ಬೈಂದೂರು: ಉದ್ಯಮಿ ಯು.ಬಿ. ಶೆಟ್ಟಿಯವರು ನಿರ್ಮಿಸಿದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ರಾಜಗೋಪುರದ ಸಮರ್ಪಣ ಕಾರ್ಯಕ್ರಮಕ್ಕೆ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗಮಿಸಿ ಶತಚಂಡಿಕಾಯಾಗ ಮತ್ತು ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.
ಯು.ಬಿ.ಎಸ್. ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಯು.ಬಿ. ಶೆಟ್ಟಿ ಕುಟುಂಬಸ್ಥರು ಮತ್ತು ದೇವಸ್ಥಾನದ ಸಮಿತಿಯವರು ಸ್ವಾಗತಿಸಿದರು.
ಕರಾವಳಿ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗಾಗಿ ಪ್ರತ್ಯೇಕ ಯೋಜನೆ ರೂಪಿಸಲಾಗುತ್ತಿದೆ. ಕಾರ್ಯಕರ್ತರ ಸಂಘಟನೆ, ಉದ್ಯೋಗ ಸೃಷ್ಟಿಯ ಮೂಲಕ ವಲಸೆ ಹೋಗುವ ಯುವ ಸಮುದಾಯವನ್ನು ಸದೃಢ ಗೊಳಿಸಲಾಗುವುದು. ಬಿಜೆಪಿಯ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೇಶ ಮತ್ತು ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ಶಿವಕುಮಾರ್ ಈ ಸಂದರ್ಭ ಹೇಳಿದರು.
ಆತ್ಮೀಯರು, ಕುಟುಂಬ ಸ್ನೇಹಿತರೂ ಆಗಿರುವ ಯು.ಬಿ. ಶೆಟ್ಟಿಯವರು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಶ್ಲಾಘಿಸಿದರು.
ಶಿವಕುಮಾರ್ ಮತ್ತು ನಮ್ಮ ಕುಟುಂಬದ ನಡುವೆ ಹಲವು ವರ್ಷಗಳ ಬಾಂಧವ್ಯ ಇದೆ. ಅವರು ತಾಯಿ ಶ್ರೀ ದುರ್ಗಾಪರಮೇಶ್ವರಿಯ ಸೇವೆಗೆ ಆಗಮಿಸಿದ್ದಾರೆ. ಮೇ 21ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಆಗಮಿಸಲಿದ್ದಾರೆ. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಯು.ಬಿ. ಶೆಟ್ಟಿ ಹೇಳಿದರು.
ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ, ರಂಜನಾ ಯು.ಬಿ. ಶೆಟ್ಟಿ, ಯಶಶ್ರೀ ಶೆಟ್ಟಿ, ದೇವಸ್ಥಾನದ ಮುಂದಾಳುಗಳು, ಯು.ಬಿ. ಶೆಟ್ಟಿ ಕುಟುಂಬಸ್ಥರು, ಜಿಲ್ಲೆಯ ವಿವಿಧ ಮುಖಂಡರು, ಸ್ಥಳೀಯ ನಾಯಕರು ಉಪಸ್ಥಿತರಿದ್ದರು.