Advertisement

ನಾರಾಯಣ ಶೆಟ್ಟಿ ಅವರ ಸೇವಾಕಾರ್ಯ ಮರೆಯುವಂತಿಲ್ಲ: ಮುರಳಿ ಕೆ. ಶೆಟ್ಟಿ

06:21 PM Mar 16, 2021 | Team Udayavani |

ಮುಂಬಯಿ: ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮತ್ತು ಗುರುದೇವ ಸೇವಾ ಬಳಗ ಮುಂಬಯಿ ಸಂಯುಕ್ತ ಆಯೋಜನೆಯಲ್ಲಿ ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಸಮಾಜ ಸೇವಕ, ಧಾರ್ಮಿಕ ಚಿಂತಕ, ಮಹಾದಾನಿ ಎ ಟು ಝಡ್‌ ನಾರಾಯಣ ಶೆಟ್ಟಿ ಅವರ ಶ್ರದ್ಧಾಂಜಲಿ ಸಭೆಯು ಮಾ. 13ರಂದು ಸಂಜೆ ಸಯನ್‌ ನಿತ್ಯಾನಂದ ಸಭಾಗೃಹದಲ್ಲಿ ಜರಗಿತು.

Advertisement

ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಇದರ ಅಧ್ಯಕ್ಷ ಮುರಳಿ ಕೆ. ಶೆಟ್ಟಿ ಅವರು ನುಡಿನಮನ ಸಲ್ಲಿಸಿ, ಆತ್ಮೀಯರಾಗಿ ಬೆರೆತು ಸೌಮ್ಯ ಸ್ವಭಾವದಿಂದ ಜೀವನವನ್ನು ನಡೆಸಿದ ಅವರು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ಗೆ ಅವರು ನೀಡಿದ ಸಹಕಾರವನ್ನು ನಾವೆಂದೂ ಮರೆಯುವಂತಿಲ್ಲ. ಬಂಟ್ಸ್‌ ಸೆಂಟರ್‌ ನಿರ್ಮಾಣದ ಸಂದರ್ಭದಲ್ಲಿ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಅವರು ನಮ್ಮನ್ನು ಅಗಲಿ ದೂರವಾದರೂ ಅವರ ನೆನಪು ಸದಾ ನಮ್ಮ ಹೃದಯದಲ್ಲಿ ಹಸುರಾಗಿರುತ್ತದೆ ಎಂದು ಶ್ರದ್ಧಾಂಜಲಿ ಅರ್ಪಿಸಿದರು.

ಗುರುದೇವ ಸೇವಾ ಬಳಗದ ಅಧ್ಯಕ್ಷ, ನ್ಯಾಯವಾದಿ ಕೃಷ್ಣ ಶೆಟ್ಟಿ ಮಾತನಾಡಿ, ಶ್ರೀ ನಿತ್ಯಾನಂದ ಸ್ವಾಮಿ, ಶ್ರೀ ಶಿರ್ಡಿ ಸಾಯಿಬಾಬಾ, ಒಡಿಯೂರು ಶ್ರೀಗಳ ಪರಮ ಭಕ್ತರಾಗಿರುವ ನಾರಾಯಣ ಶೆಟ್ಟಿ ಅವರ ಜೀವನ ಶೈಲಿ ಆದರ್ಶಯುತ. ಅವರೋರ್ವ ಮಹಾನ್‌ ವ್ಯಕ್ತಿಯಾಗಿದ್ದು, ಧಾರ್ಮಿಕ ಚಿಂತಕರಾಗಿದ್ದರು. ಅವರ ಅಗಲುವಿಕೆಯಿಂದ ಬಹಳ ದೊಡ್ಡ ನಷ್ಟವಾಗಿದೆ ಎಂದರು.

ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಉಪಾಧ್ಯಕ್ಷ, ಸಿಎ ಸುರೇಂದ್ರ ಶೆಟ್ಟಿ ಮಾತನಾಡಿ, ಮನುಷ್ಯರು ಬದುಕಿರುವ ಸಂದರ್ಭದಲ್ಲಿ ಸಮಾಜಕ್ಕೆ ಅವರು ನೀಡಿದ ಕೊಡುಗೆಯೂ ಸದಾ ಸ್ಮರಣೀಯವಾಗಿರುತ್ತದೆ. ನಾರಾಯಣ ಶೆಟ್ಟಿ ಅವರು ಸದಾ ಸಮಾಜಪರ ಚಿಂತನೆಯನ್ನು ಹೊಂದಿದಂತಹ ವ್ಯಕ್ತಿಯಾಗಿದ್ದರು ಎಂದರು.

ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ಎನ್‌. ಸಿ. ಶೆಟ್ಟಿ ಮಾತನಾಡಿ, ಇನ್ನೊಬ್ಬರ ಯಶಸ್ಸಿನ ಬಗ್ಗೆ ಸದಾಕಾಲ ಚಿಂತಿಸುತ್ತಾ ಹುಟ್ಟಿದ ಸಮಾಜದ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದ್ದ ಮಹಾನ್‌ ವ್ಯಕ್ತಿ ಅವರಾಗಿದ್ದಾರೆ. ಬಂಟ್ಸ್‌ ಸೆಂಟರ್‌ ನಿರ್ಮಾಣದಲ್ಲಿ ನಾರಾಯಣ ಶೆಟ್ಟಿ ಹಾಗೂ ಅವರ ಪರಿವಾರದ ಪಾತ್ರವನ್ನು ಮರೆಯುವಂತಿಲ್ಲ. ಕೊಡುಗೈ ದಾನಿಯಾಗಿದ್ದ ಅವರು ಸತ್ಕಾರ್ಯಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು ಎಂದರು.

