ರಿಯಲ್‌ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಭಿನಯದ “ಕಬ್ಜ’ ಸಿನಿಮಾದಲ್ಲಿ ಶ್ರೇಯಾ ಶರಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸದ್ಯ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ.
ಇತ್ತೀಚೆಗೆ ಬಿಡುಗಡೆಯಾಗಿರುವ ಕಬ್ಜ ‘ ಟೀಸರ್‌ನಲ್ಲಿ ಶ್ರೇಯಾ ಗೆಟಪ್ ಗಮನ ಸೆಳೆಯುತ್ತಿದ್ದು, ಶ್ರೇಯಾ ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಸದ್ಯ ಬಾಲಿವುಡ್‌ನಲ್ಲೂ ಬಿಝಿಯಾಗಿರುವ ಶ್ರೇಯಾಗೆ ಹೆಸರು ತಂದುಕೊಟ್ಟಿದ್ದು, ಸೌತ್ ಇಂಡಸ್ಟ್ರಿ.
ಈ ಕುರಿತು ಮಾತನಾಡುವ ಶ್ರೇಯಾ, “ನಾನೊಬ್ಬಳು ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬಂದ ನಂತರ, ನಾನು ಆಯ್ಕೆ ಮಾಡಿಕೊಂಡಿದ್ದು ಸೌಥ್ ಸಿನಿಮಾ ಇಂಡಸ್ಟ್ರಿಯನ್ನ. ನನ್ನ ಸಿನಿಮಾ ಕೆರಿಯರ್ ಶುರುವಾದಾಗಿನಿಂದಲೂ ನನಗೆ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿದ್ದು ಸೌಥ್ ಸಿನಿಮಾ ಇಂಡಸ್ಟ್ರಿ. ನನ್ನ ಸಿನಿಮಾ ಕೆರಿಯರ್ ಗ್ರಾಫ್ನಲ್ಲಿ ಕನ್ನಡ, ತಮಿಳು, ತೆಲುಗು ಹೀಗೆ ಸೌಥ್ ಸಿನಿಮಾ ಇಂಡಸ್ಟ್ರಿಯ ಪಾಲು ತುಂಬ ದೊಡ್ಡದಿದೆ. ಹಾಗಾಗಿ ನನಗೂ ಕೂಡ ನಾರ್ಥ್ ಗಿಂತ ಸೌಥ್ ಸಿನಿಮಾ ಇಂಡಸ್ಟ್ರಿ ಅಂದ್ರೆ ತುಂಬಾ ಇಷ್ಟ’ ಎನ್ನುತ್ತಾರೆ.
” ಕಬ್ಜ ‘ ಬಗ್ಗೆ ಮಾತನಾಡುವ ಶ್ರೇಯಾ, “ಈ ಸಿನಿಮಾದಲ್ಲಿ ನನಗೊಂದು ಪ್ರಮುಖ ಪಾತ್ರವಿದೆ. ಈ ಸಿನಿಮಾದಲ್ಲಿ ಮಧುಮತಿ ಎಂಬ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲಿರುವುದರಿಂದ, ನನ್ನ ಕಾಸ್ಟ್ಯೂಮ್, ಲುಕ್ ಎಲ್ಲವೂ ಕೂಡ ರೆಟ್ರೋ ಶೈಲಿಯಲ್ಲೇ ಇರುತ್ತದೆ. ಮೊದಲ ಬಾರಿಗೆ ಉಪೇಂದ್ರ, ಸುದೀಪ್ ಅವರಂಥ ಸ್ಟಾರ್ ಜೊತೆಗೆ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಒಳ್ಳೆಯ ಅನುಭವ. ನಿರ್ದೇಶಕ ಆರ್. ಚಂದ್ರು ಮತ್ತು ಟೀಮ್ ತುಂಬ ಪ್ಯಾಷನೇಟ್ ಆಗಿ ” ಕಬ್ಜ’ ಸಿನಿಮಾ ಮಾಡಿದ್ದಾರೆ. ” ಕಬ್ಜ’ ಸಿನಿಮಾ ಮತ್ತು ನನ್ನ ಕ್ಯಾರೆಕ್ಟರ್ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಸಿನಿಮಾ ಮತ್ತು ನನ್ನ ಕ್ಯಾರೆಕ್ಟರ್ ಆಡಿಯನ್ಸ್‌ಗೂ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ’ ಎನ್ನುವ ಶ್ರೇಯಾ, ಬೆಂಗಳೂರು ಬಗ್ಗೆಯೂ ಮಾತನಾಡಿದ್ದಾರೆ.
“ನಾನು ಸಾಕಷ್ಟು ಬಾರಿ ಬೆಂಗಳೂರಿಗೆ ಬಂದಿದ್ದೇನೆ. ಬೆಂಗಳೂರು ಗ್ಲೋಬಲ್ ಐಕಾನ್ ಸಿಟಿ. ಬೆಂಗಳೂರಿಗೆ ತನ್ನದೇ ಆದ ಜಾಗತಿಕ ಮನ್ನಣೆಯಿದೆ. ನನ್ನ ಅನೇಕ ಫ್ರೆಂಡ್ಸ್ ಬೆಂಗಳೂರಿನಲ್ಲಿದ್ದಾರೆ. ವೈಯಕ್ತಿಕವಾಗಿ ನನಗೆ ಇಷ್ಟವಾಗುವ ಸಿಟಿಗಳ ಪೈಕಿ ಬೆಂಗಳೂರು ಕೂಡ ಒಂದು. ಇಲ್ಲಿನ ಜನ ತುಂಬ ಆ್ಯಕ್ಟೀವ್ ಆಗಿರುತ್ತಾರೆ. ನನಗೆ ಬೆಂಗಳೂರಿನ ಕೂಲ್ ವಾತಾವರಣ, ಇಲ್ಲಿನ ಫುಡ್ಸ್ ತುಂಬ ಇಷ್ಟವಾಗುತ್ತದೆ. ಅದರಲ್ಲೂ ಬೆಂಗಳೂರಿನ ಮಸಾಲೆ ದೋಸೆ ಟೇಸ್ಟ್ ಅಂತೂ ನಾನು ಬೇರೆಲ್ಲೂ ನೋಡೆ ಇಲ್ಲ. ಆದ್ರೆ ಕೋವಿಡ್ ನಂತರ ಬೆಂಗಳೂರಿಗೆ ಬರಲಾಗಿರಲಿಲ್ಲ. ” ಕಬ್ಜ’ ಸಿನಿಮಾದ ಮೂಲಕ ಮತ್ತೆ ಬೆಂಗಳೂರಿಗೆ ಬರುವಂತಾಯಿತು’ ಎನ್ನುವುದು ಶ್ರೇಯಾ ಮಾತು.