Advertisement

ಶ್ರಮಿಕ ರೈಲುಗಳಿಗಿನ್ನು ಮೂರು ಕಡೆ ನಿಲುಗಡೆ ; ವಿಶೇಷ ರೈಲು ಸಂಚಾರದ ನಿಯಮ ಪರಿಷ್ಕರಣೆ

09:39 AM May 13, 2020 | Hari Prasad |

ನವದೆಹಲಿ: ಭಾರತೀಯ ರೈಲ್ವೆಯು ವಲಸೆ ಕಾರ್ಮಿಕರನ್ನು ಊರು ತಲುಪಿಸುವ ಶ್ರಮಿಕ ವಿಶೇಷ ರೈಲುಗಳಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

Advertisement

ಅದರಂತೆ, ಇನ್ನು ಮುಂದೆ ಶ್ರಮಿಕ ವಿಶೇಷ ರೈಲುಗಳು ಸಂಪೂರ್ಣ ಸಾಮರ್ಥ್ಯದಲ್ಲಿ ಅಂದರೆ 1,700 ಪ್ರಯಾಣಿಕರನ್ನು ಹೊತ್ತು ಸಂಚರಿಸಲಿವೆ. ಈವರೆಗೆ ಕೇವಲ 1200 ಪ್ರಯಾಣಿಕರನ್ನು ಮಾತ್ರ ಹೊತ್ತೂಯ್ಯಲು ಅವಕಾಶವಿತ್ತು.

ಅಲ್ಲದೆ, ಒಂದು ಊರಿನಿಂದ ಹೊರಟು ಮತ್ತೂಂದು ರಾಜ್ಯದ ಅಂತಿಮ ನಿಲ್ದಾಣ ತಲುಪುವವರೆಗೆ ಬೇರೆಲ್ಲೂ ರೈಲು ನಿಲ್ಲಿಸಲು ಅವಕಾಶವಿರಲಿಲ್ಲ. ಈಗ ಈ ನಿಯಮವನ್ನೂ ಪರಿಷ್ಕರಿಸಲಾಗಿದ್ದು, ಪ್ರಯಾಣದ ವೇಳೆ ಮೂರು ಕಡೆ ರೈಲನ್ನು ನಿಲುಗಡೆಗೆ ಅನುಮತಿ ನೀಡಿ ಎಲ್ಲ ರೈಲ್ವೆ ವಲಯಗಳಿಗೆ ಸಚಿವಾಲಯ ಸುತ್ತೋಲೆ ಹೊರಡಿಸಿದೆ.

ಸದ್ಯ ದಿನಕ್ಕೆ 300 ವಿಶೇಷ ರೈಲುಗಳು ದೇಶಾದ್ಯಂತ ಸಂಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನೂ ಹೆಚ್ಚಿಸುವ ಮೂಲಕ ಗರಿಷ್ಠ ಸಂಖ್ಯೆಯ ಕಾರ್ಮಿಕರನ್ನು ಊರು ತಲುಪಿಸಲು ನಾವು ಪ್ರಯತ್ನಿಸುತ್ತೇವೆ ಎಂದು ರೈಲ್ವೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಹೆಚ್ಚು ಹೆಚ್ಚು ರೈಲುಗಳ ಸಂಚಾರಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯ ಸರಕಾರಗಳಿಗೆ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಕೋರಿಕೊಂಡ ಬೆನ್ನಲ್ಲೇ ಈ ಬದಲಾವಣೆಗಳನ್ನು ಮಾಡಲಾಗಿದೆ. ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಗಳ ನಡುವೆ ರವಿವಾರ ನಡೆದ ವಿಡಿಯೋ ಕಾನ್ಫರೆನ್ಸ್‌ ವೇಳೆಯೂ ಈ ವಿಚಾರದ ಕುರಿತು ಚರ್ಚಿಸಲಾಗಿತ್ತು.

Advertisement

ಶ್ರಮಿಕ ವಿಶೇಷ ರೈಲುಗಳಲ್ಲಿ 24 ಬೋಗಿಗಳಿದ್ದು, ಪ್ರತಿ ಬೋಗಿಯಲ್ಲೂ 72 ಪ್ರಯಾಣಿಕರನ್ನು ಹೊತ್ತೊಯ್ಯಬಹುದು. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಈ ಸಂಖ್ಯೆಯನ್ನು 54ಕ್ಕೆ ಇಳಿಸಲಾಗಿತ್ತು. ಈವರೆಗೆ ಭಾರತೀಯ ರೈಲ್ವೇಯು 468 ರೈಲುಗಳ ಮೂಲಕ 5 ಲಕ್ಷ ಕಾರ್ಮಿಕರನ್ನು ತವರೂರಿಗೆ ತಲುಪಿಸಿದೆ.

ಕಾರ್ಮಿಕರ ದಾಂಧಲೆ
ಗುಜರಾತ್‌ನ ಭಾವನಗರ ಜಿಲ್ಲೆಯ ನಿರ್ಮಾ ಲಿಮಿಟೆಡ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರು ಸೋಮವಾರ ದಾಂಧಲೆಗಿಳಿದಿದ್ದಾರೆ.

ಗುಜರಾತ್‌ನಿಂದ ಉತ್ತರಪ್ರದೇಶಕ್ಕೆ ಹೊರಡಬೇಕಿದ್ದ ಶ್ರಮಿಕ ವಿಶೇಷ ರೈಲು ರದ್ದಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಾರ್ಮಿಕರು ರಸ್ತೆಗಿಳಿದು, ಕಂಪೆನಿಯ ಬಸ್ಸನ್ನು ಪುಡಿಗಟ್ಟಿದ್ದಾರೆ.

ಕಂಪೆನಿ ನಮ್ಮನ್ನು ಉದ್ದೇಶಪೂರ್ವಕವಾಗಿಯೇ ಊರುಗಳಿಗೆ ತೆರಳಲು ಬಿಡುತ್ತಿಲ್ಲ ಎಂದು ಆಕ್ರೋಶಗೊಂಡು ಕಾರ್ಮಿಕರು ಈ ಕೃತ್ಯವೆಸಗಿದ್ದಾರೆ. ಆದರೆ ಕಾರ್ಮಿಕರ ಆರೋಪವನ್ನು ಕಂಪೆನಿ ಅಲ್ಲಗಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next