ ಪಟಾಕಿಗಳು ಸಿಡಿದು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು. ಇದೇ ವೇಳೆ ಸಂಗೀತ ನೃತ್ಯ ಕಾರಂಜಿ ವ್ಯವಸ್ಥೆ ಮಾಡಲಾಗಿತ್ತು. ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಆದಿಚುಂಚನಗಿರಿ ಕ್ಷೇತ್ರ ನೆರೆದಿದ್ದ ಭಕ್ತರಿಗೆ ವಿಶೇಷ ಮೆರಗು ನೀಡುತ್ತಿತ್ತು.
ಭಕ್ತಾದಿಗಳ ಜಾಗರಣೆಗೆ ಅನುಕೂಲ ಮಾಡುವ ಪ್ರಯತ್ನವಾಗಿ ಅಲ್ಲಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನ, ಜಾನಪದ ಗೀತ ಗಾಯನ, ಹಿರಿಯ ಮಹಿಳೆಯರ ಸಾಮೂಹಿಕ ಭೈರವನ ಸೋಬಾನೆ ಪದ, ನಾಡಿನ ವಿವಿಧ ಭಾಗಗಳಿಂದ ಆಗಮಿಸಿ ತಮ್ಮ ಕಲಾ ಪ್ರದರ್ಶನಕ್ಕೆ ಮಾಡಿಕೊಡಲಾಗಿದ್ದ ವೇದಿಕೆಗಳು, ಸಾಂಪ್ರದಾಯಿಕ ಜಾತ್ರೆಗೆ ಮೆರಗು ನೀಡಿದ್ದವು. ಹೋಳಿ ಹುಣ್ಣಿಮೆ ದಿನವಾದ ಸೋಮವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀಗಂಗಾಧರೇಶ್ವರಸ್ವಾಮಿ ಸರ್ವಾಲಂಕೃತ ರಥವನ್ನು ಭಕ್ತರು ಬಿಜಯಂಗೈಸಿದರು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಹಣ್ಣು ದವನ ಮತ್ತು ಹೂವನ್ನು ರಥದ ಮೇಲೆಸೆದು ಭಕ್ತಿ ಸಮರ್ಪಿಸಿದರು.
ನಂತರ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಯವರ ಸರ್ವಾಂಲಕೃತ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು. ಈ ಮಹೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಶ್ರೀಕಾಲಭೈರವೇಶ್ವರಸ್ವಾಮಿ ವಕ್ಕಲಿನ ಸಹಸ್ರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು.
ಹರಿದುಬಂದ ಜನಸಾಗರ: ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ನಾಡಿನ ವಿವಿದೆಡೆಗಳಿಂದ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದಿತ್ತು. ರಥದ ಬೀದಿ, ಕಲ್ಯಾಣಿ ಬೀದಿ ಸೇರಿದಂತೆ ಶ್ರೀಮಠದ ಬೆಟ್ಟದ ತಪ್ಪಲಿನ ಇಕ್ಕೆಲಗಳಲ್ಲಿ ಭಕ್ತರು ತುಂಬಿ ತುಳುಕಿತ್ತಿದ್ದ ದೃಶ್ಯ ಕಂಡುಬಂದಿತು. ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶ್ರೀ ಕ್ಷೇತ್ರದ ಮುಖ್ಯದ್ವಾರದಿಂದ ತುಮಕೂರು ಹಾಗೂ ಮೈಸೂರು ಮಾರ್ಗ ಗಳ ಎರಡೂ ಬದಿಯಲ್ಲಿ ಕಿ.ಮೀ.ವರೆಗೆ ವಾಹನಗಳು ಭಕ್ತರನ್ನು ಹೊತ್ತುತಂದು ನಿಂತಿದ್ದವು.
ಬಿಗಿ ಪೊಲೀಸ್ ಬಂದೋಬಸ್ತ್: ಯಾವುದೇ ಅವಘಡಗಳು ಸಂಭವಿಸ ದಂತೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಮುಂಜಾಗ್ರತ ಕ್ರಮವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ತಾಲೂಕಿನ ಬೆಂಗಳೂರು-ಮಂಗಳೂರು ರಾ.ಹೆದ್ದಾರಿಯಿಂದ ಆದಿ ಚುಂಚನಗಿರಿಗೆ ಹೋಗಲು ನೆಲ್ಲಿಗೆರೆ ಕ್ರಾಸ್ ಬಳಿಯಿರುವ ಮುಖ್ಯದ್ವಾರದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.