ಸಿದ್ದಾಪುರ: ಕರಾವಳಿ ಸಹಿತ ಮಲೆನಾಡು ಪ್ರದೇಶದಲ್ಲಿ ಜು. 3ರಂದು ನಿರಂತರವಾಗಿ ಸುರಿದ ಮಳೆಗೆ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿಯುವ ಕುಬ್ಜಾ ನದಿ ಉಕ್ಕಿ ಹರಿದು, ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಗೆ ನುಗ್ಗಿದೆ.
ಕುಬ್ಜಾ ನದಿ ಮತ್ತು ನಾಗತೀರ್ಥ ಸಮಾಗಮಗೊಂಡು ನೀರು ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದೆ.
ಕುಬ್ಜೆಯು ಬ್ರಾಹ್ಮಿ ದುರ್ಗಾಪರ ಮೇಶ್ವರಿ ದೇವಿಯನ್ನು ಸ್ನಾನ ಮಾಡಿಸುವುದು ಪ್ರತಿವರ್ಷದ ವಾಡಿಕೆ. ವರ್ಷಕ್ಕೊಮ್ಮೆ ಈ ರೀತಿ ಸ್ನಾನ ಮಾಡಿಸುವುದು ಪುರಾಣ ಕಾಲದಿಂ ದಲೂ ನಡೆದು ಬಂದಿದೆ ಎಂಬ ನಂಬಿಕೆ ಇದೆ. ಶ್ರೀದೇವಿಗೆ ಸ್ನಾನ ಆಗುತ್ತಿದ್ದಂತೆ ನಾನಾ ಮೂಲೆಗಳಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ನೀರಿನಲ್ಲಿ ಮಿಂದು ಪುಳಕಗೊಂಡರು. ಈ ನೀರಿನಲ್ಲಿ ಸ್ನಾನ ಮಾಡಿದರೆ ರೋಗ- ರುಜಿನಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
ಗರ್ಭಗುಡಿಯ ಉದ್ಭವಲಿಂಗದ ಮೇಲ್ಭಾಗದಲ್ಲಿ ಸುಮಾರು ಒಂದೂವರೆ ಅಡಿಗೂ ಹೆಚ್ಚು ನೀರು ನಿಂತಿರುವುದು 34 ವರ್ಷದಲ್ಲೇ ಪ್ರಥಮ. ನನ್ನ ಆಡಳಿತದ 35 ವರ್ಷಗಳಲ್ಲಿ ದೇವಸ್ಥಾನದ ಒಳಗೆ ಇಷ್ಟು ನೀರು ನುಗ್ಗಿದ್ದನ್ನು ನೋಡಿಲ್ಲ. ಬುಧವಾರ ಮಧ್ಯರಾತ್ರಿ 1.30ರಿಂದ ಗುರುವಾರ ಬೆಳಗ್ಗಿನ ಜಾವದ ತನಕ ಒಂದೇ ಮಟ್ಟದಲ್ಲಿ ಗರ್ಭಗುಡಿಯಲ್ಲಿ ನೀರು ನಿಂತಿದೆ. ರಾತ್ರಿ 8.30ರ ತನಕ ಕುಬ್ಜಾ ನದಿಯಲ್ಲಿ ಅಷ್ಟೊಂದು ನೀರು ಇರಲಿಲ್ಲ.
-ಎಸ್. ಸಚ್ಚಿದಾನಂದ ಚಾತ್ರ, ಆನುವಂಶಿಕ ಆಡಳಿತ ಧರ್ಮದರ್ಶಿ