Advertisement

ಪೊಳಲಿ ದೇವಸ್ಥಾನಜೀರ್ಣೋದ್ಧಾರ ಸಮಿತಿ ಮುಂಬಯಿ ಸಮಾಲೋಚನ ಸಭೆ

12:40 PM Mar 06, 2018 | Team Udayavani |

ಮುಂಬಯಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿ ಸುಮಾರು 1700 ವರ್ಷಗಳಿಂದ ಕಂಗೊಳಿಸುತ್ತಿರುವ ಅತ್ಯಂತ ಪುರಾತನ ಹಾಗೂ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವು ಇಂದು ಶಿಥಿಲಾವಸ್ಥೆಯಲ್ಲಿದ್ದು, ದೇವಸ್ಥಾನವನ್ನು ಜೀರ್ಣೋದ್ಧಾರ ಗೊಳಿಸಬೇಕೆಂಬ ಉದ್ದೇಶದಿಂದ ಮಂದಿರದ ಆಡಳಿತ ಸಮಿತಿಯು ಈಗಾಗಲೇ ಜೀರ್ಣೋದ್ಧಾರ ಸಮಿತಿಯೊಂದನ್ನು ರಚಿಸಿ, ಜೀರ್ಣೋದ್ಧಾರ ಕಾರ್ಯವನ್ನು ಆರಂಭಿಸಿದೆ. ಈ ನವನಿರ್ಮಾಣದ ಕಾಮಗಾರಿಗೆ ಸುಮಾರು 20 ಕೋ. ರೂ. ವೆಚ್ಚ ತಗಲುವುದರಿಂದ ಈ ಬಗ್ಗೆ ಸಹಕರಿಸಲು ಹೊರನಾಡಿನಲ್ಲಿರುವ ಶ್ರೀ ಕ್ಷೇತ್ರದ ಬಂಧುಗಳು, ಭಕ್ತಾಭಿಮಾನಿಗಳು ಒಂದುಗೂಡಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿ ಜೀರ್ಣೋದದ್ಧಾರ ಮುಂಬಯಿ ಸಮಿತಿಯೊಂದನ್ನು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಇವರ ಅಧ್ಯಕ್ಷತೆ ರಚಿಸಲು ಹಾಗೂ ಸಮಾಲೋಚಿಸಲು ಮಾ. 3 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವಿಶೇಷ ಸಭೆಯೊಂದನ್ನು ಆಯೋಜಿಸಲಾಗಿತ್ತು.

