ಬೆಳ್ತಂಗಡಿ: ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಪ್ರಥಮ ದಿನವಾದ ಸೋಮವಾರ ರಾತ್ರಿ ಹೊಸಕಟ್ಟೆ ಉತ್ಸವವು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಜರುಗಿತು.
ಶ್ರೀ ಮಂಜುನಾಥ ಸ್ವಾಮಿಗೆ ಗುಡಿಯೊಳಗೆ ವಿಶೇಷ ಪೂಜೆಗಳು, ದೇಗುಲದ ಅಂಗಣದಲ್ಲಿ ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು, ಸರ್ವವಾದ್ಯ ಸಹಿತ 16 ಸುತ್ತುಗಳಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಲಾಲಾಕ್ಕಿ ಪಲ್ಲಕ್ಕಿಯಲ್ಲಿ ಕೂರಿಸಲಾಯಿತು.
ಲಾಲಾಕ್ಕಿ ಪಲ್ಲಕ್ಕಿಗೆ ಆರತಿ ಬೆಳಗಿ ಮೆರವಣಿಗೆಯೊಂದಿಗೆ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಡಿ. ಹರ್ಷೇಂದ್ರ ಕುಮಾರ್ ಅವರ ಉಪಸ್ಥಿತಿಯಲ್ಲಿ ವಸಂತ ಮಹಲ್‌ನ ಹೊಸಕಟ್ಟೆಗೆ ಕೊಂಡೊಯ್ಯಲಾಯಿತು. ಅಲ್ಲಿ ಪೂಜೆ ನೆರವೇರಿದ ಬಳಿಕ ಬೆಳ್ಳಿ ರಥದಲ್ಲಿ ದೇವರ ಮೂರ್ತಿಯನ್ನು ವಿರಾಜಮಾನಗೊಳಿಸಿ ಆರತಿ ಬೆಳಗಿ ಭಕ್ತರ ಸಮ್ಮುಖದಲ್ಲಿ ದೇವಳಕ್ಕೆ ಒಂದು ಸುತ್ತು ರಥವನ್ನು ಎಳೆದು ಬಂದು ದೇವರ ಮೂರ್ತಿಗೆ ಮಂಗಳಾರತಿ ಬೆಳಗಿ ಮೂರ್ತಿಯನ್ನು ದೇಗುಲದೊಳಗೆ ಕರೆತರಲಾಯಿತು. ಬೆಳ್ಳಿರಥದೊಂದಿಗೆ ಹೊಸಕಟ್ಟೆ ಉತ್ಸವ ಪೂರ್ಣಗೊಂಡಿತು.
ದೇವಳದಿಂದ ವಸಂತ ಮಹಲ್‌ನ ವರೆಗೆ ಉತ್ಸವದ ಸಂದಭìದಲ್ಲಿ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಕೆಗಾಗಿ ಹಣತೆ ಹಚ್ಚಿದರು. ನ. 30ರಂದು ಎರಡನೇ ದಿನ ಕೆರೆಕಟ್ಟೆ ಉತ್ಸವ ಸಂಪನ್ನಗೊಂಡಿತು.
ಇಂದು ಲಲಿತೋದ್ಯಾನ ಉತ್ಸವ,
ಲಲಿತಕಲಾ ಗೋಷ್ಠಿ
ಲಕ್ಷದೀಪೋತ್ಸವದ ಮೂರನೇ ದಿನ ಡಿ. 1ರಂದು ರಾತ್ರಿ ಲಲಿತೋದ್ಯಾನ ಉತ್ಸವ ಜರಗಲಿದೆ. ಸಂಜೆ 5.30ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾ ಗೋಷ್ಠಿ ನಡೆಯಲಿದೆ. ಸಂಜೆ 5.30ರಿಂದ 7ರ ವರೆಗೆ ವಾದ್ಯಗೋಷ್ಠಿ, 7ರಿಂದ 8.30ರ ವರೆಗೆ ತತ್ವಸಿಂಚನದಡಿ; ಗಾಯನ; ಡಾ| ಪದ್ಮಿನಿ ಓಕ್ ಮತ್ತು ತಂಡದವರಿಂದ, ರಾತ್ರಿ 8.30ರಿಂದ 10ರ ವರೆಗೆ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದಿಂದ ನೃತ್ಯರೂಪಕ ಜರಗಲಿದೆ.