Advertisement

ನಿಲ್ಲದ ಚೀನ ಉದ್ಧಟತನ ತಕ್ಕ ಸಂದೇಶ ಕಳಿಸಿ

03:13 AM Jul 23, 2020 | Hari Prasad |

ಇಡೀ ಜಗತ್ತಿಗೆ ಕೋವಿಡ್‌ ಹರಡಲು ಕಾರಣವಾದ ಚೀನ, ಪಶ್ಚಾತ್ತಾಪಪಡುವ ವಿಚಾರ ಒತ್ತಟ್ಟಿಗಿರಲಿ, ಈ ಬಿಕ್ಕಟ್ಟಿನ ಲಾಭ ಪಡೆದು ತಾನು ಗಡಿ ಹಂಚಿಕೊಳ್ಳುವ ಬಹುತೇಕ ರಾಷ್ಟ್ರಗಳೊಂದಿಗೆ ಗಡಿ ಭಾಗದಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಲೇ ಇದೆ.

Advertisement

ಅದರಲ್ಲೂ ಭಾರತದ ವಿರುದ್ಧವಂತೂ ಅದರ ಕುತಂತ್ರ ಮುಂದುವರಿದೇ ಇದೆ. ಇತ್ತೀಚೆಗಷ್ಟೇ ಪೂರ್ವ ಲಡಾಖ್‌-ಗಾಲ್ವಾನ್‌ ಕಣಿವೆಯಲ್ಲಿ ಸಾರ್ವಭೌಮತ್ವ ಸ್ಥಾಪಿಸುವ ಅದರ ದುಬುìದ್ಧಿಯಿಂದಾಗಿ ಎರಡೂ ರಾಷ್ಟ್ರಗಳ ಸೈನ್ಯಗಳ ನಡುವೆ ಯುದ್ಧ ಸದೃಶ ವಾತಾವರಣ ನಿರ್ಮಾಣವಾಗಿತ್ತು.

ತದನಂತದ ಸರಕಾರದ ಮಟ್ಟದಲ್ಲಿ ಹಾಗೂ ಸೇನಾಧಿಕಾರಿಗಳ ಸ್ತರದಲ್ಲಿ ನಡೆದ ಅನೇಕ ಸುತ್ತಿನ ಮಾತುಕತೆಯ ಬಳಿಕ ತಾನು ಹಿಂದೆ ಸರಿಯುವುದಾಗಿ ಅದು ಒಪ್ಪಿಕೊಂಡಿತ್ತು.  ಗಾಲ್ವಾನ್‌ ಕಣಿವೆಯಲ್ಲಿ ಅದು 1-2 ಕಿಲೋಮೀಟರ್‌ ಹಿಂದೆಯೂ ಸರಿದಿತ್ತು, ಅಲ್ಲದೇ ಅಲ್ಲಿ ನಿರ್ಮಿಸಿದ್ದ ಕ್ಯಾಂಪ್‌ಗಳನ್ನೂ ತೆರವುಗೊಳಿಸಿತ್ತು. ಆದರೆ ಚೀನದ ದುಬುìದ್ಧಿಯ ಅರಿವಿರುವ ಭಾರತೀಯ ಸೇನೆ, ತನ್ನ ಎಚ್ಚರಿಕೆಯಲ್ಲಿ ತಾನಿತ್ತು.

ಈಗ ಚೀನ ಪೂರ್ಣವಾಗಿ ಹಿಂದೆ ಸರಿಯುವ ಷರತ್ತನ್ನು ಪಾಲಿಸುತ್ತಿಲ್ಲಎಂದು ತಿಳಿದುಬಂದಿದೆ. ಅಲ್ಲದೇ 40 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಎಲ್‌ಎಸಿಯ ತನ್ನ ಬದಿಯ ಬಳಿ ಹಾಗೂ ಘರ್ಷಣೆಯ ಸ್ಥಳಗಳಲ್ಲಿ ನಿಯೋಜಿಸಿದೆ ಎಂದು ವರದಿಯಾಗುತ್ತಿದೆ. ಒಟ್ಟಿನಲ್ಲಿ ಚೀನಿ ಸೈನ್ಯಕ್ಕೆ ಪರಿಸ್ಥಿತಿಯನ್ನು ತಿಳಿಗೊಳ್ಳುವುದು ಬೇಕಿಲ್ಲವೆನಿಸುತ್ತದೆ.