Advertisement

ಸಭೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಕರ್ನಾಟಕ ಸರಕಾರದ ಅರಣ್ಯ ಸಚಿವ ಮಾನ್ಯ ಬೆಳ್ಳಿಪಾಡಿ ರಮಾನಾಥ ರೈ, ಅನುವಂಶಿಕ ಮೊಕ್ತೇಸರ ಹಾಗೂ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಳಿಪಾಡಿಗುತ್ತು ತಾರನಾಥ ಆಳ್ವ, ದೇವಸ್ಥಾನದ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ| ಮಂಜಯ್ಯ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಸದಸ್ಯ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು, ಸಲಹಾ ಸಮಿತಿಯ ಸದಸ್ಯರುಗಳಾದ ಮಂಜುನಾಥ ಭಂಡಾರಿ, ಅಮ್ಮುಂಜೆಗುತ್ತು ಜೀವರಾಜ ಶೆಟ್ಟಿ, ಮುಂಬಯಿ ಉದ್ಯಮಿಗಳಾದ ಕುಸುಮೋದರ ಡಿ. ಶೆಟ್ಟಿ, ನಗ್ರಿಗುತ್ತು ವಿವೇಕ್‌ ಶೆಟ್ಟಿ, ಅಶೋಕ್‌ ಪಕ್ಕಳ, ಎಂ. ಜಿ. ಶೆಟ್ಟಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಬಂಧಪಟ್ಟ ಸೀಮೆಗಳ ಭಕ್ತಾದಿಗಳು, ಊರ-ಪರವೂರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಇವರು ಮಾತನಾಡಿ, ಪೊಳಲಿ ಶ್ರೀ ರಾಜರಾಜೇಶ್ವರಿ ನೆಲೆನಿಂತ ಸಾವಿರ ಸೀಮೆಯ ಬಂಧುಗಳು ಮನಸ್ಸು ಮಾಡಿದಲ್ಲಿ ನಮ್ಮ ಆಪೇಕ್ಷೆಗಿಂತಲೂ ಹೆಚ್ಚು ದೇಣಿಗೆ ಸಂಗ್ರಹ ಸಾಧ್ಯ. ದೇವಸ್ಥಾನಕ್ಕೆ ಸಂಬಂಧಪಟ್ಟ ಗ್ರಾಮಗಳು ಹಾಗೂ ಸೀಮೆಯವರು ಹೊರನಾಡಿನಲ್ಲಿ ಅಧಿಕ ಸಂಖ್ಯೆಯಲ್ಲಿ ನೆಲೆಸಿರುವುದರಿಂದ ಹಾಗೂ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಮತ್ತಷ್ಟು ಬಲ ಬರಲೆಂಬ ಉದ್ಧೇಶದಿಂದ ಮುಂಬಯಿ ಸಮಿತಿಯೊಂದನ್ನು ರಚಿಸಲಾಗಿದೆ. ಶ್ರೀ ರಾಜರಾಜೇಶ್ವರಿ ಅಮ್ಮನವರ ಅನುಗ್ರಹದಿಂದ ನಮ್ಮ ಯೋಜನೆ ಸಾಕಾರಗೊಳ್ಳುತ್ತದೆ ಎಂಬ ಪೂರ್ಣ ವಿಶ್ವಾಸ ನನ್ನಲ್ಲಿದೆ. ದೇವಸ್ಥಾನಗಳ ಉದ್ಧಾರವೆಂದರೆ ಸಮಾಜದ ಉದ್ಧಾರ. ಆದರಿಂದಲೇ ಗ್ರಾಮ, ರಾಜ್ಯ ಹಾಗೂ ದೇಶದ ಉದ್ಧಾರ ಸಾಧ್ಯ. ದೇವಸ್ಥಾನಗಳ ಅಭಿವೃದ್ಧಿಯಿಂದ ಜನರಲ್ಲಿ ಭಕ್ತಿ, ಗೌರವ, ಶಾಂತಿ, ನೆಮ್ಮದಿಂತ ಜೊತೆಗೆ ಶಿಕ್ಷಣ, ವೈದ್ಯಕೀಯ ಸೇವೆ, ಅಸ್ವಸ್ಥರಿಗೆ, ಹಿಂದುಳಿದವರಿಗೆ ಸಂತ್ರಸ್ಥರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ದೇವಸ್ಥಾನಗಳು ಅಥವಾ ಧಾರ್ಮಿಕ ಕ್ಷೇತ್ರಗಳದ್ದಾಗಿದೆ. ಜನತಾ ಸೇವೆಯೇ ಜನಾರ್ಧನ ಸೇವೆ ಎಂಬ ಮಾತನ್ನು ಸದಾ ನಾವು ಗಮನದಲ್ಲಿಡಬೇಕು. ಧರ್ಮ ಕಾರ್ಯವೆಂಬುವುದು ಸಮಾಜ ಕಲ್ಯಾಣ, ಲೋಕ ಕಲ್ಯಾಣದ ಹಿತ ದೃಷ್ಟಿಯಿಂದ ನಡೆಯಬೇಕು ಎಂದು ನುಡಿದು, ಪರವೂರ ದಾನಿಗಳು ಎಲ್ಲಾ ರೀತಿಯಿಂದಲೂ ಸಹಕರಿಸಬೇಕು ಎಂದು ಕರೆ ನೀಡಿದರು.

