ಕೊಪ್ಪಳ: ಶಾಂಭವಿ ದೇವಿಯ ಇಚ್ಛಾಶಕ್ತಿ, ಲೀಲೆ ಬಹು ದೊಡ್ಡದು. ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವ ಜಗನ್ಮಾತೆಯಾಗಿದ್ದಾಳೆ. ಇಂತಹ ತಾಯಿ ಸುಕ್ಷೇತ್ರದಲ್ಲಿ ನೆಲೆಸಿರುವ ನಾವೆಲ್ಲರೂ ಪುಣ್ಯವಂತರು ಎಂದು ಹೂವಿನಹಡಗಲಿಯ ಜಗದ್ಗುರು ಡಾ| ಹಿರಿಶಾಂತವೀರ ಮಹಾ ಸ್ವಾಮೀಜಿ ಹೇಳಿದರು.
ತಾಲೂಕಿನ ಹಲಗೇರಿಯ ಶ್ರೀ ಶಾಂಭವಿ ದೇವಿಯ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ನಡೆದ ಮಹಾರಥೋತ್ಸವ ಕಾರ್ಯಕ್ರಮದಲ್ಲಿ ಅವರು ಆರ್ಶೀವಚನ ನೀಡಿದರು.
ಮೈಸೂರಿನ ಚಾಮುಂಡೇಶ್ವರಿ, ಬಾದಾಮಿಯ ಬನಶಂಕರಿ, ಮಧುರೈ ಮೀನಾಕ್ಷಿ ಸೇರಿದಂತೆ ಎಲ್ಲ ದೇವಾನು ದೇವತೆಗಳು ಶಾಂಭವಿ ರೂಪದಲ್ಲಿ ಹಲಗೇರಿಯಲ್ಲಿ ನೆಲೆಸಿದ್ದಾರೆ. ಹಲಗೇರಿಯ ಭಕ್ತರು ಭಕ್ತಿ, ಭಾವ, ವಿಶ್ವಾಸ ಮೆರೆದಂತವರು. ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ ಪ್ರಾರಂಭವಾದರೇ ಹಲಗೇರಿಯಿಂದ ಕಳಸ ಬರುತ್ತದೆ ಅಂದರೆ ಅದೊಂದು ಸುದೈವ. ಶಾಂಭವಿ ದೇವಿ ಇಚ್ಛಾಶಕ್ತಿ ಬಹು ದೊಡ್ಡದಾಗಿದೆ. ಶಾಂಭವಿ ತಾಯಿ ಇಷ್ಟಾರ್ಥ ಕರುಣಿಸುವ ಶಕ್ತಿ ಮಾತೆ. ಇದೊಂದು ಪಾವನ ಕ್ಷೇತ್ರ ಎಂದರೇ ತಪ್ಪಾಗಲಾರದು ಎಂದರು.
ಮೈನಳ್ಳಿ-ಬಿಕನಳ್ಳಿಯ ಉಜ್ಜಯಿನಿ ಶಾಖಾಮಠದ 108 ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಆರ್ಶೀವಚನ ನೀಡಿ, ಬ್ರಹ್ಮ-ವಿಷ್ಣು-ಮಹೇಶ್ವರ ಎಂಬ ಮೂರು ಶಕ್ತಿಗಳು ಆದಿಶಕ್ತಿಯ ರೂಪದಲ್ಲಿರುವ ಶಾಂಭವಿಯಲ್ಲಿವೆ.
ಸಂಕಷ್ಟದಲ್ಲಿರುವ ಭಕ್ತನಿಗೆ ಆದಿಶಕ್ತಿ ಕಾವಲಾಗಿದ್ದು, ಭಕ್ತನಿಗೆ ಸದಾ ಆಶ್ರಯ ನೀಡುತ್ತಿದ್ದಾಳೆ ಎಂದರು. ಬುಧವಾರ ಸಂಜೆ 5:30ಕ್ಕೆ ಹಿರೇಸಿಂದೋಗಿಯ ಕಪ್ಪತ್ತಮಠದ ಜಗದ್ಗುರು ಚಿದಾನಂದ ಮಹಾಸ್ವಾಮೀಜಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಸಾವಿರಾರು ಭಕ್ತರು ಮಹಾ ರಥೋತ್ಸವಕ್ಕೆ ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ಭಕ್ತಿಯಿಂದಲೇ ನಮಿಸಿದರು. ಜಿಪಂ ಮಾಜಿ ಸದಸ್ಯ ಗವಿಸಿದ್ದಪ್ಪ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ನಗರಸಭೆ ಸದಸ್ಯೆ ಲತಾ ಗವಿಸಿದ್ದಪ್ಪ ಚಿನ್ನೂರ್ ಸೇರಿದಂತೆ ಇತರರಿದ್ದರು.