Advertisement

ವೈರಾಗ್ಯಮೂರ್ತಿಯ 88ನೇ ಮಹಾಮಸ್ತಕಾಭಿಷೇಕ ಸಂಪನ್ನ

06:15 AM Feb 26, 2018 | Team Udayavani |

ಹಾಸನ: ಶ್ರವಣಬೆಳಗೊಳದ ಬಾಹುಬಲಿಮೂರ್ತಿಗೆ ಈ ಶತಮಾನದ 2ನೇ ಮಹಾಮಸ್ತಕಾಭಿಷೇಕಕ್ಕೆ ಭಾನುವಾರ ವಿಧ್ಯುಕ್ತವಾಗಿ ತೆರೆಬಿದ್ದಿತು. 9 ದಿನಗಳು ನಡೆದ ವೈರಾಗ್ಯಮೂರ್ತಿಯ 88ನೇ ಮಹಾ ಮಸ್ತಕಾಭಿಷೇಕಕ್ಕೆ ಕೊನೆಯ ದಿನ ಲಕ್ಷಾಂತರ ಜನರು ಸಾಕ್ಷಿಯಾದರು.

Advertisement

ಭಾನುವಾರ ಕೊನೆಯ ದಿನವೂ ಆಗಿದ್ದರಿಂದ ಪ್ರವೇಶದ ಪಾಸುಗಳನ್ನು ಹೊಂದಿದ್ದವರು ಮುಂಜಾನೆ 6.30 ರಿಂದಲೇ ವಿಂಧ್ಯಗಿರಿಯನ್ನೇರಿ ಆಟ್ಟಣಿಗೆಯಲ್ಲಿ ಕುಳಿತು ಮಹಾಮಜ್ಜನ ಕಣ್ತಂಬಿಕೊಂಡರು. ಎಂದಿನಂತೆ 1,008 ಕಳಶಗಳ ಜಲಾಭಿಷೇಕದ ನಂತರ ಎಳನೀರು, ಕಬ್ಬಿನ ಹಾಲು, ಕ್ಷೀರ, ಕಲಕಚೂರ್ಣ, ಅರಿಶಿಣ, ಅಷ್ಟಗಂಧ, ಚಂದನದ ಅಭಿಷೇಕ ನಡೆಯುವ ವೇಳೆ ಜೈ ಗೊಮ್ಮಟೇಶ ಎಂದು ಭಕ್ತರು ಜಯಘೋಷ ಕೂಗುತ್ತಾ ಭಕ್ತಿಯ ಪರಾಕಾಷ್ಠೆ ಮೆರೆದರು.

ಗರಿಷ್ಠ 5,500 ಜನರು ಸೇರಬಹುದಾದ ಅಟ್ಟಣಿಗೆ ಭರ್ತಿಯಾಗಿದ್ದರಿಂದ ಅಟ್ಟಣಿಗೆ ಏರುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಮೊದಲು ದರ್ಶನಕ್ಕೆ ಬಂದ ಭಕ್ತರನ್ನು ಕಳುಹಿಸಿ ಅಟ್ಟಣಿಗೆಯ ಕೆಳಗೆ ಕಾಯುತ್ತಿದ್ದವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. ಕೊನೆಯ ದಿನವಾದ್ದರಿಂದ ಪಂಚಾಮೃತ ಅಭಿಷೇಕ ನೆರವೇರುವುದೂ ಸುಮಾರು ಒಂದು ಗಂಟೆ ವಿಳಂಬವಾಯಿತು. ನವದಿನಗಳಿಂದ ಬಣ್ಣದ ಓಕುಳಿಯಲ್ಲಿ ಮಿಂದಿದ್ದ ಮಂದಸ್ಮಿತ ಮಂಗಳಾರತಿ ವೇಳೆಗೆ ಸಹಜ ಸ್ಥಿತಿಗೆ ಮರಳಿದ್ದ. ಮಧ್ಯಾಹ್ನ 3.30ರ ವೇಳೆಗೆ ಮಹಾಮಂಗಳಾರತಿ ನೆರವೇರುವುದರೊಂದಿಗೆ ಬಾಹುಬಲಿಮೂರ್ತಿಯ 88ನೇ ಮಹಾಮಸ್ತಕಾಭಿಷೇಕಕ್ಕೆ ತೆರೆ ಬಿದ್ದಿತು.

ಮಧ್ಯಾಹ್ನ 2 ಗಂಟೆಯಿಂದ ಅರಂಭವಾಗಬೇಕಿದ್ದ ಧರ್ಮದರ್ಶನಕ್ಕೆ ಬೆಳಗ್ಗೆ 10 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದ ಸಾವಿರಾರು ಭಕ್ತರು ಉರಿ ಬಿಸಿಲಿನ ತಾಪದಿಂದ ಬಳಲಿದ್ದರು. ಪಂಚಾಮೃತ ಅಭಿಷೇಕ ವಿಳಂಬವಾಗಿದ್ದರಿಂದ ಧರ್ಮ ದರ್ಶನವೂ ವಿಳಂಬವಾಯಿತು. 

ಪೊಲೀಸರು 2.15 ರ ವೇಳೆಗೆ ಸಾರ್ವಜನಿಕರನ್ನು ಧರ್ಮದರ್ಶನಕ್ಕೆ ಬಿಟ್ಟರು. ವಿದ್ಯುದ್ದೀಪಗಳಿಂದ ಅಲಂಕಾರಗೊಂಡ ವಿಂಧ್ಯಗಿರಿಯತ್ತ ರಾತ್ರಿ 10 ಗಂಟೆವರೆಗೂ ಭಕ್ತರ ದಂಡು ಸಾಗಿತ್ತು. ಭಾನುವಾರ ರಾತ್ರಿ 11 ಗಂಟೆವರೆಗೂ ಶ್ರೀ ಬಾಹುಬಲಿ ಮೂರ್ತಿಯ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

Advertisement

ಅಂತಿಮ ದಿನದ ಮಹಾಮಸ್ತಕಾಭಿಷೇಕದಲ್ಲಿ ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ವಿವಿಧ ಜೈನ ಮಠಗಳ ಸ್ವಾಮೀಜಿಯವರು ಪಾಲ್ಗೊಂಡು ಧನ್ಯತಾ ಭಾವ ಮೆರೆದರು. ಶ್ರೀ ಬಾಹುಬಲಿಮೂರ್ತಿಗೆ ತಮ್ಮ ನೇತೃತ್ವದಲ್ಲಿ 4ನೇ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸಿದ ಸಂತೃಪ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೊಗದಲ್ಲಿ ಹೊರಸೂಸುತ್ತಿತ್ತು.

– ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next