Advertisement

ಗುರುದೇವ ಸೇವಾ ಬಳಗದ ಮಾಜಿ ಅಧ್ಯಕ್ಷ, ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ ಮಾತನಾಡಿ, ಸಮಾಜಕ್ಕೆ ನಾರಾಯಣ ಶೆಟ್ಟಿ ಅವರು ನೀಡಿದ ಕೊಡುಗೆ ಇತರರಿಗೆ ಪ್ರೇರಣೆಯಾಗಿರುತ್ತದೆ. ಅವರ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವ ಎಂದು ತಿಳಿಸಿದರು.

ಬೋಂಬೆ ಬಂಟ್ಸ್‌ ಇದರ ಮಾಜಿ ಅಧ್ಯಕ್ಷರು, ನ್ಯಾಯವಾದಿ ರತ್ನಾಕರ್‌ ವಿ. ಶೆಟ್ಟಿ ಮಾತನಾಡಿ, ನಾವು ಉನ್ನತ ಶಿಕ್ಷಣ ಹಾಗೂ ಕಾಲೇಜನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಬಹಳ ಶ್ರದ್ಧೆ-ನಿಷ್ಠೆಯಿಂದ ನಮಗೆ ದೇಣಿಗೆ ನೀಡಿದಂತಹ ವ್ಯಕ್ತಿ. ಅವರ ಕೈಗುಣದಂತೆ ನಮಗೆ ಉತ್ತಮ ದೇಣಿಗೆ ಬಂದು ಉತ್ತಮ ರೀತಿಯಲ್ಲಿ ಉನ್ನತ ಶಿಕ್ಷಣ ಯೋಜನೆ ನಡೆಯುವಂತಾಯಿತು. ಅವರು ಎಲ್ಲರೊಂದಿಗೂ ನಗುಮುಖದೊಂದಿಗೆ ಶಾಂತ ರೀತಿಯಲ್ಲಿ ಬೆರೆಯುವ ಮನೋಭಾವ ಸದಾ ಇತರರಿಗೆ ಸಂತೋಷವನ್ನುಂಟು ಮಾಡುತ್ತಿತ್ತು ಎಂದರು.

ನಾರಾಯಣ ಶೆಟ್ಟಿ ಅವರ ಪುತ್ರಿ ಶೈಲಜಾ ಶೆಟ್ಟಿ ಮಾತನಾಡಿ, ಸದಾ ನಮಗೆ ಮಾರ್ಗದರ್ಶನ, ಉತ್ತಮ ಸಂಸ್ಕಾರವನ್ನು ನೀಡಿ ಬೆಳೆಸಿದ ನಮ್ಮ ತಂದೆ ನಮ್ಮ ಪಾಲಿಗೆ ದೇವರಾಗಿದ್ದರು. ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳಲ್ಲಿ ಸೇವೆ ಮಾಡಲು ತಂದೆಯವರು ನಮಗೆ ಉತ್ತಮ ಪ್ರೇರಣೆ ನೀಡಿದ್ದಾರೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದರು.

ನಾರಾಯಣ ಶೆಟ್ಟಿ ಅವರ ಅಳಿಯ, ನ್ಯಾಯವಾದಿ ಅಶೋಕ್‌ ಶೆಟ್ಟಿ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದರು. ಗುರುದೇವ ಸೇವಾ ಬೆಳಕು ಮಹಾರಾಷ್ಟ್ರ ಘಟಕದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಎ ಟು ಝಡ್‌ ನಾರಾಯಣ ಶೆಟ್ಟಿ ಅವರ ಸಮಾಜಪರ ಕಾರ್ಯಗಳ ಬಗ್ಗೆ ವಿವರಿಸಿ ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಒಡಿಯೂರು ಶ್ರೀಗಳ ಸಂತಾಪ ಸೂಚನಾ ಪತ್ರವನ್ನು ಪೇಟೆಮನೆ ಪ್ರಕಾಶ್‌ ಶೆಟ್ಟಿ ಓದಿದರು. ಈ ಸಂದರ್ಭದಲ್ಲಿ ಬೋಂಬೆ ಬಂಟ್ಸ್‌ ಕಾರ್ಯದರ್ಶಿ ಸುನಿಲ್‌ ಶೆಟ್ಟಿ , ಮಾಜಿ ಅಧ್ಯಕ್ಷ ಶ್ಯಾಮ ಶೆಟ್ಟಿ , ಮಾಜಿ ಕಾರ್ಯದರ್ಶಿ, ನ್ಯಾಯವಾದಿ ಡಿ. ಕೆ. ಶೆಟ್ಟಿ , ನೆರೂಲ್‌ ಬಾಲಾಜಿ ಮಂದಿರದ ಅಧ್ಯಕ್ಷ ಗೋಪಾಲ್‌ ವೈ. ಶೆಟ್ಟಿ , ಮಹಾರಾಷ್ಟ್ರ ಗ್ಯಾಸ್‌ನ ಶಂಕರ್‌ ಶೆಟ್ಟಿ , ಪಿ. ಧನಂಜಯ ಶೆಟ್ಟಿ , ಶ್ರೀಧರ್‌ ಶೆಟ್ಟಿ , ಕೃಷ್ಣ ಶೆಟ್ಟಿ , ನಾರಾಯಣ ಶೆಟ್ಟಿ ನಂದಳಿಕೆ, ರಾಮ್‌ ಮೋಹನ್‌ ಬಲ್ಕುಂಜೆ, ಆನಂದ್‌, ನಂದ ಶೆಟ್ಟಿ , ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಆಶಾ ಶೆಟ್ಟಿ , ವಿನೋದ್‌ ಶೆಟ್ಟಿ ಹಾಗೂ ನಂದ ಶೆಟ್ಟಿ ಮೊದಲಾದವರು ನುಡಿನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next