Advertisement

ಬಾಲಿವುಡ್‌ ಬಾನಿನಲ್ಲಿ ಶ್ರದ್ಧಾ ನಕ್ಷತ್ರ 

12:30 AM Feb 17, 2019 | Team Udayavani |

ಆಪರೇಷನ್‌ ಅಲಮೇಲಮ್ಮ ಚಿತ್ರದ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿದ್ದ ನಟಿ ಶ್ರದ್ಧಾ ಶ್ರೀನಾಥ್‌, ನಂತರ ಕನ್ನಡಕ್ಕಿಂತ ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಾಕೆ. ಆಪರೇಷನ್‌ ಅಲಮೇಲಮ್ಮ ಚಿತ್ರದ ನಂತರ ದಿ ವಿಲನ್‌ ಚಿತ್ರದ ಹಾಡೊಂದರಲ್ಲಿ ಶ್ರದ್ಧಾ ಹೆಜ್ಜೆ ಹಾಕಿದ್ದು ಬಿಟ್ಟರೆ ಯಾವ ಕನ್ನಡ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ. ಇವೆಲ್ಲದರ ನಡುವೆ ಶ್ರದ್ಧಾ ಅಭಿನಯಿಸಿದ್ದ ಬೇರೆ ಭಾಷೆಯ ಎರಡು-ಮೂರು ಚಿತ್ರಗಳು ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಕೂಡ ಹಿಟ್‌ ಆಗಿದ್ದರಿಂದ, ಶ್ರದ್ಧಾಗೆ ಸಹಜವಾಗಿಯೇ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಈಗ ಶ್ರದ್ಧಾ ಶ್ರೀನಾಥ್‌ ಅಭಿನಯಿಸಿರುವ ಚೊಚ್ಚಲ ಹಿಂದಿ ಚಿತ್ರ ಕೂಡ ತೆರೆಗೆ ಬರುವುದಕ್ಕೆ ರೆಡಿಯಾಗಿದೆ. 

Advertisement

ಹೌದು, ಶ್ರದ್ಧಾ ಶ್ರೀನಾಥ್‌ ಅಭಿನಯಿಸಿರುವ ಚೊಚ್ಚಲ ಹಿಂದಿ ಚಿತ್ರ ಮಿಲನ್‌ ಟಾಕೀಸ್‌ ತೆರೆಗೆ ಬರುವ ಅಂತಿಮ ಹಂತದ ತಯಾರಿಯಲ್ಲಿದೆ. ಇತ್ತೀಚೆಗಷ್ಟೇ ಮಿಲನ್‌ ಟಾಕೀಸ್‌ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಕೂಡ ಸದ್ಯ ಭರದಿಂದ ಚಿತ್ರದ ಪ್ರಮೋಷನ್‌ ಕೆಲಸಗಳಲ್ಲಿ ನಿರತವಾಗಿದ್ದು, ಮಿಲನ್‌ ಟಾಕೀಸ್‌  ಮುಂಬರುವ ಮಾರ್ಚ್‌ 15ರಂದು ತೆರೆಗೆ ಬರುತ್ತಿದೆ. 

