ಗುಂಡ್ಲುಪೇಟೆ: ಕೂಲಿ ಕಾರ್ಮಿಕರು ತಮ್ಮ ವೃದ್ಧಾಪ್ಯದಲ್ಲಿ ತಮ್ಮ ಕುಟುಂಬ ನಿರ್ವಹಣೆ ಮಾಡಲು ಕಷ್ಟವಾಗಬಾರದು ಎಂಬ ಸದುದ್ದೇಶದಿಂದ ಕೇಂದ್ರ ಸರ್ಕಾರದ ಕಾರ್ಮಿಕ ಕಲ್ಯಾಣ ಇಲಾಖೆ ವತಿಯಿಂದ ಶ್ರಮಯೋಗಿ ಮಾನ್‌ಧನ್‌ಯೋಜನೆಯನ್ನು ಅನುಷ್ಠಾನಗೊಳಿಸಿದೆ ಎಂದು ಕಾರ್ಮಿಕ ಕಲ್ಯಾಣ ಇಲಾಖೆ ಅಧಿಕಾರಿ ನಾರಾಯಣ ಮೂರ್ತಿ ಹೇಳಿದರು.
ಪಟ್ಟಣದ ಟಿ.ಬಿ.ಬಡಾವಣೆಯಲ್ಲಿರುವ ತಾಲೂಕು ಬೀಡಿ ಕಾರ್ಮಿಕರ ಅಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪಿಂಚಿಣಿ ಅದಾಲತ್ ಮತ್ತು ಆರೋಗ್ಯ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಕಾರ್ಮಿಕರ ಕಲ್ಯಾಣ ಇಲಾಖೆಯ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಕೂಲಿ ಕಾರ್ಮಿಕರು ತಮ್ಮ ನಿವೃತ್ತಿ ಜೀವನದಲ್ಲಿ ಕುಟುಂಬ ನಿರ್ವಹಣೆ ಮಾಡಲು ಅನುಕೂಲವಾಗುವಂತೆ ಶ್ರಮಯೋಗಿ ಮಾನ್‌ಧನ್‌ಯೋಜನೆ (ಪಿಎಂಎಸ್‌ವೈಎಂ) ಅಸಂಘಟಿಕ ಕಾರ್ಮಿಕರ ಕನಿಷ್ಠ ಖಾತರಿ ಪಿಂಚಣಿ ಯೋಜನೆ ಜಾರಿಗೆ ತಂದಿದ್ದಾರೆ.
ಈ ಯೋಜನೆಯ ಫಲಾನುಭವಿಗೆ 60 ವರ್ಷಗಳ ನಂತರ ಜೀವನ ಪರ್ಯಂತ ಮಾಸಿಕ ಮೂರು ಸಾವಿರ ರೂ.ಗಳನ್ನು ಪಿಂಚಣಿ ರೂಪದಲ್ಲಿ ಪಡೆಯಬಹುದಾಗಿದೆ. ಈ ಪಿಂಚಣಿ ಕಾರ್ಡ್ ಪಡೆಯಲು 18-40 ವರ್ಷಗಳಾಗಿರಬೇಕು. ಮಾಸಿಕ ಅದಾಯ ಹದಿನೈದು ಸಾವಿರ ರೂ.ಗಳನ್ನು ದಾಟಿರಬಾರದು ಎಂದು ಮಾಹಿತಿ ನೀಡಿದರು.
ದಾಖಲಾತಿಗಾಗಿ ಅಧಾರ್‌ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಕಡ್ಡಾಯವಾಗಿದೆ. ತಾಲೂಕಿನ ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾರ್ಮಿಕ ಇಲಾಖೆ ಅಧಿಕಾರಿ ಗಣೇಶ್ ಮಾತನಾಡಿ, ಕೇಂದ್ರ ಸರ್ಕಾರ ಈಗಾಗಲೇ ಕೂಲಿ ಕಾರ್ಮಿಕರ ಶ್ರಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಆದರೂ ಸಹ ಅನಕ್ಷರತೆಯ ಕಾರಣ ಕೂಲಿ ಕಾರ್ಮಿಕರು ಸರ್ಕಾರದ ಯೋಜನೆಯನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಕೂಲಿ ಕಾರ್ಮಿಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಇದರಿಂದ ಇಲಾಖೆಯ ಎಲ್ಲಾ ಯೋಜನೆಯ ಅನುಕೂಲತೆಯನ್ನು ಪಡೆಯಲು ಸಾಧ್ಯವಾಗಲಿದೆ. ಇಲಾಖೆ ಮೂಲಕವೂ ಯೋಜನೆಗಳ ಬಗ್ಗೆ ತಾಲೂಕು ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು. ಕಾರ್ಮಿಕ ಸಂಘಟನೆ ಅಧ್ಯಕ್ಷ ಸಿದ್ಧರಾಜು, ಕಾರ್ಮಿಕರ ಆಸ್ಪತ್ರೆಯ ವೈದ್ಯೆ ಡಾ.ಸಂಜೀತಾ, ನರ್ಸ್ ಜಿ.ಅನಿತಾ ಹಾಗೂ ಅಟೆಂಡರ್ ರಂಗಸ್ವಾಮಿ ಸೇರಿದಂತೆ ಕೂಲಿ ಕಾರ್ಮಿಕರು, ಕುಟುಂಬದವರು ಇದ್ದರು.