Advertisement

ನಾನೇ ಪಂದ್ಯ ಮುಗಿಸಿದರೆ ಹೆಚ್ಚು  ಖುಷಿಯಾಗುತ್ತಿತ್ತು: ಶ್ರೇಯಸ್‌

12:45 AM May 12, 2017 | Team Udayavani |

ಕಾನ್ಪುರ: ‘ನನ್ನ ಸಾಧನೆ ವಿಪರೀತ ಖುಷಿ ತಂದಿದೆ. ಆದರೆ ನಾನೇ ಗೆಲುವಿನ ಹೊಡೆತ ಬಾರಿಸಿ ಪಂದ್ಯ ಮುಗಿಸಿದ್ದರೆ ಮತ್ತಷ್ಟು ಖುಷಿ ಆಗುತ್ತಿತ್ತು…’ ಎಂದಿದ್ದಾರೆ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಗೆಲುವಿನ ರೂವಾರಿ ಶ್ರೇಯಸ್‌ ಅಯ್ಯರ್‌. ಬುಧವಾರ ರಾತ್ರಿ ನಡೆದ ಗುಜರಾತ್‌ ಲಯನ್ಸ್‌ ವಿರುದ್ಧದ ದೊಡ್ಡ ಮೊತ್ತದ ಮೇಲಾಟದಲ್ಲಿ ಅಯ್ಯರ್‌ ಏಕಾಂಗಿಯಾಗಿ ಹೋರಾಡಿ ಡೆಲ್ಲಿಯನ್ನು ಗೆಲ್ಲಿಸಿದ್ದರು. ‘ಟಿ-20 ಹೊಡಿಬಡಿ ಆಟವೇ ಇರಬಹುದು. ಆದರೆ ನಮ್ಮ ಆಟಕ್ಕೆ ಹೊಂದಿಕೊಳ್ಳಬೇಕಾದರೆ ನಾವು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಲೇ ಬೇಕಾಗುತ್ತದೆ. ಕೊನೆಯಲ್ಲಿ ಎಲ್ಲ ಡಾಟ್‌ ಬಾಲ್‌ಗ‌ಳನ್ನೂ ರನ್‌ ಆಗಿ ಪರಿವರ್ತಿಸಿ ಸರಿದೂಗಿಸಬೇಕು. ಇದಕ್ಕೆ ಬೇಕಿರುವುದು ನಮ್ಮ ಮೇಲಿನ ನಂಬಿಕೆ, ವಿಶ್ವಾಸ…’ ಎಂದು 57 ಎಸೆತಗಳಲ್ಲಿ 96 ರನ್‌ (15 ಬೌಂಡರಿ, 2 ಸಿಕ್ಸರ್‌) ಬಾರಿಸಿದ ಅಯ್ಯರ್‌ ಹೇಳಿದರು.

Advertisement

ಕಾನ್ಪುರದ ‘ಗ್ರೀನ್‌ಪಾರ್ಕ್‌’ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌ 5 ವಿಕೆಟಿಗೆ 195 ರನ್‌ ಪೇರಿಸಿ ಸವಾಲೊಡ್ಡಿತು. ಡೆಲ್ಲಿ 19.4 ಓವರ್‌ಗಳಲ್ಲಿ 8 ವಿಕೆಟಿಗೆ 197 ರನ್‌ ಬಾರಿಸಿ ರೈನಾ ಪಡೆ ವಿರುದ್ಧ ಸತತ 2ನೇ ‘ಚೇಸಿಂಗ್‌ ಜಯ’ ದಾಖಲಿಸಿತು. ಮೊದಲ ಸುತ್ತಿನ ಪಂದ್ಯದಲ್ಲಿ ಡೆಲ್ಲಿ 3ಕ್ಕೆ 214 ರನ್‌ ಬಾರಿಸಿ ಜಯಭೇರಿ ಮೊಳಗಿಸಿತ್ತು.