ಇನ್ನು ಶ್ರದ್ಧಾಗೆ ಕೂಡ ತಮ್ಮ ಮೊದಲ ಹಿಂದಿ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆಯಂತೆ. ಈ ಬಗ್ಗೆ ಮಾತನಾಡುವ ಶ್ರದ್ಧಾ, ನಾನು ಕಲಾವಿದೆಯಾಗುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಸಿಕ್ಕ ಅವಕಾಶವೊಂದು ಕನ್ನಡ ಚಿತ್ರರಂಗ ನನ್ನನ್ನು ಕಲಾವಿದೆಯಾಗಿ ಗುರುತಿಸಿತು. ಅದಾದ ನಂತರ ತಮಿಳು, ತೆಲುಗು ಚಿತ್ರರಂಗದಲ್ಲೂ ಒಳ್ಳೆಯ ಅವಕಾಶಗಳು ಸಿಕ್ಕಿತು. ಈಗ ಬಾಲಿವುಡ್‌ನ‌ಲ್ಲಿ ಒಳ್ಳೆಯ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಬೇಕಾಗಿದೆ. ಸದ್ಯ ಅಭಿನಯವನ್ನೇ ನನ್ನ ಕೆರಿಯರ್‌ ಆಗಿ ತೆಗೆದುಕೊಂಡಿರುವುದರಿಂದ, ಮಿಲನ್‌ ಟಾಕೀಸ್‌ ಚಿತ್ರ ಸಹಜವಾಗಿಯೇ ನನ್ನ ಸಿನಿ ಕೆರಿಯರ್‌ನ ಟರ್ನಿಂಗ್‌ ಪಾಯಿಂಟ್‌ ಎನ್ನಬಹುದು. ಅತ್ಯಂತ ವೃತ್ತಿಪರವಾಗಿ ಚಿತ್ರ ಮೂಡಿಬಂದಿರುವುದರಿಂದ ಆಡಿಯನ್ಸ್‌ಗೂ ಚಿತ್ರ ಇಷ್ಟವಾಗುವುದೆಂಬ ನಂಬಿಕೆ ಇದೆ ಎನ್ನುತ್ತಾರೆ.  

ಅಂದ ಹಾಗೆ, ಮಿಲನ್‌ ಟಾಕೀಸ್‌ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್‌ ನಾಯಕ ಅಲಿ ಫೈಜಲ್‌ ಅವರಿಗೆ ನಾಯಕಿಯಾಗಿ ನಟಿಸಿ¨ªಾರೆ. ಉಳಿದಂತೆ ರೀಚಾ ಸಿನ್ಹಾ, ಆಶುತೋಷ್‌ ರಾಣ, ಸಂಜಯ್‌ ಮಿಶ್ರಾ, ಯಶ್‌ಪಾಲ್‌ ಶರ್ಮ, ಜಯ್‌ ಪಟೇಲ್‌, ಸಿಕಂದರ್‌ ಖೇರ್‌ ಮೊದಲಾದ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಏಕ್ತಾ ಕಪೂರ್‌ ನಿರ್ಮಾಣದ ಈ ಚಿತ್ರವನ್ನು ಟಿಗ್‌ಮಾಂಶು ಧೂಲಿಯಾ ನಿರ್ದೇಶನ ಮಾಡಿದ್ದಾರೆ. 

ಇವೆಲ್ಲದರ ಜೊತೆ ದಕ್ಷಿಣ ಭಾರತ ಚಿತ್ರರಂಗದಲ್ಲೂ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಶ್ರದ್ಧಾ, ಸತೀಶ್‌ ನೀನಾಸಂ ಅಭಿನಯದ ಗೋದ್ರಾ, ಶಿವರಾಜ್‌ ಕುಮಾರ್‌ ಅಭಿನಯದ ರುಸ್ತುಂ, ತಮಿಳಿನಲ್ಲಿ ಅಜಿತ್‌ ಜೊತೆ ಪಿಂಕ್‌ ಚಿತ್ರದ ರೀಮೇಕ್‌, ನಾನಿ ಜೊತೆ ಜೆರ್ಸಿ, ಮಾರ ಮತ್ತು ಕೆ13 ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಒಟ್ಟಾರೆ ದಕ್ಷಿಣದಿಂದ ಉತ್ತರಕ್ಕೆ ಸಿನಿಪ್ರಯಾಣ ಆರಂಭಿಸಿರುವ ಶ್ರದ್ಧಾ ಶ್ರೀನಾಥ್‌ ಬಾಲಿವುಡ್‌ ಅಂಗಳದಲ್ಲಿ ಎಷ್ಟರ ಮಟ್ಟಿಗೆ ಕಮಾಲ್‌ ಮಾಡಲಿದ್ದಾರೆ ಅನ್ನೋದು ಇನ್ನೊಂದು ತಿಂಗಳಲ್ಲಿ ಗೊತ್ತಾಗಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next