Advertisement
ಮುಂಬಯಿ: ಭಾರತ “ಎ’-ಆಸ್ಟ್ರೇಲಿಯ ನಡುವಿನ ತ್ರಿದಿನ ಅಭ್ಯಾಸ ಪಂದ್ಯ ನಿರೀಕ್ಷೆಯಂತೆ ಡ್ರಾ ಗೊಂಡರೂ ಭರವಸೆಯ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅಜೇಯ ದ್ವಿಶತಕವೊಂದನ್ನು ಬಾರಿಸಿ ಹೀರೋ ಎನಿಸಿಕೊಂಡರು. ಆಸ್ಟ್ರೇಲಿಯವನ್ನು ದ್ವಿತೀಯ ಸರದಿ ಯಲ್ಲಿ ನಿಯಂತ್ರಿಸುವ ಮೂಲಕ ಆತಿಥೇಯ ಬೌಲರ್‌ಗಳೂ ಮೆರೆದಾಟ ನಡೆಸಿದರು.
ಭಾರತ 4ಕ್ಕೆ 176 ರನ್ ಮಾಡಿದಲ್ಲಿಂದ ಅಂತಿಮ ದಿನದಾಟ ಮುಂದುವರಿಸಿತು. 85 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಶ್ರೇಯಸ್ ಅಯ್ಯರ್ ಆಸೀಸ್ ಬೌಲರ್‌ಗಳನ್ನು ದಂಡಿಸುತ್ತ ಸಾಗಿ ಬಹಳ ಬೇಗ ಶತಕವನ್ನು ಪೂರ್ತಿಗೊಳಿಸಿದರು. ಬ್ಯಾಟಿಂಗ್ ವೈಭವವನ್ನು ಮುಂದುವರಿಸಿ ದ್ವಿಶತಕವನ್ನೂ ಒಲಿಸಿಕೊಂಡರು.
Related Articles
Advertisement
ಸೆಂಚುರಿ ಪೂರ್ತಿಗೊಳಿಸಿದ ಬಳಿಕವೂ ತೃಪ್ತರಾಗದ ಅಯ್ಯರ್ ಮತ್ತಷ್ಟು ಆಕ್ರಮಣಕಾರಿಯಾಗಿ ಮುನ್ನುಗ್ಗಿ ದರು. ಇವರನ್ನು ತಡೆಯುವುದೇ ಆಸೀಸ್ ಬೌಲರ್‌ಗಳಿಗೆ ಸವಾಲಾಯಿತು. 210 ಎಸೆತಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟಿನ ಮೊದಲ ಡಬಲ್ ಸೆಂಚುರಿ ದಾಖಲಿಸಿ ವಿಜೃಂಭಿಸಿದರು. ಇದರಲ್ಲಿ 27 ಬೌಂಡರಿ, 7 ಸಿಕ್ಸರ್ ಸೇರಿತ್ತು. ಅಯ್ಯರ್ ದ್ವಿಶತಕ ಬಾರಿಸಿದ ಕೂಡಲೇ ಭಾರತ “ಎ’ ಆಲೌಟ್ ಆಯಿತು. ಹೈದರಾಬಾದ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಮಿಂಚಿದ ಅಯ್ಯರ್ ಅಜೇಯ 100 ರನ್ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಗೌತಮ್ ಗಮ್ಮತ್ತಿನ ಆಟರವಿವಾರದ ಆಟದಲ್ಲಿ ಕಾಂಗರೂ ದಾಳಿಗೆ ಬೆದರಿಕೆ ಯೊಡ್ಡಿದ ಮತ್ತೂಬ್ಬ ಆಟಗಾರ ಕರ್ನಾಟಕದ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್. ಇವರ ಕೊಡುಗೆ 74 ರನ್. ಸ್ಫೋಟಕ ಆಟವಾಡಿ ಗಮನ ಸೆಳೆದ ಗೌತಮ್ ಕೇವಲ 68 ಎಸೆತಗಳಿಂದ 74 ರನ್ ಬಾರಿಸಿದರು. 4 ಸಿಕ್ಸರ್, 10 ಬೌಂಡರಿ ಸಿಡಿಸಿ ಕಾಂಗರೂಗಳನ್ನು ಬೆಚ್ಚಿಬೀಳಿಸಿದರು. ಗೌತಮ್ ಅವರದು ಭಾರತ “ಎ’ ಸರದಿಯ 2ನೇ ಸರ್ವಾಧಿಕ ಮೊತ್ತವಾಗಿತ್ತು. ಅಯ್ಯರ್-ಗೌತಮ್ ಜೋಡಿಯಿಂದ 7ನೇ ವಿಕೆಟಿಗೆ 138 ರನ್ ಹರಿದು ಬಂತು. ಗಾಯಾಳಾಗಿದ್ದ ಗೌತಮ್ ಮೊದಲ ಇನ್ನಿಂಗ್ಸಿನಲ್ಲಿ ಬೌಲಿಂಗಿಗೆ ಇಳಿದಿರಲಿಲ್ಲ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯದ ಬ್ಯಾಟಿಂಗ್ ನಿರೀಕ್ಷೆಗೆ ತಕ್ಕಂತಿರಲಿಲ್ಲ. ವಾರ್ನರ್ (35), ರೆನ್‌ಶಾ (10), ಮ್ಯಾಕ್ಸ್‌ವೆಲ್ (1) ಮತ್ತು ಹ್ಯಾಂಡ್ಸ್‌ಕಾಂಬ್ (37) ವಿಕೆಟ್ ಉರುಳಿಸಿಕೊಂಡು 110 ರನ್ ಮಾಡಿತು. ಓ’ಕೀಫ್ 19, ವೇಡ್ 6 ರನ್ ಮಾಡಿ ಔಟಾಗದೆ ಉಳಿದರು. ಈ ವಿಕೆಟ್‌ಗಳು ಪಾಂಡ್ಯ, ಸೈನಿ, ದಿಂಡ ಹಾಗೂ ಪಂತ್ ಪಾಲಾದವು.
ಫೆ. 23ರಿಂದ ಭಾರತ-ಆಸ್ಟ್ರೇಲಿಯ ನಡುವಿನ ಮೊದಲ ಟೆಸ್ಟ್ ಪಂದ್ಯ ಪುಣೆಯಲ್ಲಿ ಆರಂಭವಾಗಲಿದೆ. ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-7 ವಿಕೆಟಿಗೆ 469 ಡಿಕ್ಲೇರ್ ಮತ್ತು 4 ವಿಕೆಟಿಗೆ 110 (ವಾರ್ನರ್ 35, ಹ್ಯಾಂಡ್ಸ್‌ಕಾಂಬ್ 37, ಪಂತ್ 9ಕ್ಕೆ 1, ದಿಂಡ 18ಕ್ಕೆ 1, ಸೈನಿ 20ಕ್ಕೆ 1, ಪಾಂಡ್ಯ 30ಕ್ಕೆ 1). ಭಾರತ “ಎ’-403 (ಅಯ್ಯರ್ ಔಟಾಗದೆ 202, ಗೌತಮ್ 74, ಲಿಯೋನ್ 162ಕ್ಕೆ 4, ಓ’ಕೀಫ್ 101ಕ್ಕೆ 3, ಬರ್ಡ್ 60ಕ್ಕೆ 2).