Advertisement

ಶ್ರಾವಣ ಅಮಾವಾಸ್ಯೆ: ಸಹಸ್ರಾರು ಮಂದಿಯಿಂದ ಸಮುದ್ರ ಸ್ನಾನ 

12:05 PM Sep 10, 2018 | |

ಉಳ್ಳಾಲ: ಇಲ್ಲಿನ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶ್ರಾವಣ ಅಮಾವಾಸ್ಯೆ ಪ್ರಯುಕ್ತ ರವಿವಾರ ವಿಶೇಷ ಪೂಜೆ ಮತ್ತು ಸಮುದ್ರ ತೀರ್ಥ ಸ್ನಾನದಲ್ಲಿ ಈ ಬಾರಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಪ್ರತೀ ವರ್ಷದಂತೆ ಶ್ರಾವಣ ಅಮಾವಾಸ್ಯೆಯಂದು ಸೋಮೇಶ್ವರ ದೇವಸ್ಥಾನದ ಬಳಿಯ ಸಮುದ್ರದಲ್ಲಿ ತೀರ್ಥಸ್ನಾನ ನಡೆಯುತ್ತಿದ್ದು, ಈ ಬಾರಿ ರವಿವಾರ ತೀರ್ಥಸ್ನಾನ ಬಂದಿರುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದರು. 

Advertisement

ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಸಹಿತ ವಿವಿಧೆಡೆಯಿಂದ ಭಕ್ತಾದಿಗಳು ಬೆಳಗ್ಗಿನಿಂದಲೇ ಆಗಮಿಸಿ ತೀರ್ಥಸ್ನಾನದಲ್ಲಿ ತೊಡಗಿಸಿಕೊಂಡರು. ಮಧ್ಯಾಹ್ನದವರೆಗೂ ಭಕ್ತಾದಿಗಳು ಭಾಗವಹಿಸುವುದು ಕಂಡು ಬಂತು. ಭಕ್ತಾದಿಗಳು ಗದಾತೀರ್ಥದಲ್ಲಿ ಸ್ನಾನ ಮಾಡಿದ ಬಳಿಕ ಸಮುದ್ರದಲ್ಲಿ ಸ್ನಾನ ನೆರವೇರಿಸಿದರೆ, ಕೆಲವು ಭಕ್ತಾದಿಗಳು ಸಮುದ್ರದಲ್ಲಿ ಸ್ನಾನ ನೆರವೇರಿಸಿ ಬಳಿಕ ಗದಾತೀರ್ಥದಲ್ಲಿ ಸ್ನಾನ ನೆರವೇರಿಸಿದರು. ಬಳಿಕ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.

ಕತ್ತಿ ಮಾರಾಟ
ಪ್ರತೀ ವರ್ಷವದಂತೆ ತೀರ್ಥಸ್ನಾನದ ಸಂದರ್ಭದಲ್ಲಿ ಮಾರಾಟವಾಗುವ ಕತ್ತಿಗೆ ಈ ಬಾರಿಯೂ ಉತ್ತಮ ಬೇಡಿಕೆ ಇತ್ತು. ತೀರ್ಥಸ್ನಾನಕ್ಕೆ ಆಗಮಿಸುವ ಭಕ್ತಾದಿಗಳು ದೇವಸ್ಥಾನದ ಸಂದರ್ಶನದ ಬಳಿಕ ಸ್ಟಾಲ್‌ಗ‌ಳಲ್ಲಿ ಮಾರಾಟಕ್ಕೆ ಇರಿಸಲಾಗುವ ಕೃಷಿ ಕಾರ್ಯಕ್ಕೆ ಸಂಬಂಧಿಸಿದಂತೆ ಮತ್ತು ಮನೆ ಉಪಯೋಗಕ್ಕೆ ಬಳಸುವ ಕತ್ತಿಯನ್ನು ಖರೀದಿಸುವುದು ವಾಡಿಕೆ ಈ ಬಾರಿಯೂ ಜಿಲ್ಲೆ ಯ ವಿವಿಧೆಡೆಯಿಂದ ಕತ್ತಿ ಮಾರಾಟಗಾರರು ಮಾರಾಟ ಮಳಿಗೆಯನ್ನು ಇಟ್ಟಿದ್ದರು.