ಯೋಜನೆ ಯಶಸ್ವಿಯಾಗುವಲ್ಲಿ ಸಂಶಯವಿಲ್ಲ  ಕೆ. ಡಿ. ಶೆಟ್ಟಿ
ಮುಂಬಯಿ ಉದ್ಯಮಿ, ಸಮಾಜ ಸೇವಕ ಕುಸುಮೋದರ ಡಿ. ಶೆಟ್ಟಿ ಇವರು ಮಾತನಾಡಿ, ಊರಿನ ದೈವ-ದೇವರ ಯಾವುದೇ ಶುಭ ಕಾರ್ಯಗಳು ಮುಂಬಯಿ ಮಹಾಲಕ್ಷಿ¾àಯ ಕೃಪೆಯಿಂದಲೇ ಯಶಸ್ವಿಯಾಗಲು ಸಾಧ್ಯವಾಗಿದೆ. ದೇವರ ಸೇವೆಗೆ ಮನಪೂರ್ವಕವಾಗಿ ಇಳಿದರೆ ಎಲ್ಲವೂ ಸುಗಮವಾಗುತ್ತದೆ. ದೇವರ ಕಾರ್ಯಕ್ಕಾಗಿ ನೀಡುವ ದೇಣಿಗೆ ಎಂದೂ ಕಡಿಮೆಯಾಗಲಾರದು. ಈ ಹಿಂದೆ ಶ್ರೀ ಕ್ಷೇತ್ರ ಕಟೀಲು, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಮುಂಬಯಿ ಸಮಿತಿಯ ಪ್ರೋತ್ಸಾಹ, ಸಹಕಾರವನ್ನು ಮರೆಯುವಂತಿಲ್ಲ. ಈ ಬೃಹತ್‌ ಯೋಜನೆಯ ಯಶಸ್ವಿಯಾಗುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ. ನಾವೆಲ್ಲರು ಒಂದಾಗಿ ಒಗ್ಗಟ್ಟಿನಿಂದ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕರಿಸೋಣ. ಶ್ರೀ ಕ್ಷೇತ್ರ ಪೊಳಲಿ ಮುಂಬಯಿ ಸಮಿತಿಯ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಇವರ ನೇತೃತ್ವದಲ್ಲಿ ನಾವೆಲ್ಲರೂ ನಿರೀಕ್ಷೆಗೂ ಮೀರಿ ದೇಣಿಗೆ ಸಂಗ್ರಹಿಸಲು ಶ್ರಮಿಸಬೇಕು ಎಂದು ಮುಂಬಯಿ ಸಮಿತಿಯ ಎಲ್ಲಾ ಸದಸ್ಯರಲ್ಲಿ ವಿನಂತಿಸಿದರು.

ಜೀರ್ಣೋದ್ಧಾರ ಸಮಿತಿಯ ಸದಸ್ಯ ಉಳಿಪಾಡಿಗುತ್ತು ರಾಜೇಶ್‌ ನಾೖಕ್‌ ಇವರು ಮಾತನಾಡಿ, ಜೀರ್ಣೋದ್ಧಾರ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿರುವುದು ಇನ್ನೂ ಹೆಚ್ಚಿನ ಕಾರ್ಯವಾಗಲೆಂಬ ದೇವರ ಇಚ್ಚೆಯಿಂದಲೇ ಎಂದು ನಂಬಿದ್ದೇವೆ.  ಮುಂಬಯಿ ಸಮಿತಿಯ ರಚನೆಯಾ ಗುತ್ತಿರುವುದು ಶ್ರೀ ಕ್ಷೇತ್ರಕ್ಕೆ ಭೀಮ ಬಲ ಬಂದಂತಾಗಿದೆ ಎಂದು ನುಡಿದು ಮುಂಬಯಿ ಭಕ್ತಾಭಿಮಾನಿಗಳ ಸರ್ವ ಸಹಕಾರವನ್ನು ಕೋರಿದರು.