ಚೀನದ ಈ ದುರ್ಗುಣದ ಬಗ್ಗೆ ಸೇನೆಗೆ ಮೊದಲೇ ತಿಳಿದಿತ್ತು, ಈ ಕಾರಣದಿಂದಲೇ ಭಾರತ ತನ್ನ ಸಿದ್ಧತೆಯಲ್ಲಿ ತಾನಿದೆ. ಹಿಂದೆ ಸರಿಯುವ ನಾಟಕವಾಡಿ ಸ್ವಲ್ಪ ಸ್ವಲ್ಪ ಜಾಗವನ್ನೇ ಕಬಳಿಸಿಕೊಳ್ಳುವ ಅದರ ಸಲಾಮಿ ಸ್ಲೆ„ಸಿಂಗ್‌ ತಂತ್ರ ಭಾರತವಷ್ಟೇ ಅಲ್ಲ, ಚೀನದೊಂದಿಗೆ ಗಡಿ ಹಂಚಿಕೊಂಡ ಎಲ್ಲ ರಾಷ್ಟ್ರಗಳೂ ಅರಿತಿವೆ. ಆದರೆ ಈ ಬಾರಿ ಭಾರತ ಚೀನದ ತಂತ್ರಗಳನ್ನೆಲ್ಲ ಪುಡಿ ಮಾಡಲು ಸಿದ್ಧವಾಗಿ ನಿಂತಿದೆ.

Advertisement

ಸತ್ಯವೇನೆಂದರೆ, ಭಾರತವು ಗಡಿಭಾಗದಲ್ಲಿ, ಅದರಲ್ಲೂ ಮುಖ್ಯವಾಗಿ ಗಾಲ್ವಾನ್‌ ಕಣಿವೆಯ ಸನಿಹ ಹಾಗೂ ಪೂರ್ವ ಲಡಾಖ್‌ನ ಇನ್ನಿತರೆಡೆಗಳಲ್ಲಿ ನಿರ್ಮಿಸುತ್ತಿರುವ ರಸ್ತೆಗಳು, ಕೈಗೊಂಡಿರುವ ಮೂಲಸೌಕರ್ಯಾಭಿವೃದ್ಧಿ ಕಾರ್ಯಗಳು ಚೀನದ ನಿದ್ದೆಗೆಡಿಸಿವೆ. ಈ ರಸ್ತೆಗಳು ಚೀನದ ಸೈನಿಕರ ಚಲನವಲನಗಳ ಮೇಲೆ ಕಣ್ಣಿಡಲು ಭಾರತೀಯ ಸೈನಿಕರಿಗೆ ಸಹಕಾರಿ. ಈ ಕಾರಣಕ್ಕಾಗಿಯೇ ಬಿಕ್ಕಟ್ಟು ಸೃಷ್ಟಿಸಿ, ರಸ್ತೆ ನಿರ್ಮಾಣ ಕೆಲಸಗಳನ್ನು ಹೇಗಾದರೂ ತಡೆಯಬೇಕೆಂದು ಪಿಎಲ್‌ಎ ಸೈನಿಕರು ಪ್ರಯತ್ನಿಸುತ್ತಲೇ ಇದ್ದಾರೆ.

ಆದರೆ ಯಾವುದೇ ಕಾರಣಕ್ಕೂ ರಸ್ತೆ ನಿರ್ಮಾಣ ಕೆಲಸಗಳನ್ನು ನಿಲ್ಲಿಸುವುದಿಲ್ಲ ಎಂದು ನಮ್ಮ ಬಾರ್ಡರ್‌ ರೋಡ್ಸ್‌ ಆರ್ಗನೈಸೇಶನ್‌ ಸ್ಪಷ್ಟಪಡಿಸಿದೆ. ಅಲ್ಲದೇ, ಭಾರತವು ತನ್ನ ಬದಿಯ ಆಯಕಟ್ಟಿನ ಜಾಗಗಳಲ್ಲಿ ಸೈನಿಕರನ್ನು ನಿಯೋಜಿಸಿ, ಯಾವುದೇ ಸವಾಲನ್ನೂ ಎದುರಿಸಲು ಸಿದ್ಧವಾಗಿಯೇ ಇದೆ. ಚೀನದ ದುರ್ಗುಣ ಭಾರತ ಸೇರಿದಂತೆ ಸುತ್ತಲಿನ ಎಲ್ಲ ರಾಷ್ಟ್ರಗಳಿಗೂ ಎಷ್ಟು ಅರ್ಥವಾಗಿ ಬಿಟ್ಟಿದೆಎಂದರೆ ಚೀನಿ ಸೇನೆ ಮಾತುಕತೆಗಳಲ್ಲಿ ಎಷ್ಟೇ ಭರವಸೆಯ ಸಂದೇಶ

ನೀಡಿದರೂ ಎದುರಿನ ದೇಶಗಳೀಗ ಅದನ್ನು ನಂಬದೆ ತಮ್ಮ ಸಿದ್ಧತೆಯಲ್ಲಿ ತಾವಿರಲಾರಂಭಿಸಿವೆ. ಭಾರತ ಈ ವಿಷಯದಲ್ಲಿ ತಡಮಾಡದೇ ಚೀನದ ಅತಿರೇಕಗಳನ್ನು ಹತ್ತಿಕ್ಕುವಂಥ ಹೆಜ್ಜೆಯಿಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next