ಮೈಸೂರು: ಕಾಯಕಯೋಗಿ ಶಿವಕುಮಾರ ಮಹಾ ಸ್ವಾಮಿಗಳ ಜೀವನದ ಶಿಸ್ತು, ಬದ್ಧತೆ, ಸಾಮಾಜಿಕ ಕ್ರಾಂತಿಗಳು ನಮ್ಮೆಲ್ಲರಿಗೂ ಆದರ್ಶ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ ಹೇಳಿದರು.
ಸಂಸ್ಥೆಯ ಕಚೇರಿಯಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಇಚ್ಛಾ ಶಕ್ತಿ ಒಂದಿದ್ದಲ್ಲಿ ಎಂತಹ ಕ್ಲಿಷ್ಟಕರ ಸಮಯವನ್ನೂ ಮೆಟ್ಟಿ ನಿಲ್ಲಬಹುದು, ಇಳಿ ವಯಸ್ಸಿನಲ್ಲೂ ಉತ್ಸಾಹಿಗಳಾಗಿ ಕೆಲಸ ಮಾಡಬಹುದಾಗಿದೆ ಎಂದು ಸ್ವಾಮೀಜಿ ತೋರಿಸಿಕೊಟ್ಟಿದ್ದಾರೆ.
ಇಂಥವರ ಜೀವಿತಾವಧಿಯಲ್ಲಿ ಬದುಕಿದ್ದೇ ನಮ್ಮ ಜೀವನದ ಶ್ರೇಷ್ಠ ಸಮಯ. ಅವರು ನೀಡಿರುವ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಂಡಲ್ಲಿ ನಾವು ಕೂಡ ಸಮಾಜದ ಏಳಿಗೆಯಲ್ಲಿ ವಿಶೇಷ ಪಾತ್ರಧಾರಿಗಳಾಗ ಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ ಮಾತನಾಡಿ, ಜೀವನದಲ್ಲಿ ಉಸಿರು, ಹೆಸರಿಗೆ ಪ್ರಮುಖ ಸ್ಥಾನವಿದೆ, ಹುಟ್ಟುವಾಗ ಉಸಿರಾಡುತ್ತೇವೆ, ಸಾಯುವಾಗ ಹೆಸರು ಉಸಿರಾಡುತ್ತೆ. ಹಾಗೇಯೇ ಶ್ರೀಗಳು ಶಿವೈಕ್ಯರಾಗಿದ್ದರೂ ಇಂದು ಅವರ ಹೆಸರು ವಿಶ್ವದೆಲ್ಲೆಡೆ ಪಸರಿಸುತ್ತಿದೆ ಎಂದು ಸ್ಮರಿಸಿದರು.
ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಆನಂದ್, ಮಾನವ ಸಂಪನ್ಮೂಲ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ವಿಶಾಲ.ಬಿ ಮಲ್ಲಪುರ ಮತ್ತಿತರರು ಹಾಜರಿದ್ದರು.