ಕೋಲ್ಕತ್ತಾ: ಇತ್ತೀಚೆಗಷ್ಟೇ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಮುಗಿದಿದೆ. ಎಲ್ಲಾ ಹತ್ತು ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಿದೆ. ಇದೀಗ ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ಪ್ರಾಂಚೈಸಿ ತಮ್ಮ ನೂತನ ನಾಯಕನನ್ನು ನೇಮಿಸಿದೆ.
ಹರಾಜಿನಲ್ಲಿ 12.25 ಕೋಟಿ ರೂ. ಗೆ ಖರೀದಿ ಮಾಡಿದ್ದ ಶ್ರೇಯಸ್ ಅಯ್ಯರ್ ಅವರು ಕೆಕೆಆರ್ ತಂಡದ ನೂತನ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಶ್ರೇಯಸ್ ಅಯ್ಯರ್ ಈ ಐಪಿಎಲ್ ನಿಂದ ಕೆಕೆಆರ್ ತಂಡದ ನೂತನ ಸಾರಥಿಯಾಗಲಿದ್ದಾರೆ.
ಶ್ರೇಯಸ್ ಅಯ್ಯರ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಪ್ರಾಂಚೈಸಿಯ ಆರನೇ ಕ್ಯಾಪ್ಟನ್ ಆಗಿದ್ದಾರೆ. ಈ ಮೊದಲು ಕೆಕೆಆರ್ ತಂಡವನ್ನು ಸೌರವ್ ಗಂಗೂಲಿ, ಬ್ರೆಂಡನ್ ಮೆಕಲಮ್, ಗೌತಂ ಗಂಭೀರ್, ದಿನೇಶ್ ಕಾರ್ತಿಕ್ ಮತ್ತು ಇಯಾನ್ ಮಾರ್ಗನ್ ಮುನ್ನಡೆಸಿದ್ದರು.
ಇದನ್ನೂ ಓದಿ:ರಾಜಸ್ಥಾನ ರಾಯಲ್ಸ್ ಕ್ಯಾಂಪ್ ಸೇರಿದ ಬಡ ಕ್ಷೌರಿಕನ ಪುತ್ರ..! ಈತನ ಕಥೆಯೇ ರೋಚಕ
ಕಳೆದ ಸೀಸನ್ ನಲ್ಲಿ ಆರಂಭಿಕ ಕಳಪೆ ಪ್ರದರ್ಶನ ಪರಿಣಾಮ ದಿನೇಶ್ ಕಾರ್ತಿಕ್ ಅವರನ್ನು ನಾಯಕನ ಸ್ಥಾನದಿಂದ ಇಳಿಸಿ ಇಯಾನ್ ಮಾರ್ಗನ್ ಗೆ ನಾಯಕತ್ವ ನೀಡಲಾಗಿತ್ತು. ಕೆಕೆಆರ್ ತಂಡ ಫೈನಲ್ ವರೆಗೂ ತಲುಪಿತ್ತು. ಆದರೆ ಈ ಬಾರಿ ಇಯಾನ್ ಮಾರ್ಗನ್ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದಾರೆ.