ಶ್ರವಣಬೆಳಗೊಳ: ಮುಗಿಲವೀರ ಬಾಹುಬಲಿ ಕಲ್ಲುಬೆಟ್ಟದ ಮೇಲೆ ಒಂದೂ ಹೆಜ್ಜೆ ಕದಲದೇ, ನಿಂತಲ್ಲೇ ನಿಂತಿರುವಾಗ, ಓಡುವ ಕಾಲ ಹಾರುತಾ ಓಡುತಾ ಬಂದು, ಆತನ ಕಾಲಬುಡದಲ್ಲಿ ಶರಣಾಯಿತು. ಇದುವರೆಗೂ ತಾಳೆಗರಿ, ಶಾಸನ, ಪತ್ರಿಕೆ, ಟಿವಿಗಳಲ್ಲಷ್ಟೇ ಗೊಮ್ಮಟ ದಾಖಲುಗೊಂಡಿದ್ದ. ಆದರೆ, ಈ ಸಲದ ಮಹಾಮಸ್ತಕಾಭಿಷೇಕಕ್ಕೆ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳೂ ಸಾಕ್ಷಿಯಾಗಿದ್ದು ಹೊಸ ದಾಖಲೆ. ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್, ವಾಟ್ಸ್‌ಅಪ್‌ಗ್ಳೂ ಈ ಚೆಲುವ ಚೆನ್ನಿಗನ ಜಾಡನ್ನು ಉತVನನ ಮಾಡಿ, ಜಗತ್ತಿನ ತುದಿಗೆ ತಲುಪಿಸಿಬಿಟ್ಟವು.
ಹೌದು, ಭಾರತದಲ್ಲಿ ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಕಾಲಿಟ್ಟ ಮೇಲೆ ಇಲ್ಲಿನ ವಿಂಧ್ಯಗಿರಿಯ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆದಿದ್ದು ಇದೇ ಮೊದಲು. 12 ವರ್ಷದ ಹಿಂದೆ ಮಹಾಮಜ್ಜನ ನಡೆದಾಗ, ಆಗಿನ್ನೂ ಭಾರತದಲ್ಲಿ ಫೇಸ್‌ಬುಕ್‌ನ ವಿಳಾಸವೇ ಇದ್ದಿರಲಿಲ್ಲ. 2006ರ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಫೇಸ್‌ಬುಕ್‌ನ ಮೊದಲ ಖಾತೆ ಆರಂಭಗೊಂಡಿತ್ತು. ಅಷ್ಟದ್ದಾಗಲೇ ಮಜ್ಜನ ಮುಗಿದು ಏಳು ತಿಂಗಳು ಕಳೆದಿತ್ತು.
2006ರ ಮಹಾಮಜ್ಜನ ವೇಳೆ ಟ್ವಿಟರ್ ಕೂಡ ಹುಟ್ಟಿರಲಿಲ್ಲ. ಅದೇ ಹೊತ್ತಿಗೆ ಕ್ಯಾಲಿಫೋರ್ನಿಯಾದ ಕಂಪ್ಯೂಟರ್ ಪ್ರೊಗ್ರಾಮರ್ ಜ್ಯಾಕ್ ಡೋರ್ಸೆ ಒಂದು ನೋಟ್ ಪುಸ್ತಕದಲ್ಲಿ ಟ್ವಿಟರ್ ನಕ್ಷೆ ಸಿದ್ಧಮಾಡಿದ್ದನಷ್ಟೇ. ಅದಾಗಿ ಐದೇ ತಿಂಗಳಲ್ಲಿ ಟ್ವಿಟರ್ ಜಗವ್ಯಾಪಿ ಹರಡಿ, ಮುಂಬೈನ ನೈನಾ ರಿಧು ಎಂಬಾಕೆ ಭಾರತದ ಮೊದಲ ಟ್ವಿಟರ್ ಖಾತೆ ತೆರೆದಿದ್ದರು. ಯೂಟ್ಯೂಬ್‌ಗೂ ಅಂದಿನ ಮಜ್ಜನದ ವೇಳೆ ಇಷ್ಟೊಂದು ಜನಪ್ರಿಯತೆ ಸಿಕ್ಕಿರಲಿಲ್ಲ.
ಆದರೆ, ಪ್ರಸಕ್ತ ಮಹಾಮಸ್ತಕಾಭಿಷೇಕದ ವೇಳೆ ದಕ್ಷಿಣ ಕೊರಿಯಾದ ಸಿಯೋಲ್‌ನ ಪ್ಯಾಕ್ ಎಂಬ ಯುವ ಪತ್ರಕರ್ತ ಫೇಸ್‌ಬುಕ್ ಲೈವ್ ಮೂಲಕ ತನ್ನ ದೇಶವಾಸಿಗಳಿಗೆ ಬಾಹುಬಲಿಯನ್ನು ತೋರಿಸಿದರು. ಟಿವಿ, ಪತ್ರಿಕೆ, ಡಾಕ್ಯುಮೆಂಟರಿ ಹೊರತಾಗಿ ಮಜ್ಜನದ ಬಾಹುಬಲಿ ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾ ಮೂಲಕ ಸಾಗರಗಳನ್ನು ಜಿಗಿದ. “ಬಾಹುಬಲಿ ಯಾರೆಂದು ನನ್ನ ದೇಶವಾಸಿಗಳಿಗೆ ಗೊತ್ತಿಲ್ಲ. ಸಿನಿಮಾದ ಹೆಸರು ಕೇಳಿದ್ದರಷ್ಟೇ. ಆರೂವರೆ ನಿಮಿಷದ ಫೇಸ್‌ಬುಕ್ ಲೈವ್‌ನಲ್ಲಿ ಈ ಸ್ಟಾಚುವಿನ ಚೆಲುವನ್ನು ಸ್ನೇಹಿತರಿಗೆ ತೋರಿಸಿದೆ. ಕ್ರಶ್ ಆದರು’ ಎನ್ನುತ್ತಾರೆ ಪ್ಯಾಕ್. 1960ರ ಮಹಾಮಸ್ತಕಾಭಿಷೇಕದ ವೇಳೆ “”ಮದ್ರಾಸ್ ಮೇಲ್” ಪತ್ರಿಕೆಯ ಎಡರ್ಡ… ಜಿ.ಎಂ.ವಿಶಿಷ್ಟ ಯೋಜನೆ ರೂಪಿಸಿದ್ದರು. ಪಾರಿವಾಳದ ಕಾಲಿಗೆ ಸುದ್ದಿಯ ವರದಿಯ ಪತ್ರವನ್ನು ಕಟ್ಟಿ ನಾಲ್ಕೂವರೆ ಗಂಟೆಗಳಲ್ಲಿ ಮದ್ರಾಸನ್ನು ಮುಟ್ಟಿಸಿದ್ದರು. ಪತ್ರಿಕೆಯಲ್ಲಿ ಅಂದೇ ಸಂಜೆ ಸುದ್ದಿ ಮೂಡಿಬಂದಿತ್ತು. ಆದರೆ, ಈಗ ಬಾಹುಬಲಿಯ ಸುದ್ದಿಗಳಿಗೆ ಅಂಥ ಪ್ರಯಾಸವಿಲ್ಲ ಎನ್ನುವುದನ್ನು ಸ್ಮಾರ್ಟ್ ಫೋನ್ ಜಗತ್ತು ಸಾರುತ್ತಿತ್ತು.
ವಿಂಧ್ಯಗಿರಿಯ ಮೇಲೆ ಮೀಯುತ್ತಿದ್ದ ಬಾಹುಬಲಿ, ಸೆಲ್ಫಿಗೆ ಮುಖ ತೋರಿಸಿದ್ದೂ ಇದೇ ಮೊದಲು. ಸಾವಿರಾರು ಜನರ ಮೊಬೈಲಿನ ಮೂಲಕ ಲಕ್ಷಾಂತರ ಬಾರಿ ಹುಟ್ಟಿ, ಆ ಕ್ಷಣ ಅಲ್ಲೇ, ಫೇಸ್‌ಬುಕ್ ಗೋಡೆ, ವಾಟ್ಸ್‌ಅಪ್ ಗ್ರೂಪ್, ಇನ್‌ಸ್ಟಾಗ್ರಾಂ, ಯೂಟ್ಯೂಬ…ನ ಒಡಲು ಸೇರಿ, ತಾನು ಕಾಲಾತೀತ ಮೂರ್ತಿಯೆಂಬುದನ್ನು ಸಾಬೀತುಪಡಿಸಿದ.
ಅಟ್ಟಣಿಗೆ ಮೇಲೆ ಕಲಶ-ಕೊಡ ಹಿಡಿದು ನಿಂತವರು, ಅಭಿಷೇಕ ಮುಗಿದ ಬಳಿಕ ಅಲ್ಲೇ ಅರೆಕ್ಷಣ ನಿಂತ ಕೆಳಗಿದ್ದ ಸಂಬಂಧಿಗಳ ಸ್ಮಾರ್ಟ್‌ಫೋನ್‌ನಿಂದ ಫೋಟೋ ಸೆರೆಯಾದ ಮೇಲೆಯೇ ಹೊರಡುತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು. ಅನೇಕರು ಡ್ರೋನ್‌ಕ್ಯಾಮೆರಾ ಇದ್ದಿದ್ದರೆ, ಅದ್ಭುತ ದೃಶ್ಯಾವಳಿ ಚಿತ್ರೀಕರಿಸಬಹುದಿತ್ತು ಎಂಬುದನ್ನೂ ಹೇಳಿಕೊಂಡರು. ಆದರೆ ಭದ್ರತೆಯ ದೃಷ್ಟಿಯಿಂದ ಡ್ರೋನ್ ಚಿತ್ರೀಕರಣಕ್ಕೆ ಇಲ್ಲಿನ ಜೈನಮಠ ಅವಕಾಶ ನೀಡಿರಲಿಲ್ಲ.
– ಕೀರ್ತಿ ಕೋಲ್ಗಾರ್