ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ “ಪಡ್ಡೆಹುಲಿ’ ಎಂಬ ಸಿನಿಮಾ ಮಾಡುತ್ತಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ಚಿತ್ರದ ಪ್ರೋಮೋ ಶೂಟ್ ಕೂಡಾ ಆಗಿದೆ. ಚಿತ್ರಕ್ಕೆ ಇಂದು ಮುಹೂರ್ತ ನಡೆಯಲಿದೆ. ನಿರ್ಮಾಪಕ ಮಂಜು ಅವರು ತಮಿಳಿನ “ಪಿಚ್ಚೈಕಾರನ್’ ಸಿನಿಮಾದ ರೀಮೇಕ್‌ನಲ್ಲಿ ನಟಿಸುವಂತೆ ಮಗನಿಗೆ ಹೇಳಿದ್ದರಂತೆ. ಮೊದಲು ಒಪ್ಪಿಕೊಂಡಿದ್ದ ಶ್ರೇಯಸ್, ನಂತರ ಆ ಸಿನಿಮಾ ಮಾಡಲ್ಲ ಎಂದರಂತೆ.
“ಅನೇಕರು ಶ್ರೇಯಸ್‌ನ ಹೀರೋ ಮಾಡಿ, ಸಿನಿಮಾ ಮಾಡುತ್ತೀನಿ ಎಂದು ಬಂದರು. ಮೊದಲು ಶ್ರೇಯಸ್‌ಗೆ ಸಿನಿಮಾದ ಆಸಕ್ತಿ ಬರಬೇಕೆಂದು ಸುಮ್ಮನಿದ್ದೆ. ಈಗ ಅವನಿಗೆ ಆಸಕ್ತಿ ಬಂದು, ಸಾಕಷ್ಟು ತಯಾರಿ ಮಾಡಿಕೊಂಡಿದ್ದಾನೆ. “ಪಿಚ್ಚೈಕಾರನ್’ ರೀಮೇಕ್‌ನಲ್ಲಿ ನಟಿಸಲು ಹೇಳಿದ್ದೆ. ಆ ನಂತರ ಬೇಡ ಅಂದ. ನಾನು ವಿಷ್ಣುವರ್ಧನ್ ಅವರನ್ನು ಹೇಗೆ ಫಾಲೋ ಮಾಡುತ್ತಿದ್ದೇನೋ ಅದೇ ರೀತಿ ಶ್ರೇಯಸ್, ಸುದೀಪ್ ಅವರನ್ನು ಫಾಲೋ ಮಾಡುತ್ತಿದ್ದಾನೆ.
ಸುದೀಪ್ ಅವರು ಮೊದಲ ಸಿನಿಮಾ ರೀಮೇಕ್ ಬೇಡ ಎಂದರಂತೆ. ಆಗ ಗೊತ್ತಾಯಿತು, ಸ್ವಿಚ್ ಅಲ್ಲಿದೆ ಎಂದು. ಒಬ್ಬ ಹೀರೋ ಆಗಿ ಆತ ಯಾವ ನಿರ್ಮಾಪಕನಿಗೂ ತೊಂದರೆ ಕೊಡಬಾರದು, ನಿರ್ಮಾಪಕರ ಕಣ್ಣಲ್ಲಿ ಕಣ್ಣೀರು ಹಾಕಿಸಬಾರದು ಎಂದು ಬಯಸುತ್ತೇನೆ’ ಎಂದು ತಮ್ಮ ಮಗನ ಸಿನಿಮಾ ಬಗ್ಗೆ ಹೇಳುತ್ತಾರೆ. ಹಾಗಾದರೆ “ಪಡ್ಡೆಹುಲಿ’ ಚಿತ್ರ ಸ್ವಮೇಕಾ ಎಂದು ನೀವು ಕೇಳಬಹುದು.
ಚಿತ್ರತಂಡ ಹೇಳುವಂತೆ ಇದು ಸ್ವಮೇಕ್ ಸಿನಿಮಾ. ಚಿತ್ರದುರ್ಗದ ಹಿನ್ನೆಲೆಯಲ್ಲಿ ಕಥೆ ಆರಂಭವಾಗುತ್ತದೆ. ಇಲ್ಲಿ ನಾಯಕನದು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಹಿಪ್‌ಆಪ್ ಸಿಂಗರ್ ಆಗಬೇಕೆಂದು ಕನಸು ಕಾಣುತ್ತಾ ಮುಂದೆ ಸಾಗುವ ಪಾತ್ರವಂತೆ. “ಪಡ್ಡೆಹುಲಿ’ ಸ್ವಮೇಕ್ ಸಿನಿಮಾ ಎಂದು ಚಿತ್ರತಂಡ ಹೇಳುತ್ತಿದ್ದಂತೆ ಗಾಂಧಿನಗರದಲ್ಲಿ ಇದು ರೀಮೇಕ್ ಸಿನಿಮಾ ಎಂಬ ಮಾತೂ ಓಡಾಡುತ್ತಿದೆ.
ತಮಿಳಿನ “ಮಿಸೈ ಮುರುಕ್ಕು’ ಸಿನಿಮಾದಿಂದ ಸ್ಫೂರ್ತಿ ಪಡೆದು ಈ ಚಿತ್ರವನ್ನು ರೀಮೇಕ್ ಎಂಬ ಮಾತೂ ಕೇಳಿಬರುತ್ತಿದೆ. ಆ ಚಿತ್ರದ ನಾಯಕ ಕೂಡಾ ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿ ಕೊನೆಗೆ ಖ್ಯಾತ ಹಿಪ್‌ಆಪ್ ಸಿಂಗರ್ ಆಗುವ ಕಥೆಯೊಂದಿಗೆ ಸಾಗುತ್ತದೆ. ಅಂದಹಾಗೆ, “ಪಡ್ಡೆಹುಲಿ’ ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ.