ಎಚ್.ಡಿ.ಕೋಟೆ: “ಇನ್ಮುಂದೆ ನಾನು ಮಗು ತೋರಿಸಿ ಭಿಕ್ಷಾಟನೆ ಮಾಡೋಲ್ಲ, ಕುಡಿಯೋಲ್ಲ, ಪಡಿತರ ಆಹಾರ ಪದಾರ್ಥ ಮಾರಾಟ ಮಾಡದೆ ಕೂಲಿ ಮಾಡಿ ಮಗು ಪೋಷಿಸಿಕೊಂಡು ಹಾಡಿಯ ಮಂದಿಯೊಡನೆ ನೆಮ್ಮದಿಯ ಜೀವನ ನಡೆಸುತ್ತೇನೆ. ದಯವಿಟ್ಟು ಅವಕಾಶ ನೀಡಿ ಹಿಂದೆ ನಾನು ಮಾಡಿದ್ದೇಲ್ಲಾ ತಪ್ಪಾಗಿದೆ ಕ್ಷಮಿಸಿ’… ಇದು ಕಳೆದ ವಾರ ತಾಲೂಕಿನ ಚಿಕ್ಕೆರೆಹಾಡಿಯಲ್ಲಿ ಮದ್ಯದ ಅಮಲಿನಲ್ಲಿ ತನ್ನ ಕರುಳ ಬಳ್ಳೆಯನ್ನು ಬೆಂಕಿಗೆ ಎಸೆದು ಸುದ್ದಿಯಾಗಿದ್ದ ಆದಿವಾಸಿ ಸುಧಾಳ ಅಳಲು.
ಸುಧಾ ಮದ್ಯವ್ಯಸನಿಯಾಗಿದ್ದು ಕುಡಿತ ಅಮಲಿನಲ್ಲಿ ತನ್ನ 2 ವರ್ಷದ ಕಂದನನ್ನು ಬೆಂಕಿಗೆ ಹಾಕಿದ್ದಳು. ಮಗುವಿನ ಮುಖ ಬಹುತೇಕ ಸುಟ್ಟ ಗಾಯಗಳಾದರೂ ಆಸ್ಪತ್ರೆಗೆ ದಾಖಲಿಸಿರಲಿಲ್ಲ. ಬಳಿಕ ಆಕೆಯ ಮನವೊಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಜಿಲ್ಲೆ ಮತ್ತು ತಾಲೂಕು ಅಧಿಕಾರಿಗಳು ಬುಧವಾರ ಚಿಕ್ಕರೆಹಾಡಿಗೆ ಭೇಟಿದ್ದರು. ಅಲ್ಲದೆ ಸುಧಾ ಮದ್ಯಕ್ಕಾಗಿ ಪಡಿತರ ಆಹಾರ ಪದಾರ್ಥವನ್ನು ಮಾರಾಟ ಮಾಡುತ್ತಿರುವುದು,
ಎಳೆಯ ಕಂದನನ್ನು ದುರ್ಬಳಕೆ ಮಾಡಿಕೊಂಡು ಭಿಕ್ಷಾಟನೆ ಮಾಡುತ್ತಿರುವ ಬಗ್ಗೆ ಹಾಡಿಯ ಜನರಲ್ಲಿರುವ ವಿರೋಧದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಈ ಎಲ್ಲ ಕಾರಣದಿಂದ ಸುಧಾಳನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದರು. ಸುಧಾ ಒಮ್ಮೆ ಕ್ಷಮಿಸಿ ಬದುಕಲು ಅವಕಾಶ ನೀಡದಿದ್ದರೆ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿ ಕೊಳ್ಳುವ ಬೆದರಿಕೆ ಹಾಕಿದ್ದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಗದೀಶ್, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಶೇಷಾದ್ರಿ ಮೊದಲಾದವರು ಹಾಡಿಯ ಮಂದಿಯೊಡನೆ ಸಮಾಲೋಚನೆ ನಡೆಸಿದರು.
ಹಾಡಿ ನಿವಾಸಿಗರಿಂದ ತೀವ್ರ ವಿರೋಧ: ಹಲವಾರು ಭಾರಿ ಬುದ್ಧಿ ವಿವೇಕ ಹೇಳಿದರೂ ತಿದ್ದಿಕೊಳ್ಳುತ್ತಿಲ್ಲ. ಕೆಟ್ಟ ಕೆಟ್ಟ ಪದಗಳಿಂದ ಹಾಡಿಯ ಮಂದಿಯನ್ನು ನಿಂದಿಸುತ್ತಾಳೆ. ಹಾಗಾಗಿ ಹಾಡಿಗೆ ಸುಧಾಳನ್ನು ಸೇರಿಸೊಲ್ಲ ಎಂದು ಹಾಡಿಯ ನಿವಾಸಿಗಳು ಪಟ್ಟು ಹಿಡಿದರು. ಅಂತಿಮವಾಗಿ ಇನ್ನೊಮ್ಮೆ ಸುಧಾಳಿಂದ ಇಂತಹ ಘಟನೆ ಮರುಕಳಿಸಿದರೆ ಆಕೆಯನ್ನು ಆ ತಕ್ಷಣವೇ ತಾಲೂಕು ಆಡಳಿತ ಪೊಲೀಸರ ಸಹಕಾರದಿಂದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸುವುದಾಗಿ ತಿಳಿಸಲಾಯಿತು. ಹಾಡಿಯ ಮಂದಿ ಆಕೆಯೊಡನೆ ಸೌಜನ್ಯದಿಂದ ಇರುವಂತೆ ಸಮಾಧಾನ ಪಡಿಸಿದರು.
ಸುಧಾಳ ವರ್ತನೆಯಿಂದ ಬೇಸತ್ತ ಆಕೆಯ ಅಕ್ಕ ನಾಗಮ್ಮ ಮಾತನಾಡಿ, ಸುಧಾ ಬದಲಾವಣೆಯಾಗದೆ ತನ್ನ ಹಳೆಯ ಚಾಳಿ ಮುಂದುವರಿಸಿದರೆ ಆಕೆಯನ್ನು ಕಡಿದು ತಾನೇ ಖುದ್ದು ಜೈಲಿಗೆ ಹೋಗುತ್ತೇನೆ. ಇವಳಿಂದ ನಮ್ಮ ಮಾನ ಮರ್ಯಾದೆ ಎಲ್ಲಾ ಹಾಳಾಗಿದೆ ಎಂದು ಉದ್ವೇಗವಾಗಿಯೇ ಮಾತ ನಾಡಿದರು. ಮುಂದೆ ಎಲ್ಲಾ ಸರಿಪಡಿ ಸುವುದಾಗಿ ಸಭಿಕರು ನಾಗಮ್ಮನನ್ನು ಸಮಾಧಾನ ಪಡಿಸಿದರು.
ತಪ್ಪಾಗಿದೆ: ಎಲ್ಲಾ ಆಲಿಸಿದ ಸುಧಾ, ಮಾತ್ರ ಇನ್ನು ಮುಂದೆ ಈ ರೀತಿ ತಾನು ಮಾಡೋಲ್ಲ. ತನ್ನ ಮಗುವಿನೊಂದಿಗೆ ಕೂಲಿ ಮಾಡಿ ಕೊಂಡು ಜೀವನ ನಡೆಸುತ್ತೇನೆ. ತನಗೆ ಜೀವನ ನಡೆಸಲು ಅವಕಾಶ ನೀಡಿ ಎಂದು ಹಾಡಿಯ ಯಜಮಾನ ಕರಿಯಯ್ಯನ ಪಾದಗಳಿಗೆರಗಿದಳು. ಮದ್ಯ ವ್ಯವಸನ ಬಿಟ್ಟು ಸ್ವಂತ ಜೀವನ ನಡೆಸುವುದಾದರೆ ತರಬೇತಿ ನೀಡಿ ಉಚಿತವಾಗಿ ಹೊಲಿಗೆ ಯಂತ್ರ ನೀಡುತ್ತೇವೆ. ಜೀವನೋಪಾಯಕ್ಕಾಗಿ ಕುರಿಗಳನ್ನು ನೀಡು ಜೀವನಕ್ಕೆ ಅವಕಾಶ ನೀಡುವುದಾಗಿ ಸಮಾಜ ಕಲ್ಯಾಣಾ ಧಿಕಾರಿ ಜಗದೀಶ್ ಸಭೆಯಲ್ಲಿ ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್, ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಹರ್ಷಿತ್‌ಶೆಟ್ಟಿ, ಟೈಬಲ್ ಇನ್ಸ್‌ಪೆಕ್ಟರ್ ರಮೇಶ, ತಾಲೂಕು ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಜಶೀಲ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟಿನ ವೆಂಕಟಸ್ವಾಮಿ, ಲಿಂಗರಾಜು, ಮೇಲ್ವಿಚಾರಕಿ ಚಿನ್ನಮ್ಮ ಇತರರಿದ್ದರು.