ಇತ್ತೀಚೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶ್ರಾವ್ಯಾ ಎಸ್. ಬಾಸ್ರಿಯವರು ನಡೆಸಿಕೊಟ್ಟ “ಭಕ್ತಿಗಾನ-ಭಾವಯಾನ’ ಕಾರ್ಯಕ್ರಮದಲ್ಲಿ ಭಕ್ತಿಭಾವಗಳು ಸಮ್ಮಿಳಿತಗೊಂಡಿದ್ದವು. ಶ್ರೀ ವಿನಾಯಕ ನಮಾಮ್ಯಹಂ ಎಂಬ ತ್ಯಾಗರಾಜರ ಕೀರ್ತನೆ (ಹಿಂದೋಳ-ಆದಿತಾಳ) ಯನ್ನು ಪ್ರಾರ್ಥನಾರೂಪದಲ್ಲಿ ಪ್ರಸ್ತುತಪಡಿಸಿದ ಶ್ರಾವ್ಯಾ ತನ್ನ ಮಧುರಕಂಠದಿಂದ ಸಹೃದಯರನ್ನು ಸೆರೆಹಿಡಿದುಕೊಳ್ಳುವಲ್ಲಿ ಯಶಸ್ವಿಯಾದರು. ಇದು ಕಲಾವಿದರಿಗಿರಬೇಕಾದ ಸಾಮರ್ಥಯ. ಆರಂಭ ಚೆನ್ನಾಗಿ ಮೂಡಿಬಂದರೆ ಕೊನೆಯ ತನಕವೂ ಪ್ರೇಕ್ಷಕರ ನಿರೀಕ್ಷೆಯಿರುತ್ತದೆ.
ಮುಂದಿನದು ನೀ ನನ್ನ ತಾಯಿ, ನೀ ನನ್ನ ತಂದೆ, ನೀನನ್ನ ದೇವಗುರುವೆ ಎಂಬ ಭಾವಗೀತೆ. ಈ ರಚನೆ ಗುರುಸ್ತೋತ್ರವಾಗಿದ್ದು, ಕಾರ್ಯಕ್ರಮದ ದಿನ ಶಿಕ್ಷಕ ದಿನಾಚರಣೆಯೂ ಆಗಿದ್ದು ಆಯ್ಕೆ ಔಚಿತ್ಯಪೂರ್ಣವೆನಿಸಿತ್ತು. (ಯಮನ್ ಖಾಡ ಛಾಪು) ಭುವನೇಶ್ವರಿಯ ನೆನೆ ಕೃತಿಯಲ್ಲಿ (ಮೋಹನ ಆದಿತಾಳ) ಶ್ರಾವ್ಯಾ ಅವರ ಪ್ರತಿಭಾ ಸಿಂಚನವೆಲ್ಲ ಸಹೃದಯರ ವೈಮನಸ್ಸುಗಳಿಗೆ ರಸ ಸಿಂಚನವಾಯ್ತು.
ಅಕೋ ಶ್ಯಾಮ-ಅವಳೆ ರಾಧೆ ಜನಪ್ರಿಯವಾದ ಭಾವಗೀತೆ. ರಾಧಾಕೃಷ್ಣರ ಮಧುರ ಪ್ರೇಮದ ಉತ್ಕಟತೆ ಎದ್ದು ಕಂಡಿತು. ಇದು ಆತ್ಮ-ಪರಮಾತ್ಮ ಸಾಂಗತ್ಯದ ಶ್ರೀಮುಖವಾಗಿ ಪ್ರಕಟವಾದ ಬಗೆ ರೋಚಕ. ಅನಂತರ ಕೈಗೆತ್ತಿಕೊಂಡ ಕೀರ್ತನೆ ಕನಕದಾಸರ ನೀನುಪೇಕ್ಷೆಯ ಮಾಡೆ ಬೇರೆಗತಿ ಯಾರೆನಗೆ (ಕೀರವಾಣಿ ಖಂಡಛಾಪು) ಹಾಡುತ್ತಿದ್ದಂತೆ ಕನಕದಾಸರ ಆರ್ತತೆ ನಮ್ಮದೂ ಎಂಬಂತೆ ಭಾಸವಾಯ್ತು.
