Advertisement

ನಾವೆಲ್ಲರೂ ಒಂದೇ ಎಂಬುದನ್ನು ತೋರಿಸಿ

03:47 PM Sep 03, 2018 | |

ದಾವಣಗೆರೆ: ಬಣಜಿಗರ ಸಮುದಾಯ ಬಾಂಧವರು ಒಗ್ಗಟ್ಟು, ಸಂಘಟಿತರಾಗುವ ಮೂಲಕ ವೀರಶೈವ-ಲಿಂಗಾಯತ ಸಮಾಜವನ್ನು ಬಲಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಜಗದೀಶ್‌ ಶೆಟ್ಟರ್‌ ಹೇಳಿದರು. ಪಿ.ಬಿ.ರಸ್ತೆಯ ಅಭಿನವ ರೇಣುಕ ಮಂದಿರದಲ್ಲಿ ಭಾನುವಾರ ಬಣಜಿಗರ ಜಿಲ್ಲಾ ಸಮಾವೇಶ ಮತ್ತು ವಿಶ್ವಸ್ಥ ಮಂಡಳಿ ಸದಸ್ಯರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಬಣಜಿಗ, ಸಾಧು, ಶಿವಸಿಂಪಿ ಒಳಗೊಂಡಂತೆ ಎಲ್ಲವೂ ವೀರಶೈವ-ಲಿಂಗಾಯತ ಸಮಾಜದ ಅಂಶಗಳು. ಬಣಜಿಗ ಸಮುದಾಯ ಬಾಂಧವರು ಸಂಘಟಿತರಾಗುವ ಮುಖೇನ ವೀರಶೈವ-ಲಿಂಗಾಯತ ಸಮಾಜ ಬಲಪಡಿಸಿ, ನಾವೆಲ್ಲರೂ ಒಂದು ಎಂಬುದನ್ನು ತೋರಿಸಬೇಕು ಎಂದರು.
 
ಕೆಲ ದಿನಗಳ ಹಿಂದೆ ರಾಜಕಾರಣಕ್ಕಾಗಿ ವೀರಶೈವ-ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸ ನಡೆಯಿತು. ಯಾವುದೇ ಸಮಾಜವೇ ಆಗಲಿ ಸರ್ಕಾರದಿಂದ ದೊರೆಯುವ ಸೌಲಭ್ಯ, ಹಕ್ಕುಗಳನ್ನು ಕಾನೂನು, ಹೋರಾಟದ ಮೂಲಕವೇ ಪಡೆಯಬೇಕು. ಸೌಲಭ್ಯ, ಹಕ್ಕಿಗಾಗಿ ಸಮುದಾಯವನ್ನೇ ಒಡೆಯಬಾರದು.

ವೀರಶೈವ-ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸದ ಸಂದರ್ಭದಲ್ಲಿ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ವೀರಶೈವ-ಲಿಂಗಾಯತ ಒಂದೇ ಎಂಬ ನಿಲುವಿಗೆ ಗಟ್ಟಿಯಾಗಿ ನಿಂತ ಪರಿಣಾಮ ಸಮುದಾಯ ಒಡೆಯುವ ಪ್ರಯತ್ನ ನಿಂತಿತು ಎಂದು ತಿಳಿಸಿದರು.

ಮಹಾನ್‌ ದಾರ್ಶನಿಕ ಆಣ್ಣ ಬಸವಣ್ಣನವರು ನೀಡಿರುವ ಆದರ್ಶ, ವಚನಗಳ ತಿರುಳನ್ನು ಅರ್ಥ ಮಾಡಿಕೊಂಡು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಆ ಮೂಲಕ ಸಮಾಜದ ಬದಲಾವಣೆ, ಜಾಗೃತಿ ಮಾಡಬೇಕು. ಬಣಜಿಗ
ಸಮಾಜದ ಸಂಘಟಿಸುವ ಕಾರ್ಯ ನಿರಂತರವಾಗಿ ನಡೆಯಲಿ ಎಂದರು. 

ಬಣಜಿಗ ಸಮಾಜದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸಮಾಜದಲ್ಲಿನ ಆರ್ಥಿಕ ದುರ್ಬಲರು, ಓದಲಿಕ್ಕೆ ಕಷ್ಟದ ಸ್ಥಿತಿಯಲ್ಲಿರುವ ರನಉ ಗುರುತಿಸಿ, ಅಂತಹ ಕುಟುಂಬ ಮತ್ತು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿವ ಕೆಲಸಕ್ಕೆ ಸಮಾಜದ ಮುಖಂಡರು ಮುಂದಾಗಬೇಕು ಎಂದು ಮನವಿ ಮಾಡಿದರು.

