ಪ್ರತಿ ತಿಂಗಳು 3ನೇ ತಾರೀಖು ಬರುವುದನ್ನೇ ಕಾಯುವವಳು ನಾನು. ಯಾಕಂದ್ರೆ, ಅವತ್ತು ಸಂಬಳದ ದಿನ. ಆದರೆ ಈಗ ಹತ್ತನೇ ತಾರೀಖಾದರೂ ಸಂಬಳ ಕೈಗೆ ಬರುವ ಗ್ಯಾರಂಟಿ ಇಲ್ಲ. ಕಳೆದ ತಿಂಗಳು 40% ವೇತನ ಕಡಿತವಾಗಿದೆ. ಯಜಮಾನರ ಆಫಿಸ್‌ನಲ್ಲಿಯೂ ಅಷ್ಟೇ. ಇಡೀ ಜಗತ್ತಿಗೇ ತೊಂದರೆ ಆಗಿರುವಾಗ, ಉದ್ಯೋಗದಾತರನ್ನು ದೂರಿ ಏನು ಪ್ರಯೋಜನ ಹೇಳಿ? ನಮ್ಮ ಖರ್ಚು-ವೆಚ್ಚಗಳಲ್ಲಿ ಕೈ ಹಿಡಿದರೆ, ಹೇಗೋ ನಿಭಾಯಿಸಬಹುದು. ಕಳೆದ ಎರಡು ತಿಂಗಳಿನಿಂದ, ಇದ್ದುದರಲ್ಲಿಯೇ ಮ್ಯಾನೇಜ್ ಮಾಡುವ ಕಲೆಯನ್ನು ಕಲಿಯುತ್ತಿದ್ದೇನೆ. ಕೆಲವು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುತ್ತಿದ್ದೇನೆ.
ಒಬ್ಬರೇ ದುಡಿಯುವ ಕುಟುಂಬಗಳಿಗೆ, ವೇತನ ಕಡಿತ ಬಹಳ ದೊಡ್ಡ ಪೆಟ್ಟು ನೀಡುತ್ತದೆ. ಗಂಡ-ಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿದ್ದರೆ, ಪರಿಸ್ಥಿತಿ ನಿಭಾಯಿಸುವುದು ಸುಲಭ. ಸಂಬಳ ಕೈಗೆ ಸಿಕ್ಕ ಕೂಡಲೇ, ಬಾಡಿಗೆ, ಕರೆಂಟ್ ಬಿಲ್, ನೀರಿನ ಬಿಲ್ ಅನ್ನು ಕಟ್ಟಿ ಬಿಡಿ. ಯಾಕಂದ್ರೆ, ಇವಿಷ್ಟನ್ನು ಯಾವುದೇ ರೀತಿಯಲ್ಲೂ ತಪ್ಪಿಸಲು ಸಾಧ್ಯವಿಲ್ಲ. ಉಳಿದ ಹಣದಲ್ಲಿ ತಿಂಗಳು ಕಳೆಯುವುದು ಹೇಗೆಂದು ಯೋಚಿಸಬಹುದು. ಮೊದಲು ನಾವಿಬ್ಬರೂ ಬೇರೆ ಬೇರೆ ಗಾಡಿಯಲ್ಲಿ ಆಫಿಸ್‌ಗೆ ಹೋಗುತ್ತಿದ್ದೆವು.
ನನ್ನ ಆಫಿಸ್‌ನಿಂದ ಯಜಮಾನರ ಆಫಿಸ್‌ಗೆ ಮೂರು ಕಿ.ಮೀ. ಈಗ ನಾವಿಬ್ಬರೂ ಒಂದೇ ಸ್ಕೂಟಿಯಲ್ಲಿ ಹೋಗಿ, ಬರುತ್ತಿದ್ದೇವೆ. ಇದರಿಂದ ಒಬ್ಬರ ಗಾಡಿಯ ಪೆಟ್ರೋಲ್‌ನ ಹಣ ಉಳಿಯುತ್ತಿದೆ. ವ್ಯಾಕ್ಸಿಂಗ್, ಐ ಬ್ರೋ, ಫೇಶಿಯಲ್ ಅಂತ ಎರಡು ತಿಂಗಳಿಗೊಮ್ಮೆ ಯಾದರೂ ಪಾರ್ಲರ್‌ನ ಖರ್ಚು ಸಾವಿರ ಮುಟ್ಟುತ್ತಿತ್ತು. ಈಗ ಅಷ್ಟೊಂದು ಖರ್ಚು ಮಾಡುವ ಸ್ಥಿತಿಯಲ್ಲಿ ನಾನಿಲ್ಲ. ಮೊದಲಿನಂತೆ ಹೋಟೆಲ್, ಸಿನಿಮಾ, ಚಾಟ್ಸ್ ಅಂತ ಖರ್ಚು ಮಾಡುವುದಿಲ್ಲ. ಇದು ಹಣ ಉಳಿತಾಯದ ದೃಷ್ಟಿಯಿಂದಲ್ಲ, ಸೋಂಕು ತಡೆಯುವ ನಿಟ್ಟಿನಲ್ಲೂ ಉತ್ತಮವಾದುದು.