ಯಾವ ಮೋಹನ ಮುರಲಿ ಕರೆಯಿತು ಎಂಬ ಬಹುಶ್ರುತ ಭಾವಗೀತೆಯನ್ನು ಶ್ರಾವ್ಯ ಎದೆ ತುಂಬಿ ಹಾಡಿದರು. ಕೃಷ್ಣಾ ನೀ ಬೇಗನೆ ಬಾರೋ ಹಾಡು ಹೃದ್ಯವಾಗಿ ದೃಶ್ಯಕಾವ್ಯ ಎಂಬಂತೆ ತೋರಿ ನಿಲ್ಲುವಲ್ಲಿ ಗಾಯಕಿಯ ಪ್ರಯತ್ನ ಸ್ತುತ್ಯರ್ಹವಾಗಿತ್ತು.
ನೀ ಸಿಗದೆ ಬಾಳೊಂದು ಬಾಳೇ ಕೃಷ್ಣಾ ಹಾಡನ್ನು ಶ್ರುತಪಡಿಸುವಲ್ಲಿ ಶ್ರಾವ್ಯಾ ಯಶಸ್ವಿಯಾದರು. ಇದನ್ನು ಚಕ್ರವಾಕದಲ್ಲಿ ನಿರೂಪಿಸಿದರು. ಇನ್ನೂ ದಯೆಬಾರದೆ ದಾಸನ ಮೇಲೆ (ಕಲ್ಯಾಣ ವಸಂತ ಖಂಡ ಛಾಪು) ಕೀರ್ತನೆಯ ದೀನ ಭಾವ ಹಾಡುಗಾರಿಕೆಯಲ್ಲಿ ಎದ್ದು ಕಂಡಿತು. ಇಷ್ಟುಕಾಲ ಒಟ್ಟಿಗಿದ್ದು (…. ತ್ರಿಶ್ರ ಛಾಪು) ಭಾವಗೀತೆಯನ್ನು ಸೊಗಸಾಗಿ ನಿರೂಪಿಸಿದರು. ಆಡಿಸಿದಳು ಮಗನ… ಕೃತಿ ಸಂಗೀತ, ನೃತ್ಯ ಎರಡಕ್ಕೂ ಸಲ್ಲುವ ಶ್ರೇಷ್ಠರಚನೆ. ಗಾಯಕಿ ಇದನ್ನು ಪರಿಣಾಮಕಾರಿಯಾಗಿ ನಿರೂಪಿಸಿದರು.
ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ ಭಾವಗೀತೆಯನ್ನು ( ಮುಶ್ರ ಛಾಪು) ಹಾಡುವಲ್ಲಿ ಶ್ರಾವ್ಯ ಅವರು ತೋರಿದ ರೀತಿ ಮೆಚ್ಚುವಂತಿತ್ತು. ಶ್ರೀ ರಾಮಚಂದ್ರ ಕೃಪಾಳು ಭಜಮನ (ಯಮನ್-ಮಿಶ್ರಛಾಪು) ತುಳಸೀ ದಾಸರ ಪ್ರಸಿದ್ಧವಾದ ಕೀರ್ತನೆ. ಶ್ರಾವ್ಯಾ ಈ ಹಾಡಿನ ಮೂಲಕ ಭಾವುಕರ ಹೃದಯವನ್ನು ಮುಟ್ಟಿ ಸೈಯೆನಿಸಿಕೊಂಡರು.
ಶ್ರಾವ್ಯ ಎಸ್. ಬಾಸ್ರಿಯವರ ಶಾರೀರ ಮಧ್ಯಮ, ತಾರಸ್ಥಾಯಿಗಳಲ್ಲಿ ಲೀಲಾ ಜಾಲವಾಗಿ ಸಂಚರಿಸಬಲ್ಲುದು. ಭಕ್ತಿಗಾನ-ಭಾವಯಾನದ ಈ ಕಲಾವಿದೆ ಇನ್ನಷ್ಟು ಭಾವತನ್ಮಯಗಳಲ್ಲಿ ಸಾಧಿಸಬೇಕಾಗಿದೆ. ಆಗ ಅವರ ಗಾನಯಾನ ರಸಯಾನವಾಗಿ ಸಹೃದಯರನ್ನು ತಣಿಸುತ್ತದೆ. ವಿದ್ವಾನ್ ಮುರಲೀಧರ ಆಚಾರ್ (ಕೀ ಬೋರ್ಡ್), ವಿದ್ವಾನ್ ಮಾಧವ ಆಚಾರ್ (ಮೃದಂಗ) ಚೇತನ ನಾಯಕ್ (ಕೊಳಲು), ಪ್ರತಾಪ್ ಆಚಾರ್ (ರಿದಂ ಪ್ಯಾಡ್) ನಲ್ಲಿ ಕೈಚಳಕ ತೋರಿದರು.
ಅಂಬಾತನಯ ಮುದ್ರಾಡಿ