ಗುಜರಾತ್‌ಗೆ ಅಯ್ಯರ್‌ ಅಡ್ಡಿ


ಇದೇನೂ ಡೆಲ್ಲಿ ಗೆಲ್ಲುವ ಪಂದ್ಯವಾಗಿರ ಲಿಲ್ಲ. 15 ರನ್‌ ಆಗುವಷ್ಟರಲ್ಲಿ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಾದ ಸಂಜು ಸ್ಯಾಮ್ಸನ್‌ (10) ಮತ್ತು ರಿಷಬ್‌ ಪಂತ್‌ (4) ಔಟಾಗಿ ತೆರಳಿದ್ದರು. ನಾಯರ್‌ 30 ರನ್‌ ಹೊಡೆದು ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ಆದರೆ 14ನೇ ಓವರ್‌ ವೇಳೆ 121 ರನ್ನಿಗೆ ಡೆಲ್ಲಿಯ 6 ವಿಕೆಟ್‌ ಉದುರಿತ್ತು. ಗೆಲುವಿಗಾಗಿ ಗುಜರಾತ್‌ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಆಗಲೂ ಅಯ್ಯರ್‌ ಬ್ಯಾಟಿಂಗ್‌ ಮ್ಯಾಜಿಕ್‌ ನಡೆಸಬಹುದೆಂಬ ನಂಬಿಕೆ ಯಾರಲ್ಲೂ ಇರಲಿಲ್ಲ. ಆದರೆ ಪ್ಯಾಟ್‌ ಕಮಿನ್ಸ್‌ (24) ಅವರಿಂದ ಉತ್ತಮ ಬೆಂಬಲ ಪಡೆದ ಅಯ್ಯರ್‌ 7ನೇ ವಿಕೆಟಿಗೆ ಕೇವಲ 4.3 ಓವರ್‌ಗಳಲ್ಲಿ 61 ರನ್‌ ಪೇರಿಸಿ ಡೆಲ್ಲಿಯನ್ನು ಹಳಿಗೆ ತಂದರು. 

ಅಂತಿಮ ಓವರ್
ಬಾಸಿಲ್‌ ಥಂಪಿ ಪಾಲಾದ ಅಂತಿಮ ಓವರಿನಲ್ಲಿ ಡೆಲ್ಲಿ ಜಯಕ್ಕೆ 9 ರನ್‌ ಅಗತ್ಯವಿತ್ತು. ಅಯ್ಯರ್‌ ಕ್ರೀಸಿನಲ್ಲಿದ್ದರು. ಮೊದಲ ಎಸೆತಕ್ಕೆ ಲೆಗ್‌ಬೈ ರೂಪದಲ್ಲಿ 2 ರನ್‌ ಬಂತು. 2ನೇ ಎಸೆತಕ್ಕೆ ಅಯ್ಯರ್‌ ವಿಕೆಟ್‌ ಬಿತ್ತು. ಗುಜರಾತ್‌ ಮೊಗದಲ್ಲಿ ಮತ್ತೆ ಗೆಲುವಿನ ಕಳೆ ಗೋಚರಿಸಿತು. ಡೆಲ್ಲಿ 4 ಎಸೆತಗಳಿಂದ 7 ರನ್‌ ತೆಗೆಯಬೇಕಿತ್ತು. ಆಗ ಕ್ರೀಸ್‌ ಇಳಿದ ಅಮಿತ್‌ ಮಿಶ್ರಾ ಸತತ 2 ಬೌಂಡರಿ ಬಾರಿಸಿ ಡೆಲ್ಲಿಯ ಗೆಲುವನ್ನು ಸಾರಿಯೇ ಬಿಟ್ಟರು!

ಈ ವರ್ಷ ಬ್ಯಾಟಿಂಗಿನಲ್ಲಿ ಕ್ಲಿಕ್‌ ಆಗದ ಕಾರಣ ಶ್ರೇಯಸ್‌ ಅಯ್ಯರ್‌ ಅವರನ್ನು ಆರಂಭಿಕ ಸ್ಥಾನದಿಂದ 4ನೇ ಕ್ರಮಾಂಕಕ್ಕೆ ಇಳಿಸಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಅಯ್ಯರ್‌, ‘ಇದರಿಂದ ನನಗೆ ಅಧಿಕಾರಯುತವಾಗಿ ಇನ್ನಿಂಗ್ಸ್‌ ಬೆಳೆಸಿಕೊಂಡು ಹೋಗುವ ಬ್ಯಾಟಿಂಗ್‌ ಜವಾಬ್ದಾರಿ ಲಭಿಸಿತು. ಇದಕ್ಕೆ ಇಂದಿನ ಆಟವೊಂದು ಉತ್ತಮ ಉದಾಹರಣೆ…’ ಎಂದರು.