ಇನ್ನೊಂದೆರಡು ತಿಂಗಳು ಶಾಲೆಗಳು ತೆರೆಯುವ ಸೂಚನೆ ಇಲ್ಲವಾದ್ದರಿಂದ ಮಕ್ಕಳಿಗೆ ಹೊಸ ಬಟ್ಟೆ, ಶೂ, ಬ್ಯಾಗ್ ಕೊಡಿಸುವ ಖರ್ಚು ಕೂಡಾ ಮುಂದಕ್ಕೆ ಹೋಗುತ್ತದೆ (ಆ ವೇಳೆಗೆ ಕಂಪನಿಯ ಸ್ಥಿತಿಯೂ ಉತ್ತಮವಾಗಿ, ಮೊದಲಿನಂತೆ ವೇತನ ಸಿಗಬಹುದು) ಈಗಲೇ ಆ ಕುರಿತು ಚಿಂತಿಸಿ, ಹೆದರುವ ಅಗತ್ಯವಿಲ್ಲ. ವಾರಕ್ಕೊಮ್ಮೆ ಶಾಪಿಂಗ್, ಇಷ್ಟವಾಯ್ತು ಅಂತ ಅಗತ್ಯವಿಲ್ಲದಿದ್ದರೂ ಕೊಳ್ಳುವ ಸೀರೆ, ಡಿಸ್ಕೌಂಟ್ ನೆಪದಲ್ಲಿ ಆನ್‌ಲೈನ್ ಸೈಟ್‌ಗಳಲ್ಲಿ ಕಂಡದ್ದನ್ನು ಖರೀದಿಸುವ ಆಸೆಗೆ ಕಡಿವಾಣ ಹಾಕುವ ಶಪಥ ಮಾಡಿದ್ದೇನೆ. ಹೊಸ ಕ್ಯಾಮೆರಾ ಕೊಳ್ಳ ಬೇಕೆಂಬ ಯಜಮಾನರ ಆಸೆಗೂ, ಸೈಕಲ್ ಕೊಡಿಸುತ್ತೇ ನೆಂದು ಮಗನಿಗೆ ಮಾಡಿದ್ದ ಪ್ರಾಮಿಸ್‌ಗೂ ಸದ್ಯಕ್ಕೆ ಅಲ್ಪ ವಿರಾಮ.
ಹೌದು, ವೇತನ ಕಡಿತವಾಗಿದೆ. ಆಸೆಗಳಿಗೆ ಅಂಕುಶ ಹಾಕಿ, ಅಗತ್ಯಗಳನ್ನು ಪೂರೈಸಿಕೊಳ್ಳುವ ಸ್ಥಿತಿ ಬಂದಿದೆ. ಹಾಗಂತ ಕಂಗಾಲಾಗುವ ಬದಲು, ಹಾಸಿಗೆ ಇದ್ದಷ್ಟೇ ಕಾಲು ಚಾಚುವ, ಎಲ್ಲೆಲ್ಲಿ ಹಣ ಪೋಲು ಮಾಡುತ್ತಿದ್ದೇವೆ ಅನ್ನಿಸುತ್ತದೋ ಅದನ್ನು ತಡೆಯಲು ಮುಂದಾಗೋಣ. ಸಿಗುತ್ತಿದ್ದ ಸಂಬಳ ಕಡಿಮೆಯಾ ಯಿತು ನಿಜ, ಅಷ್ಟಕ್ಕೇ ಬದುಕಿನ ಸಂತೋಷವೂ ಕಡಿಮೆಯಾಗ ಬಾರದಲ್ಲವಾ?
ರೇಷ್ಮಾ ಕೆ.ಆರ್.