Advertisement

ಅಖೀಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ
ಮಾತನಾಡಿ, ಬಸವಣ್ಣ-ರೇಣುಕರು ಬಣಜಿಗರು, ಪಂಚಾಚಾರ್ಯರು, ಸಾದರು, ಶಿವಸಿಂಪಿಗರು ಬೇರೆ ಬೇರೆ ಎಂದು ಹೇಳಿಯೇ ಇಲ್ಲ, ಕೆಲಸದ ಆಧಾರದ ಮೇಲೆ ವ್ಯಾಪಾರ ಮಾಡುವರು ಬಣಜಿಗರು, ಎಣ್ಣೆ ತಯಾರಿಸುವರು ಗಾಣಿಗರು, ಬಟ್ಟೆ ಹೊಲೆಯುವವರು ಸಿಂಪಿಗರು ಎಂದು ಕರೆಯಲಾಗುತ್ತದೆ. ಬಸವಣ್ಣನವರು ಹೇಳಿದ್ದೇ ಒಂದು ಆಗುತ್ತಿರುವುದು ಇನ್ನೊಂದು ಎನ್ನುವಂತಾಗುತ್ತಿದೆ ಎಂದರು.

ಬಣಜಿಗರು, ಪಂಚಾಚಾರ್ಯರು, ಸಾದರು, ಶಿವಸಿಂಪಿಗರು ಏನೇ ಆಗಲಿ ನಾವೆಲ್ಲರೂ ವೀರಶೈವ-ಲಿಂಗಾಯತರು ಒಂದೇ ಎಂದು ಹೊಂದಾಣಿಕೆಯಿಂದ ಇದ್ದಾಗ ಮಾತ್ರ ನಮ್ಮ ಉದ್ಧಾರ ಸಾಧ್ಯ ಆಗುತ್ತದೆ. ಅಧಿಕಾರದ ಚುಕ್ಕಾಣಿಯನ್ನೂ ಹಿಡಿಯಲಿಕ್ಕೆ ಆಗುತ್ತದೆ. ಅದನ್ನು ಬಿಟ್ಟು ನಾವು ನಾವೇ ಕೈ ಕೈ ಮಿಲಾಯಿಸಿ ಹೊಡೆದಾಡುವುದರಿಂದ ನಮ್ಮ ಉದ್ಧಾರ ಆಗುವುದೇ ಇಲ್ಲ ಎಂದು ಎಚ್ಚರಿಸಿದರು. 

ರಾಜಕಾರಣಿಗಳು ವೀರಶೈವ-ಲಿಂಗಾಯತರನ್ನು ಒಡೆಯುವ ಕೆಲಸ ಮಾಡಿದ್ದನ್ನು ನೋಡಿದ್ದೇವೆ. ನಾವು ಒಂದಾಗದೇ ಇದ್ದ ಕಾರಣಕ್ಕೆ 1.5 ಕೋಟಿಯಷ್ಟು ಇದ್ದ ಜನಸಂಖ್ಯೆಯನ್ನು 70-80 ಲಕ್ಷಕ್ಕೆ ತರುವ ಕೆಲಸ ಮಾಡಿದ್ದಾರೆ. ವೀರಶೈವ-ಲಿಂಗಾಯತರು ಒಂದೇ ಎಂದು ಹೊರಟರೆ ರಾಜ್ಯವನ್ನ ಹಿಡಿತಕ್ಕೆ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ಬಹಳ ಬುದ್ಧಿವಂತರಾದ ಬಣಜಿಗ ಸಮಾಜ ಸದಾ ಬಿಜೆಪಿಯನ್ನು ಬೆಂಬಲಿಸುತ್ತಾ ಬರುತ್ತಿದೆ. ನಾವು ಸಮಾಜದ ಋಣ ತೀರಿಸುತ್ತೇವೆ ಎಂದು ತಿಳಿಸಿದರು. 

ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಆರ್‌. ಸಿದ್ದಲಿಂಗೇಶ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿ.ಎಂ. ಉದಾಸಿ, ಕೈಗಾರಿಕೋದ್ಯಮಿ ಅಥಣಿ ಎಸ್‌. ವೀರಣ್ಣ, ಭರಮಸಾಗರ ಜಿಪಂ ಸದಸ್ಯ ಡಿ.ವಿ. ಶರಣಪ್ಪ, ಬಣಜಿಗ ಸಮಾಜದ ರಾಜ್ಯ ಅಧ್ಯಕ್ಷ ಡಾ| ಶಿವಬಸಪ್ಪ ಹೆಸರೂರು, ಮಹಿಳಾ ಘಟಕದ ಅಧ್ಯಕ್ಷೆ ಸರಳ ಹೇರೆಕರ, ಬಿ.
ಚಿದಾನಂದಪ್ಪ, ದೇವರಮನಿ ಶಿವಕುಮಾರ್‌, ಜಿ. ವೇದಮೂರ್ತಿ, ಎಂ.ವಿ. ಗೊಂಗಡಿಶೆಟ್ರಾ, ಕೋಗುಂಡಿ ಬಕ್ಕೇಶಪ್ಪ, ಟಿ.ಎಸ್‌. ಜಯರುದ್ರೇಶ್‌, ಅಜ್ಜಂಪುರ ವಿಜಯ್‌ಕುಮಾರ್‌, ಹಾಸಭಾವಿ ಕರಿಬಸಪ್ಪ ಇತರರು ಇದ್ದರು. ಅಪರ್ಣ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next