Advertisement

“ವ್ರತನಿಯಮ ಪಾಲನೆಯಿಂದ ಮನೆಯೇ ಮಂದಿರ’

12:40 AM Feb 03, 2022 | Team Udayavani |

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ವಿರಾಜಮಾನರಾಗಿರುವ ಭಗವಾನ್‌ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ 40ನೇ ವರ್ಧಂತ್ಯುತ್ಸದ ಪ್ರಯುಕ್ತ ಬುಧವಾರ ಭವ್ಯಅಗ್ರೋದಕ ಮೆರ ವಣಿಗೆ ಬಳಿಕ ಭಗವಾನ್‌ ಬಾಹುಬಲಿ ಮೂರ್ತಿಗೆ 216 ಕಲಶಗಳಿಂದ ಪಾದಾಭಿಷೇಕ ನೆರವೇರಿತು.

Advertisement

ನೀರು, ಹಾಲು, ಎಳನೀರು, ಕಬ್ಬಿನರಸ, ಅರಿಶಿನ ಶ್ರೀಗಂಧ, ಚಂದನ, ಮೊದಲಾದ ಮಂಗಲ ದ್ರವ್ಯಗಳಿಂದ ಪಾದಾಭಿಷೇಕ ನಡೆಯಿತು. ಉಜಿರೆಯ ಎಸ್‌ಡಿಎಂ ಕಾಲೇಜು ಮತ್ತು ಸಿದ್ಧವನ ಗುರುಕುಲದ ವಿದ್ಯಾರ್ಥಿ ಗಳು ಹಾಗೂ ಬಾಹುಬಲಿ ಸೇವಾ ಸಮಿತಿ ಸದಸ್ಯರಿಂದ ಪೂಜಾ ಮಂತ್ರ ಪಠಣ, ಪಂಚ ನಮಸ್ಕಾರ ಮಂತ್ರ ಪಠಣ ಹಾಗೂ ಜಿನಭಕ್ತಿ ಗೀತೆಗಳ ಗಾಯನ ನಡೆಯಿತು. ಪೂರ್ಣ ಕುಂಭಾಭಿಷೇಕ, ಪುಷ್ಪವೃಷ್ಟಿ, ಶಾಂತಿಮಂತ್ರ ಪಠಣ ಹಾಗೂ ಮಹಾ ಮಂಗಳಾರತಿಯೊಂದಿಗೆ ಸಮಾರಂಭ ಸಮಾಪನಗೊಂಡಿತು.

ಮಂಗಲ ಪ್ರವಚನ
ಕಾರ್ಕಳ ಜೈನ ಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಲ ಪ್ರವಚನ ನೀಡಿ, ಶ್ರದ್ಧಾ-ಭಕ್ತಿ ಯಿಂದ, ದೃಢ ಸಂಕಲ್ಪದೊಂದಿಗೆ ವ್ರತ- ನಿಯಮಗಳ ಪಾಲನೆಯ ಮೂಲಕ ಗೃಹಾಲಯವನ್ನೇ ಜಿನಾ ಲಯವಾಗಿಸಿ ಕೊಳ್ಳಬೇಕು. ಜಪ, ತಪ, ಧ್ಯಾನ, ಸ್ವಾಧ್ಯಾಯ, ಗುರುಗಳ ಸೇವೆ ಮೊದಲಾದ ಶ್ರಾವಕರ ಷಟ್‌ ಕ್ರಿಯೆಗಳನ್ನು ನಿಷ್ಠೆಯಿಂದ ಮಾಡಿ ದಾಗ ಪಾಪ ಕರ್ಮಗಳ ಕೊಳೆ ಕಳೆದು ಆತ್ಮನೇ ಪರಮಾತ್ಮನಾಗುತ್ತಾನೆ. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಹೇಳಿದರು.

ಮಾನವ ಜನ್ಮವೇ ಶ್ರೇಷ್ಠ
ಕ್ಷುಲ್ಲಕ ನಿರ್ವಾಣ ಸಾಗರ ಮುನಿ ಮಹಾರಾಜರು ಮಾತನಾಡಿ, ಮೋಕ್ಷ ಪ್ರಾಪ್ತಿಗೆ ಮಾನವ ಜನ್ಮವೇ ಶ್ರೇಷ್ಠ ಮಾಧ್ಯಮವಾಗಿದೆ. ಪಾಪ ಕರ್ಮ ಗಳ ನಾಶದೊಂದಿಗೆ ಅಕ್ಷಯ ಸುಖವನ್ನೀ ಯುವ ಮೋಕ್ಷ ಪ್ರಾಪ್ತಿಯೇ ಜೀವನದ ಗುರಿಯಾಗಬೇಕು ಎಂದರು.

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಶ್ರದ್ಧಾ ಅಮಿತ್‌, ಅಮಿತ್‌, ಡಿ. ಸುರೇಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ಡಿ. ಹರ್ಷೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ಡಾ| ನೀತಾ ರಾಜೇಂದ್ರ ಕುಮಾರ್‌, ಡಿ. ಶ್ರೇಯಸ್‌ ಕುಮಾರ್‌, ಸಂಹಿತಾ, ಡಿ. ನಿಶ್ಚಲ್‌ ಕುಮಾರ್‌, ಜಿತೇಶ್‌ ಮತ್ತು ಶ್ರುತಾ ಜಿತೇಶ್‌, ಮೈತ್ರಿ ಉಪಸ್ಥಿತರಿದ್ದರು. ಡಾ| ಶಶಿಕಾಂತ ಜೈನ್‌ ಮತ್ತು ಮಹಾವೀರ ಜೈನ್‌ ಇಚಿಲಂಪಾಡಿ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next