ಉಳಿದಂತೆ ತೀರ್ಥ ಸಾನಕ್ಕೂ ಮೊದಲು ಸಮುದ್ರಕ್ಕೆ ಅರ್ಪಿಸುವ ವೀಳ್ಯದೆಲೆ ಮತ್ತು ಅಡಕೆ ಮಾರಾಟವೂ ಭರ್ಜರಿಯಾಗಿ ನಡೆಯಿತು. ಕೆಲವು ಮಾರಾಟಗಾರರು 5 ರೂ. ದರ ನಿಗದಿಪಡಿಸಿದ್ದರೆ, ಕೆಲವು ಮಾರಾಟಗಾರರು 10 ರೂ. ವಸೂಲಿ ಮಾಡುತ್ತಿದ್ದರು.

ಮೂಲ ಸೌಕರ್ಯ ಈ ಬಾರಿಯೂ ಇಲ್ಲ
ಅಮಾವಾಸ್ಯೆ ಸಹಿತ ಬೇರೆ ಬೇರೆ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಇಲ್ಲಿಗೆ ಬರುತ್ತಿದ್ದರೂ ಸಮುದ್ರ ತಟದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿತ್ತು. ಮಹಿಳೆಯರಿಗೆ ಶಾಮಿಯಾನದ ರೂಪದಲ್ಲಿ ಟೆಂಟ್‌ ಹಾಕಿ ಬಟ್ಟೆ ಬದಲಾಯಿಸಲು ವ್ಯವಸ್ಥೆ ಮಾಡಿದ್ದರೂ, ಟೆಂಟ್‌ನ ಸುತ್ತ ಸಂಪೂರ್ಣ ಬಂದ್‌ ಮಾಡದೆ ಮಹಿಳೆಯರು ಬಟ್ಟೆ ಬದಲಾಯಿಸಲು ಮುಜುಗರ ಪಡುವಂತಾಯಿತು.

Advertisement

ಇನ್ನೊಂದೆಡೆ ಪುರುಷರು ಸಾರ್ವಜನಿಕವಾಗಿಯೇ ಬಟ್ಟೆ ಬದಲಾಯಿಸುತ್ತಿರುವುದು ಕಂಡು ಬಂತು. ಇದರೊಂದಿಗೆ ಶೌಚಾಲಯ ವ್ಯವಸ್ಥೆಯೂ ಸರಿಯಾಗಿ ಇಲ್ಲದೆ ಜನರು ಪರದಾಡುವಂತಾಯಿತು. ಸ್ಥಳದಲ್ಲಿ ಉಳ್ಳಾಲ ಪೊಲೀಸರು, ಸಂಚಾರಿ ದಳದ ಪೊಲೀಸರು ಭದ್ರತೆಯನ್ನು ಒದಗಿಸಿದ್ದರು. ದೇವಸ್ಥಾನದಲ್ಲೂ ಮೈಕ್‌ ಮೂಲಕ ಸೂಚನೆಯನ್ನು ನೀಡಲಾಗುತ್ತಿತ್ತು.

ಜೀವರಕ್ಷಕ ಈಜುಗಾರರಿಂದ ರಕ್ಷಣೆ
ಕಳೆದ ಹಲವು ವರ್ಷಗಳಿಂದ ಸೋಮೇಶ್ವರದ ಸಮುದ್ರ ತೀರ್ಥ ಸ್ನಾನದ ಸಂದರ್ಭದಲ್ಲಿ ಉಳ್ಳಾಲದ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರು ರಕ್ಷಣೆಯನ್ನು ನೀಡುತ್ತಾ ಬಂದಿದ್ದಾರೆ. ಈ ಬಾರಿ 12 ಮಂದಿ ಸದಸ್ಯರು ಸಂಘದ ಅಧ್ಯಕ್ಷ ಮೋಹನ್‌ ಪುತ್ರನ್‌ ಮತ್ತು ಪ್ರವೀಣ್‌ ಕೋಟ್ಯಾನ್‌ ಮಾರ್ಗದರ್ಶನಲ್ಲಿ ಸಂಘದ ಸದಸ್ಯರು ಭಕ್ತಾದಿಗಳ ರಕ್ಷಣೆ ನಡೆಸಿದ್ದರು. ಇವರೊಂದಿಗೆ ಕರಾವಳಿ ಕಾವಲು ಪಡೆಯ ಸ್ಥಳೀಯ ಜೀವ ರಕ್ಷಕ ಪ್ರಸಾದ್‌ ಸುವರ್ಣ ಮೊಗವೀರಪಟ್ಣ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next