Advertisement

‘ಬೇರೆ ಬೇರೆ ಬ್ಯಾಟಿಂಗ್‌ ಕ್ರಮಾಂಕಕ್ಕೆ ಹೊಂದಿಕೊಳ್ಳುವುದು ದೊಡ್ಡ ಸವಾಲು. ಆದರೆ ನೀವು ವೃತ್ತಿಪರ ಆಟಗಾರರಾದ್ದರಿಂದ ಇದನ್ನೆಲ್ಲ ನಿಭಾಯಿಸಿಕೊಂಡು ಹೋಗಲೇ ಬೇಕು. ಯಾವ ಕ್ರಮಾಂಕದಲ್ಲೂ ಬ್ಯಾಟ್‌ ಮಾಡಲು ಸಿದ್ಧರಿರಬೇಕು…’ ಎಂಬುದಾಗಿ ಟಿ-ಟ್ವೆಂಟಿಯಲ್ಲಿ ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶಿಸಿದ ಅಯ್ಯರ್‌ ಹೇಳಿದರು.

ಈಗಾಗಲೇ ಮುಂದಿನ ಸುತ್ತಿನ ರೇಸ್‌ನಿಂದ ಹೊರಬಿದ್ದಿರುವುದರಿಂದ ಈ ಚೇಸಿಂಗ್‌ ಹಾಗೂ ಗೆಲುವು ಡೆಲ್ಲಿ ಪ್ರತಿಷ್ಠೆಯನ್ನು ಹೆಚ್ಚಿಸಿರುವುದಂತೂ ನಿಜ.

ಸಂಕ್ಷಿಪ್ತ ಸ್ಕೋರ್‌ 
ಗುಜರಾತ್‌-5 ವಿಕೆಟಿಗೆ 195. ಡೆಲ್ಲಿ- 19.4 ಓವರ್‌ಗಳಲ್ಲಿ 8 ವಿಕೆಟಿಗೆ 197 (ಅಯ್ಯರ್‌ 96, ನಾಯರ್‌ 30, ಕಮಿನ್ಸ್‌ 24, ಫಾಕ್ನರ್‌ 39ಕ್ಕೆ 2). ಪಂದ್ಯಶ್ರೇಷ್ಠ: ಶ್ರೇಯಸ್‌ ಅಯ್ಯರ್‌.

ಎಕ್ಸ್‌ಟ್ರಾ ಇನ್ನಿಂಗ್ಸ್‌: ಪಂದ್ಯ 50 ಗುಜರಾತ್‌ – ಡೆಲ್ಲಿ
ಡೆಲ್ಲಿ ಡೇರ್‌ಡೆವಿಲ್ಸ್‌ 2 ವಿಕೆಟ್‌ಗಳ ಜಯ ಸಾಧಿಸಿತು. ಇದು ವಿಕೆಟ್‌ ಅಂತರದಲ್ಲಿ ಡೆಲ್ಲಿ ಸಾಧಿಸಿದ ಜಂಟಿ 2ನೇ ಅತೀ ಸಣ್ಣ ಜಯವಾಗಿದೆ. ಐಪಿಎಲ್‌ ಯಶಸ್ವೀ ಚೇಸಿಂಗ್‌ ವೇಳೆ 8 ಹಾಗೂ ಇದಕ್ಕಿಂತ ಹೆಚ್ಚು ವಿಕೆಟ್‌ ಉರುಳಿದ ಕೇವಲ 5ನೇ ಸಂದರ್ಭ ಇದಾಗಿದೆ.

ಡೆಲ್ಲಿ 2ನೇ ಸರ್ವಾಧಿಕ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಇದೇ ಐಪಿಎಲ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಗುಜರಾತ್‌ ವಿರುದ್ಧವೇ 209 ರನ್‌ ಬೆನ್ನಟ್ಟಿ ಗೆದ್ದದ್ದು ಡೆಲ್ಲಿಯ ದಾಖಲೆಯಾಗಿದೆ.

ಗುಜರಾತ್‌ ಲಯನ್ಸ್‌ ಸತತ 2 ಪಂದ್ಯಗಳಲ್ಲಿ 3 ಆಥವಾ ಇದಕ್ಕಿಂತ ಕಡಿಮೆ ವಿದೇಶಿ ಆಟಗಾರರನ್ನು ಆಡಿಸಿದ ಕೇವಲ 2ನೇ ತಂಡ. 2011ರ ಆರಂಭಿಕ 2 ಪಂದ್ಯಗಳಲ್ಲಿ ಕೆಕೆಆರ್‌ ಕೂಡ ಮೂರೇ ವಿದೇಶಿ ಕ್ರಿಕೆಟಿಗರನ್ನು ಆಡಿಸಿತ್ತು.

