Advertisement

Team India; ಇಶಾನ್ ಕಿಶನ್- ಶ್ರೇಯಸ್ ಅಯ್ಯರ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಬಿಸಿಸಿಐ

02:48 PM Feb 23, 2024 | Team Udayavani |

ಮುಂಬೈ: ಭಾರತೀಯ ಕ್ರಿಕೆಟ್ ಮಂಡಳಿಯಿಂದ ಹೊರಹೊಮ್ಮುತ್ತಿರುವ ಇತ್ತೀಚಿನ ವರದಿಗಳು ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್‌ ಗೆ ಕ್ರಿಕೆ್ ಬದುಕಿಗೆ ಉತ್ತಮ ದಾರಿ ತೋರಿಸುತ್ತಿಲ್ಲ. ಆಯಾ ಕಾರಣಗಳನ್ನು ಉಲ್ಲೇಖಿಸಿ ಆನ್-ಫೀಲ್ಡ್ ಕ್ರಿಕೆಟ್‌ ನಿಂದ ದೂರವಿದ್ದು, ಮಂಡಳಿಯ ಕಟ್ಟುನಿಟ್ಟಿನ ನಿರ್ದೇಶನದ ಹೊರತಾಗಿಯೂ ರಣಜಿ ಟ್ರೋಫಿ ಪಂದ್ಯಗಳನ್ನು ಕಡೆಗಣಿಸಿರುವ ಉಭಯರ ವಿರುದ್ಧ ಇದೀಗ ಬಿಸಿಸಿಐ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ.

Advertisement

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು 2023-24ರ ಋತುವಿಗಾಗಿ ಕೇಂದ್ರೀಯ ಒಪ್ಪಂದದ ಆಟಗಾರರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ, ಇದನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ ಎನ್ನುತ್ತಿದೆ ವರದಿ.

ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಆ ಪಟ್ಟಿಯಿಂದ ಹೊರಗಿಡುವ ಸಾಧ್ಯತೆಯಿದೆ. ಯಾಕೆಂದರೆ ಬಿಸಿಸಿಐನ ಆದೇಶದ ಹೊರತಾಗಿಯೂ ಇಬ್ಬರೂ ದೇಶೀಯ ಕ್ರಿಕೆಟ್‌ ನಲ್ಲಿ ಆಡುತ್ತಿಲ್ಲ ಎಂದು ಬಿಸಿಸಿಐ ಮೂಲವನ್ನು ಉದ್ದೇಶಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಭಾರತ ತಂಡದಲ್ಲಿ ಆಯ್ಕೆಯಾಗದ ಅಥವಾ ಎನ್‌ಸಿಎಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಕೇಂದ್ರೀಯ ಗುತ್ತಿಗೆ ಆಟಗಾರರಿಗೆ ಬಿಸಿಸಿಐ ರಣಜಿ ಟ್ರೋಫಿಯಲ್ಲಿ ಆಯಾ ರಾಜ್ಯ ತಂಡಗಳಿಗೆ ಕಾಣಿಸಿಕೊಳ್ಳಲು ಮೊದಲ ಎಚ್ಚರಿಕೆ ನೀಡಿದ ನಂತರವೂ ಈ ಆಟಗಾರರು ಆದೇಶವನ್ನು ಉಲ್ಲಂಘಿಸಿದ್ದಾರೆ.

ಕಳೆದ ವರ್ಷದ ಕೊನೆಯ ದಕ್ಷಿಣ ಆಫ್ರಿಕಾದ ವೈಟ್ ಬಾಲ್ ಪ್ರವಾಸದ ನಂತರ ಮಾನಸಿಕ ಒತ್ತಡದ ಕಾರಣದಿಂದ ಇಶಾನ್ ಕಿಶನ್ ಆಯ್ಕೆಗೆ ಅಲಭ್ಯವಾಗಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟರ್ ಅಯ್ಯರ್ ಅವರು ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಮುನ್ನೆಚ್ಚರಿಕೆಯ ಆಧಾರದ ಮೇಲೆ ಅಂತಿಮ ಮೂರು ಟೆಸ್ಟ್‌ಗಳಿಗೆ ಭಾರತ ತಂಡದಿಂದ ಕೈಬಿಡಲಾಯಿತು.

Advertisement

ಇಶಾನ್ ಕಿಶನ್ ರಣಜಿ ಪಂದ್ಯಗಳನ್ನು ಬಿಟ್ಟು ಬರೋಡಾದಲ್ಲಿ ತಮ್ಮ ಐಪಿಎಲ್ ತಂಡದ (ಮುಂಬೈ ಇಂಡಿಯನ್ಸ್) ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಅಯ್ಯರ್ ಅವರು ಅಸ್ಸಾಂ ವಿರುದ್ಧ ತಮ್ಮ ಕೊನೆಯ ಲೀಗ್ ಪಂದ್ಯಕ್ಕಾಗಿ ಮುಂಬೈಗೆ ಆಯ್ಕೆಯಾಗಲು ಅಲಭ್ಯರಾಗಿದ್ದರು. ಬರೋಡಾ ವಿರುದ್ಧದ ಅವರ ನಡೆಯುತ್ತಿರುವ ನಾಕೌಟ್ ಪಂದ್ಯಕ್ಕೆ ಮುನ್ನ ಬೆನ್ನು ನೋವಿನ ಕಾರಣ ನೀಡಿದ್ದರು.

ಶ್ರೇಯಸ್ ಅಯ್ಯರ್ ಅವರು ಫಿಟ್ ಆಗಿದ್ದಾರೆ, ಅವರು ಆಡಲು ಸಮರ್ಥರಿದ್ದಾರೆ ಎಂದು ಎನ್ ಸಿಎ ವರದಿ ನೀಡಿದೆ. ಆದರೆ ಅಯ್ಯರ್ ಮಾತ್ರ ಅನಾರೋಗ್ಯ ಎಂದು ಹೇಳಿ ಪಂದ್ಯಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next