ಪುಣೆ: ಮಾನವ ಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ಜ್ಞಾನ, ಸನ್ಮಾರ್ಗದ ಆಶೀರ್ವಾದ ನಮಗೆಲ್ಲರಿಗೂ ಸಿಕ್ಕಿದೆ. ಅಂತಹ ಜ್ಞಾನ ಯೋಗಿಯ ಆದರ್ಶವನ್ನು ಬಿಲ್ಲವ ಸಮಾಜವು ಮೈಗೂಡಿಸಿಕೊಂಡು ಸಮಾಜೋದ್ಧಾರಕ್ಕೆ ಸತ್ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ನಮ್ಮ ಕನಸನ್ನು ನನಸಾಗಿಸುವ ಎಲ್ಲ ಪ್ರಯತ್ನವನ್ನು ಮಾಡಬೇಕಾದ ಕರ್ತವ್ಯ ನಮ್ಮ ಮೇಲಿದೆ. ಗುರುಗಳ ಸಂದೇಶದಂತೆ ಬಿಲ್ಲವ ಸಮಾಜವು ಸಂಘಟನಾತ್ಮಕವಾಗಿ ಕಾರ್ಯ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದು ಸಮಾಜಕ್ಕೆ ಅರ್ಪಿಸುವ ಕೆಲಸದಲ್ಲಿ ತೊಡಗಿದೆ ಎಂದು ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ಹೇಳಿದರು.
ಆ. 23ರಂದು ಬಿಲ್ಲವ ಸಮಾಜ ಸೇವಾ ಸಂಘ ಪುಣೆ ವತಿಯಿಂದ ಸಂಘದ ಕಚೇರಿಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರುಗಳ 167ನೇ ಜಯಂತ್ಯುತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೀಘ್ರದಲ್ಲೇ ನಮ್ಮ ಸಂಘವು ಖರೀದಿಸಿದ ಜಾಗದಲ್ಲಿ ಗುರು ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಿ ಅದೇ ದಿನದಂದು ಗುರು ಮಂದಿರಕ್ಕೆ ಶಿಲಾನ್ಯಾಸ ಮಾಡುವ ಸಂಕಲ್ಪವನ್ನು ಮಾಡಿದ್ದೇವೆ. ಈ ಕಾರ್ಯಕ್ರಮದಲ್ಲಿ ನಮ್ಮ ಸಮಾಜದ ಯತಿಶ್ರೇಷ್ಠರು, ಗಣ್ಯರು ಭಾಗ ವಹಿಸಿಸಲಿದ್ದಾರೆ. ನಾವು ದಿನನಿತ್ಯ ಪೂಜಿಸುವ ಕೋಟಿ ಚೆನ್ನಯರು, ಬ್ರಹ್ಮಶ್ರೀ ನಾರಾ ಯಣ ಗುರುಗಳ ಸ್ಮರಣೆಯಿಂದ ನಾವೆಲ್ಲರೂ ಸೇರಿ ಕೊಂಡು ಸಂಕಲ್ಪ ಮಾಡಿದಂತೆ ನಮ್ಮ ಸಮಾಜದ ಸತ್ಕಾರ್ಯಗಳು ನಿರ್ವಿಘ್ನವಾಗಿ ನಡೆಯುದರಲ್ಲಿ ಸಂಶಯವಿಲ್ಲ ಎಂದರು.
ಇದನ್ನೂ ಓದಿ:ಮೈಸೂರು ಪಾಲಿಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೇಯರ್ ಪಟ್ಟ ಅಲಂಕರಿಸಿದ ಬಿಜೆಪಿ
ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸರಳ ರೀತಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ವಿಭಾಗದ ಪ್ರಮುಖರು ಶ್ರೀ ನಾರಾಯಣಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಶಂಕರ ಪೂಜಾರಿ ಬಂಟಕಲ್ ಪ್ರಾರ್ಥನೆ ಗೈದರು. ಸಂಘದ ಕಾರ್ಯದರ್ಶಿ ಸದಾನಂದ ಬಂಗೇರ ಅವರು ಗುರುಗಳ ಜಯಂತಿ ಆಚರಣೆಯ ಮಹತ್ವವನ್ನು ತಿಳಿಸಿ ಸ್ವಾಗತಿಸಿದರು. ಶ್ರೀ ಹರಿ ಭಜನ ಮಂಡಳಿಯ ಸದಸ್ಯರಿಂದ ಭಜನ ಕಾರ್ಯಕ್ರಮ ನಡೆಯಿತು.
ಸಂಘದ ಉಪಾಧ್ಯಕ್ಷ ಹಾಗೂ ಕಟ್ಟಡ ಸಮಿತಿಯ ಅಧ್ಯಕ್ಷ ಸಂದೇಶ್ ಪೂಜಾರಿ, ಶ್ಯಾಮ ಪೂಜಾರಿ, ಗಿರೀಶ್ ಪೂಜಾರಿ, ರವಿ ಪೂಜಾರಿ, ಚೇತನ್ ಕಲ್ಯ, ಭಾಸ್ಕರ್ ಪೂಜಾರಿ, ಸುದೀಪ್ ಪೂಜಾರಿ, ರಾಜೇಶ್ ಪೂಜಾರಿ, ಯಾಧವ್ ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಉಮಾ ಕೆ. ಪೂಜಾರಿ, ಕಟ್ಟಡ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಪೂಜಾರಿ, ಶಿವರಾಮ್ ಪೂಜಾರಿ, ದಯಾನಂದ ಪೂಜಾರಿ, ಸುನೀತಾ ಪೂಜಾರಿ, ಉಮೇಶ್ ಪೂಜಾರಿ ಬಾಲಾಜಿ ನಗರ, ವಿಶಾಲಾ ಪೂಜಾರಿ, ಲೋಹಿತ್ ಬಂಗೇರ, ಉಮೇಶ್ ಪೂಜಾರಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಂಘದ ಗೌರವ ಕಾರ್ಯದರ್ಶಿ ಸದಾನಂದ ಬಂಗೇರ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಚಿತ್ರ-ವರದಿ: ಹರೀಶ್ ಮೂಡಬಿದ್ರೆ ಪುಣೆ