Advertisement

ದೇವಸ್ಥಾನದ ಅನುವಂಶಿಕ ಮೊಕ್ತೇಸರ, ಪ್ರಧಾನ ಕಾರ್ಯದರ್ಶಿ ತಾರನಾಥ ಆಳ್ವ ಇವರು ಮಾತನಾಡಿ, ದೇವರ ಬಗ್ಗೆ, ಧರ್ಮದ ಬಗ್ಗೆ ಜನರಲ್ಲಿ ಭಕ್ತಿ, ಪ್ರೀತಿ, ವಿಶ್ವಾಸ ಎಂದಿಗೂ ಕಡಿಮೆಯಾಗುವುದಿಲ್ಲ. ಇಂದಿನ ಯಾಂತ್ರಿಕ ಯುಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲೂ ಸಮಯದ ಅಭಾವ ಅವರನ್ನು ಕಾಡುತ್ತಿದೆ. ಮುಂಬಯಿ ತುಳು-ಕನ್ನಡಿಗರು ಊರಿನವರಿಗೆ ಕಾಮಧೇನುವಿನಂತೆ. ಅಗತ್ಯ ಬಂದಾಗಲೆಲ್ಲಾ ಊರಿನವರೊಂದಿಗೆ ಸಹಕರಿಸುವ ಇಲ್ಲಿಯ ಬಂಧುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನುಡಿದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಆರಂಭದಲ್ಲಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ದೀಪ ಪ್ರಜ್ವಲಿಸಿ ಸಮಾಲೋಚನಾ ಸಭೆಗೆ ಚಾಲನೆ ನೀಡಿದರು. ಪೊಳಲಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುಬ್ರಾಯ ಕಾರಂತ ಆರಂಭದಲ್ಲಿ ಪ್ರಾರ್ಥನೆಗೈದು ವಂದಿಸಿದರು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಹಾಗೂ ಶ್ರೀ ಕ್ಷೇತ್ರ ಪೊಳಲಿ ಜೀರ್ಣೋದ್ಧಾರ ಸಮಿತಿ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. 

ದಾನಿಗಳು ಹೃದಯ ಶ್ರೀಮಂತಿಕೆಯಿಂದ ಸಹಕರಿಸಬೇಕು
ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಕರ್ನಾಟಕ ಸರಕಾರದ ಅರಣ್ಯ ಸಚಿವ ಮಾನ್ಯ ಬೆಳ್ಳಿಪಾಡಿ ರಮಾನಾಥ ರೈ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದೆ. ಈ ಬೃಹತ್‌ ಯೋಜನೆ ಆದಷ್ಟು ಬೇಗ ಪೂರ್ಣಗೊಳ್ಳಬೇಕು ಎಂಬ ಉದ್ಧೇಶ ನಮ್ಮದಾಗಿದೆ. ಊರವರು, ಪರವೂರಿನವರು ಒಂದಾಗಿ ಕಟ್ಟುವ ದೇವಸ್ಥಾನ ಕೀರ್ತಿಗೆ ಪೂರಕವಾಗಲಿ. ಈ ಸೀಮೆಯವರಾಗಿದ್ದು, ಹೊರನಾಡಿನಲ್ಲಿ ವಾಸಿಸುವ ಹೆಚ್ಚಿನವರು ಶ್ರೀ ದೇವಿಯ ಆಶೀರ್ವಾದಿಂದ ಶ್ರೀಮಂತರೆನಿಸಿಕೊಂಡಿದ್ದಾರೆ. ಅವರೆಲ್ಲರೂ ಮುಂದೆ ಬಂದು ತಮ್ಮ ಹೃದಯ ಶ್ರೀಮಂತಿಕೆ ತೋರಿಸಬೇಕು. ಶ್ರೀ ಕ್ಷೇತ್ರ ಪೊಳಲಿಯ ವರ್ಷಾವಧಿ ಜಾತ್ರೆಯ ಕೊನೆಯ 5 ದಿನಗಳಲ್ಲಿ ನಡೆಯುವ ಪೊಳಲಿ ಈಂಡು ಶ್ರೀ ದೇವಿಯು ಅಸುರರ ರುಂಡವನ್ನು ಕತ್ತರಿಸಿ ಚೆಂಡಾಡಿದ ದ್ಯೋತಕವಾಗಿ ಆಚರಣೆಯಲ್ಲಿವುದನ್ನು ನೆನಪಿಸಿಕೊಂಡ ಇವರು, ಪದ್ಮನಾಭ ಎಸ್‌. ಪಯ್ಯಡೆಯವರಂತಹ ಸಹೃದಯಿ, ದಾನಿ ಜೀರ್ಣೋದ್ಧಾರ ಸಮಿತಿ ಮುಂಬಯಿ ಅಧ್ಯಕ್ಷರಾಗಿ ದೊರೆತಿರುವುದು ನಮಗೆಲ್ಲ ಸಂತಸವನ್ನುಂಟು ಮಾಡಿದೆ ಎಂದು ನುಡಿದು ಪದ್ಮನಾಭ ಎಸ್‌. ಪಯ್ಯಡೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಸಚಿವ ರಮಾನಾಥ ರೈ

ಚಿತ್ರ-ವರದಿ:ಪ್ರೇಮನಾಥ್‌ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next