ಹೊಸದಿಲ್ಲಿ: ಕೋವಿಡ್ ನಿಂದ ಸಂಕಷ್ಟಕ್ಕೊಳಗಾದವರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಕಳೆದ ವರ್ಷ ಸ್ಥಾಪಿಸಿದ್ದ ಪಿಎಂ ಕೇರ್ಸ್ ಫಂಡ್ ಭಾರತ ಸರಕಾರದ ನಿಧಿ ಅಲ್ಲ. ಅದಕ್ಕಾಗಿ ಗ್ರಹಿಸಲಾಗಿರುವ ಮೊತ್ತ ಕೇಂದ್ರದ ಬೊಕ್ಕಸಕ್ಕೆ ಜಮೆ ಆಗುತ್ತಿಲ್ಲವೆಂದು ದಿಲ್ಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ:ಮೊದಲು ಮತಾಂತರ ನಿಲ್ಲಬೇಕು: ಸಂಸದ ಪ್ರತಾಪ್ ಸಿಂಹ ಗುಡುಗು
ಈ ಬಗ್ಗೆ ಪ್ರಧಾನಮಂತ್ರಿಗಳ ಕಚೇರಿಯಲ್ಲಿರುವ ಹೆಚ್ಚುವರಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಮಾಹಿತಿ ಸಲ್ಲಿಸಿದ್ದಾರೆ. ಅದರ ಎಲ್ಲ ವ್ಯವಹಾರಗಳು ಪಾರದರ್ಶಕವಾಗಿಯೇ ಇವೆ. ಸಿಎಜಿ ಸೂಚಿಸಿದ ಲೆಕ್ಕಪತ್ರ ಪರಿಶೋಧಕರಿಂದ ಅದರ ಲೆಕ್ಕಪತ್ರಗಳನ್ನು ಪರಿಶೋಧಿಸಲಾಗುತ್ತದೆ ಎಂದು ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಮಾಹಿತಿಯಲ್ಲಿ ಉಲ್ಲೇಖಿಸಿದ್ದಾರೆ.
ಪಿಎಂ ಕೇರ್ ಫಂಡ್ ಅನ್ನು ಪ್ರಧಾನಿ ಸ್ಥಾಪಿಸಿರುವುದರಿಂದ ಅದು ಸರ್ಕಾರದ ನಿಧಿಯಾಗುತ್ತದೆ. ಒಂದು ವೇಳೆ ಅದು ಸರ್ಕಾರದ ನಿಧಿಯಲ್ಲ ಅಂತಾದರೆ ವೆಬ್ ಸೈಟ್ ನ ಹೆಸರಿನಲ್ಲಿ “gov” ಬಳಕೆ ಹಾಗೂ ಪ್ರಧಾನಿ ಭಾವಚಿತ್ರ ಮತ್ತು ಸರ್ಕಾರದ ಲಾಂಛನ ಹಾಕಿರುವುದು ಏಕೆ ಎಂದು ಪ್ರಶ್ನಿಸಿ ಸಮ್ಯಕ್ ಗಂಗ್ವಾಲ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪಿಎಂ ಕೇರ್ಸ್ ಫಂಡ್ ಗೆ ಕೋಟ್ಯಂತರ ರೂಪಾಯಿ ಹಣ ಹರಿದು ಬರುತ್ತಿದ್ದು, ಈ ದೇಣಿಗೆ ಹಣದ ಪಾರದರ್ಶಕ ಲೆಕ್ಕಚಾರದ ಬಗ್ಗೆ ಸಾಮಾಜಿಕ ಕಾರ್ಯಕರ್ತರು, ವಕೀಲರು, ರಾಜಕೀಯ ಪಕ್ಷಗಳು ಪ್ರಶ್ನಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.