Advertisement
ಒಎಲ್‌ಎಕ್ಸ್, ಕ್ವಿಕ್ಕರ್ ಸೇರಿದಂತೆ ಇತರೆ ಆನ್‌ಲೈನ್ ಮಾರಾಟ ತಾಣಗಳಲ್ಲಿ ಸಕ್ರಿಯವಾಗಿರುವ ವಂಚಕರು, ಬೇರೊಬ್ಬರ ಒಡೆತನದ ಬೈಕ್, ಕಾರು, ಮೊಬೈಲ್ ಸೇರಿ ಇನ್ನಿತರೆ ವಸ್ತುಗಳ ಫೋಟೋಗಳನ್ನು ಪ್ರಕಟಿಸಿ ವಾಹನಗಳನ್ನು ಖರೀದಿಸಲು ಆಸಕ್ತಿ ತೋರುವ ಗ್ರಾಹಕರನ್ನು ವಂಚಿಸಿ ಹಣ ದೋಚುತ್ತಿದ್ದಾರೆ.
Related Articles
Advertisement
ಬೈಕ್ ಮಾರಾಟಕ್ಕಿರುವುದಾಗಿ ಹೇಳಿ ವಂಚನೆ: ಖಾಸಗಿ ಕಂಪನಿ ಉದ್ಯೋಗಿ ಶಂಕರ್ ವರೀಶ್ ಕಾಮತ್ ಎಂಬುವವರು ಬೈಕ್ ಖರೀದಿಸುವ ಸಲುವಾಗಿ ಓಎಲ್‌ಎಕ್ಸ್ ತಾಣದಲ್ಲಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಯಮಹಾ ಎಫ್ಝಡ್ ಬೈಕ್ ಮಾರಾಟದ ಜಾಹೀರಾತು ನೋಡಿ, ಸಂಬಂಧಿಸಿದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದರು.
ಈ ವೇಳೆ ಬೈಕ್ ನೀಡಲು ಒಪ್ಪಿದ್ದ ಅಪರಿಚಿತ ಸೈಬರ್ ವಂಚಕ, ಮುಂಗಡ ಹಣವಾಗಿ 64,450 ರೂ. ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಬಳಿಕ ತಾನು ನೀಡಿದ್ದ ಬೈಕ್ ಜಾಹೀರಾತು ಪೋಸ್ಟ್ ತೆಗೆದಿದ್ದಾನೆ. ಜತೆಗೆ, ಆತ ನೀಡಿದ್ದ ಮೊಬೈಲ್ ನಂಬರ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದ. ಹಲವು ಬಾರಿ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಿಲ್ಲ. ಪರಿಣಾಮ ವಂಚನೆಗೊಳಗಾದ ಬಗ್ಗೆ ಅರಿವಾದ ಬಳಿಕ ಶಂಕರ್ ಅವರು ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಒನ್‌ಫ್ಲಸ್ 6 ಮೊಬೈಲ್ ಫೋಟೋ ಹಾಕಿ ವಂಚನೆ!: ಮತ್ತೂಂದು ಪ್ರಕರಣದಲ್ಲಿ ಪ್ರಮೋದ್ ಎಂಬುವವರು ಕಡಿಮೆ ಬೆಲೆಗೆ ಮೊಬೈಲ್ ಖರೀದಿಸುವ ಸಲುವಾಗಿ ಒಎಲ್‌ಎಕ್ಸ್ ಜಾಲತಾಣದಲ್ಲಿ, ಮಾರಟಗಾರನೊಬ್ಬ ಹಾಕಿದ್ದ ಒನ್ ಫ್ಲಸ್6 ಮೊಬೈಲ್ ಖರೀದಿಸಲು ಮುಂದಾಗಿದ್ದರು. ಈ ವೇಳೆ ವಂಚಕ, ಮುಂಗಡವಾಗಿ 20 ಸಾವಿರ ರೂ. ಪಡೆದುಕೊಂಡು ಬಳಿಕ ತನ್ನ ಮೊಬೈಲ್ ನಂಬರ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಸಾರ್ವಜನಿಕರು ಎಚ್ಚರ ವಹಿಸಬೇಕು!: ಸೈಬರ್ ವಂಚನೆಗೆ ಕಡಿವಾಣ ಹಾಕುವಲ್ಲಿ ಸಾರ್ವಜನಿಕರ ಪಾತ್ರವೂ ಮಹತ್ವದ್ದಾಗಿದೆ. ಆನ್‌ಲೈನ್ ಮಾರಾಟ ತಾಣಗಳಲ್ಲಿ ಸಕ್ರಿಯವಾಗಿರುವ ವಂಚಕರು ತಾವು ಪ್ರಕಟಿಸುವ ವಸ್ತುಗಳ ಮಾಲೀಕರು ಆಗಿರುವುದಿಲ್ಲ. ವಸ್ತುಗಳನ್ನು ತಂದುಕೊಟ್ಟ ಬಳಿಕವೇ ಪೂರ್ತಿ ಹಣ ಪಾವತಿಸುವುದಾಗಿ ಸ್ಪಷ್ಟವಾಗಿ ಹೇಳಬೇಕು.
ಸಾಮಾನ್ಯವಾಗಿ ನೀವು ಕಡಿಮೆ ಮುಂಗಡ ಹಣ ನೀಡುವುದಾಗಿ ಹೇಳಿದರೂ ವಂಚಕರು ಒಪ್ಪಿಕೊಳ್ಳುತ್ತಾರೆ. ಜತೆಗೆ, ಪದೇ ಪದೆ ಅವರೇ ಕರೆ ಮಾಡಿ ಮಾರಾಟಕ್ಕಿಟ್ಟ ವಸ್ತುಗಳನ್ನು ತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಾರೆ. ಈ ರೀತಿಯ ಕೆಲವು ಸೂಕ್ಷ್ಮತೆಗಳನ್ನು ಗಮನಿಸಿ ಎಚ್ಚರದಿಂದಿದ್ದರೆ ವಂಚನೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
* ಮಂಜುನಾಥ ಲಘುಮೇನಹಳ್ಳಿ