ಈ ಐಪಿಎಲ್‌ನಲ್ಲಿ 4 ಮಂದಿ ಆಟ ಗಾರರು “ನರ್ವಸ್‌ ನೈಂಟಿ’ಗೆ ಔಟಾದರು (ಲಿನ್‌, ವೋಹ್ರಾ, ಪಂತ್‌, ಅಯ್ಯರ್‌). ಇದು ಐಪಿಎಲ್‌ ಋತುವೊಂದರಲ್ಲಿ 2ನೇ ಅತ್ಯಧಿಕ ಸಂಖ್ಯೆಯ ನರ್ವಸ್‌ನೈಂಟಿ ದಾಖಲೆ. 2014ರಲ್ಲಿ ಐವರು 90-99ರ ನಡುವಿನ ಮೊತ್ತದಲ್ಲಿ ಔಟಾಗಿದ್ದರು.

ಬಾಸಿಲ್‌ ಥಂಪಿ ಐಪಿಎಲ್‌ ಋತುವೊಂದರಲ್ಲಿ ಇಬ್ಬರು ಆಟಗಾರರನ್ನು 90ರ ಮೊತ್ತದಲ್ಲಿ ಔಟ್‌ ಮಾಡಿದ 4ನೇ ಬೌಲರ್‌ ಎನಿಸಿದರು. ಈ ಪಂದ್ಯದಲ್ಲಿ ಅಯ್ಯರ್‌ ಅವರನ್ನು 96 ರನ್ನಿಗೆ ಔಟ್‌ ಮಾಡಿದ ಥಂಪಿ, ಡೆಲ್ಲಿ ವಿರುದ್ಧದ ಮೊದಲ ಸುತ್ತಿನ ಪಂದ್ಯದಲ್ಲಿ ಪಂತ್‌ ಅವರನ್ನು 97 ರನ್ನಿಗೆ ಔಟ್‌ ಮಾಡಿದ್ದರು.

ಗುಜರಾತ್‌ ಲಯನ್ಸ್‌ ಈ ಐಪಿಎಲ್‌ನಲ್ಲಿ 7 ಸಲ ಮೊದಲು ಬ್ಯಾಟಿಂಗ್‌ ನಡೆಸಿತು, 7 ಸಲವೂ ಸೋತಿತು! ಕಳೆದ ವರ್ಷ 6 ಸಲ ಮೊದಲು ಬ್ಯಾಟಿಂಗ್‌ ಮಾಡಿದ್ದ ಗುಜರಾತ್‌ ಐದರಲ್ಲಿ ಸೋತಿತ್ತು.

ಶ್ರೇಯಸ್‌ ಅಯ್ಯರ್‌ ಟಿ-ಟ್ವೆಂಟಿಯಲ್ಲಿ ಜೀವನಶ್ರೇಷ್ಠ 96 ರನ್‌ ಬಾರಿಸಿದರು. ಇದಕ್ಕೂ ಮುನ್ನ 2016ರಲ್ಲಿ ಮುಂಬಯಿ ಪರ ಆಡುತ್ತ ‘ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ’ ಪಂದ್ಯಾವಳಿಯಲ್ಲಿ ವಿದರ್ಭ ವಿರುದ್ಧ 86 ರನ್‌ ಹೊಡೆದದ್ದು ಅವರ ಅತ್ಯುತ್ತಮ ಸಾಧನೆಯಾಗಿತ್ತು.

ಶ್ರೇಯಸ್‌ ಅಯ್ಯರ್‌ 15 ಬೌಂಡರಿ ಹೊಡೆದರು. ಇದು ಐಪಿಎಲ್‌ ಇನ್ನಿಂಗ್ಸ್‌ ಒಂದರಲ್ಲಿ ಆಟಗಾರನೊಬ್ಬನಿಂದ ಸಿಡಿದ 3ನೇ ಅತ್ಯಧಿಕ ಸಂಖ್ಯೆಯ ಬೌಂಡರಿ. ಎಬಿ ಡಿ ವಿಲಿಯರ್ ಮತ್ತು ಪಾಲ್‌ ವಲ್ತಾಟಿ  ತಲಾ 19, ಅಜಿಂಕ್ಯ ರಹಾನೆ ಮತ್ತು ಮೈಕಲ್‌ ಲಂಬ್‌ ತಲಾ 16 ಬೌಂಡರಿ ಹೊಡೆದು ಮೊದಲೆರಡು ಸ್ಥಾನ ಅಲಂಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next