ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆರ್ಟ್ ಆಫ್ ಲಿವಿಂಗ್ ಸ್ಥಾಪಕರಾದ ಗುರುದೇವ ಶ್ರೀ ರವಿಶಂಕರ್ ಗುರೂಜಿ ಅವರು ಫೆ.19 ರಂದು ಸಂಜೆ ಬೆಂಗಳೂರಿನಿಂದ ಆಗಮಿಸಿದರು.
ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿದ ಬಳಿಕ ಸುಮಾರು 25 ನಿಮಿಷ ನದಿಯ ದಡದಲ್ಲಿ ಜಪ ಮಾಡಿದರು. ಬಳಿಕ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಳಿಕ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಅನ್ನಪೂರ್ಣ ಅನ್ನಛತ್ರಕ್ಕೆ ಭೇಟಿ ನೀಡಿದ ಬಳಿಕ ಸನ್ನಿಧಿ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿದರು. ಫೆ.20 ಸೋಮವಾರ ಬೆಳಗ್ಗೆ ಮತ್ತೆ ಮಂಜುನಾಥ ಸ್ವಾಮಿಯ ದರ್ಶನ ಪಡೆದು ನೇರವಾಗಿ ಕಾರಿನಲ್ಲಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಬೆಂಗಳೂರು ಆಶ್ರಮಕ್ಕೆ ವಾಪಸ್ ಹೋಗಲಿದ್ದಾರೆ.
ಮಾಧ್ಯಮಗಳೊಂದಿಗೆ ಮಾತಾನಾಡಿದ ಗುರೂಜಿಯವರು ಧರ್ಮಸ್ಥಳ ಕ್ಷೇತ್ರದ ಪ್ರಾಮುಖ್ಯತೆ ಬಗ್ಗೆ ದೇಶದೆಲ್ಲೆಡೆ ತಿಳಿದಿದೆ. ಜನರ ಕಷ್ಟ ಸುಖಗಳನ್ನು ಭಗವಂತನಲ್ಲಿ ಕೋರಿ ಹರಕೆ ಹೊತ್ತಾಗ ಮನೆಯಲ್ಲಿರುವ ಎಲ್ಲ ವ್ಯಾಜ್ಯಗಳು ದೂರವಾಗುವುದು. ಧರ್ಮಾಧಿಕಾರಿಗಳು ಬಹಳಷ್ಟು ಸಮಾಜ ಸೇವೆಗಳಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ರಾಜ್ಯ ಸಭಾ ಸದಸ್ಯರಾಗಿದ್ದಾರೆ. ಆ ಬಳಿಕ ಭೇಟಿಯಾಗಿಲ್ಲ ಇಂದು ಭೇಟಿಯಾಗಿದ್ದೇನೆ. ಅವರ ಸಮಾಜಮುಖಿ ಸೇವೆಗಳು ನಡೆಯುತ್ತಿರುವುದು ಸಂತೋಷ ತಂದಿದೆ. ಇದು ನಮ್ಮ ದೇಶಕ್ಕೆ ಧರ್ಮಕ್ಕೆ ಹಿರಿಮೆ ಗರಿಮೆ ಎಂದು ತಿಳಿಸಿದರು.
ಗುರೂಜಿಯನ್ನು ಡಿ.ಹರ್ಷೇಂದ್ರ ಕುಮಾರ್ ಮತ್ತು ಡಿ.ಸುರೇಂದ್ರ ಕುಮಾರ್, ಹೆಗ್ಗಡೆ ಆಪ್ತಕಾರ್ಯದರ್ಶಿಗಳಾದ ಕೃಷ್ಣ ಸಿಂಗ್, ವೀರು ಶೆಟ್ಟಿ, ಕೆ.ಎನ್.ಜನಾರ್ದನ್ ಸಹಿತ ಪ್ರಮುಖರು ಕ್ಷೇತ್ರದ ಸಂಪ್ರದಾಯದಂತೆ ಸ್ವಾಗತಿಸಿದರು.