ಚೆನ್ನೈನಲ್ಲಿ ನಡೆದ ಜಲ್ಲಿಕಟ್ಟು ಪ್ರತಿಭಟನೆಯ ಕೊನೆದಿನ ನಡೆದ ಹಿಂಸಾಚಾರದ ಹಿಂದೆ ದುಷ್ಟಶಕ್ತಿಗಳ ಕೈವಾಡವಿದೆ. ಪೊಲೀಸರೂ ಕೂಡ ಗಲಭೆಯಲ್ಲಿ ಭಾಗಿಯಾದ ವೀಡಿಯೋಗಳಿವೆ. ಇದು ಅಕ್ಷಮ್ಯ. ಹೋರಾಟ ಹೀಗೆ ಹಾದಿ ತಪ್ಪಬಾರದು.
ಒಳ್ಳೆಯ ಉದ್ದೇಶದ ಹೋರಾಟವನ್ನು ಸಮಾಜ ಮತ್ತು ದೆಶ ವಿರೋಧಿ ಶಕ್ತಿಗಳು ಹೇಗೆ ಹೈಜಾಕ್ ಮಾಡಬಹುದು ಎಂಬುದಕ್ಕೆ ಜಲ್ಲಿಕಟ್ಟು ನಿಷೇಧ ವಿರುದ್ಧ ಮರೀನಾ ಬೀಚ್‌ನಲ್ಲಿ ನಡೆದ ಪ್ರತಿಭಟನೆಯ ಕೊನೆಯ ದಿನ ನಡೆದ ಹಿಂಸಾಚಾರ ಸಾಕ್ಷಿ. ಭವಿಷ್ಯದಲ್ಲಿ ಯಾವುದೇ ಹೋರಾಟ ಹೀಗಾಗದಂತೆ ಎಚ್ಚರವಿರಬೇಕು.
ತಮಿಳುನಾಡಿನಲ್ಲಿ ಒಂದು ವಾರ ಶಾಂತಿಯಿಂದ, ಶಿಸ್ತುಬದ್ಧವಾಗಿ ನಡೆದ ಪ್ರತಿಭಟನೆ ಫಲ ಸಿಕ್ಕಿದ ಬಳಿಕ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿರುವುದು ನಂಬಲು ಕಷ್ಟವಾಗುವ ಬೆಳವಣಿಗೆ. ತಮಿಳರ ತಮ್ಮ ಅಸ್ಮಿತೆ ಎಂದು ಭಾವಿಸುವ ಜಲ್ಲಿಕಟ್ಟು ಕ್ರೀಡೆಗಾಗಿ ಚೆನ್ನೈಯ ಮರೀನಾ ಬೀಚಿನಲ್ಲಿ ನಡೆಸಿದ ಪ್ರತಿಭಟನೆ ಈಗ ಹತ್ತಾರು ಅನುಮಾನಗಳನ್ನು ಹುಟ್ಟುಹಾಕಿದೆ. ಇದಕ್ಕೆ ಕಾರಣವಾಗಿರುವುದು ಚೆನ್ನೈಯಲ್ಲಿ ಸೋಮವಾರ ನಡೆದಿರುವ ವ್ಯಾಪಕ ಹಿಂಸಾಚಾರ. ಜ.17ರಂದು ಮರೀನಾ ಬೀಚಿನಲ್ಲಿ ಹೋರಾಟ ಪ್ರಾರಂಭವಾಗುವಾಗ ಇದ್ದದ್ದು ಕೆಲವೇ ನೂರು ಮಂದಿ. ಆದರೆ ಮರುದಿನ ಜನಸಾಗರವೇ ಹರಿದು ಬಂತು. ನೋಡುನೋಡುತ್ತಿದ್ದಂತೆ ಪ್ರತಿಭಟನೆಕಾರರ ಸಂಖ್ಯೆ ಲಕ್ಷ ದಾಟಿತು. ಆದರೂ ಪರಿಸ್ಥಿತಿ ನಿಯಂತ್ರಣದಲ್ಲಿತ್ತು. ಭಾರೀ ಸಂಖ್ಯೆಯಲ್ಲಿ ಕಾಲೇಜು ಯುವಕ-ಯುವತಿಯರಿದ್ದರೂ ಜನರು ಅದ್ಭುತವಾದ ಸಂಯಮ ತೋರಿಸಿದರು. ಹಾಗೇ ನೋಡಿದರೆ ಇದು ನಾಯಕನೇ ಇಲ್ಲದ ಹೋರಾಟವಾಗಿತ್ತು. ಜಲ್ಲಿಕಟ್ಟು ಮೇಲಿನ ನಿಷೇಧ ತೊಲಗಬೇಕೆಂಬ ಬೇಡಿಕೆ ಬಿಟ್ಟರೆ ಬೇರೆ ಯಾವ ಉದ್ದೇಶವೂ ಇರಲಿಲ್ಲ. ಹೋರಾಟಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರ ಮಣಿದ ಬಳಿಕ ಪ್ರತಿಭಟನೆಕಾರರೇ ಮರೀನಾ ಬೀಚಿನಲ್ಲಿ ಜಮೆಯಾಗಿದ್ದ ತ್ಯಾಜ್ಯವನ್ನೆಲ್ಲ ಸ್ವತ್ಛಗೊಳಿಸಿದರು. ಆ ಮಟ್ಟಿಗೆ ಅವರ ಹೋರಾಟ ವಿವೇಚನಾಯುತವಾಗಿತ್ತು.
ಜಯ ಲಭಿಸಿದ ಬಳಿಕ ಜನರು ಅಲ್ಲಿಂದ ನಿರ್ಗಮಿಸಬೇಕಿತ್ತು. ಆದರೆ ಆದದ್ದೇ ಬೇರೆ. ಎಲ್ಲ ಬಣ್ಣವನ್ನೂ ಮಸಿ ನುಂಗಿತು ಎಂಬಂತೆ ಕಡೆಯ ದಿನ ನಡೆದ ಹಿಂಸಾಚಾರ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದ್ದ ಹೋರಾಟಕ್ಕೆ ಕಳಂಕ ಅಂಟಿಸಿತು. ಜಲ್ಲಿಕಟ್ಟು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕೆಂಬ ಇನ್ನೊಂದು ಕುಂಟು ನೆಪ ಇಟ್ಟುಕೊಂಡು ಪ್ರತಿಭಟನೆ ಮುಂದುವರಿಸಲು ಕೆಲವು ಮಂದಿ ಪ್ರಯತ್ನಿಸಿದ್ದಾರೆ. ಅಲ್ಲಿಂದ ಹೋರಾಟದ ದಾರಿ ತಪ್ಪಿದೆ.
ಸೋಮವಾರ ನಡೆದಿರುವ ಹಿಂಸಾಚಾರ ನಾಗರಿಕ ಸಮಾಜ ಒಪ್ಪುವಂಥದ್ದಲ್ಲ. ಸಂದರ್ಭಕ್ಕೆ ಕಾಯುತ್ತಿದ್ದ ದೇಶ ವಿರೋಧಿ ವ್ಯಕ್ತಿಗಳು ಚಳವಳಿಯನ್ನು ಹೈಜಾಕ್ ಮಾಡಿವೆಯೇ? ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಮುಗಿಬೀಳಲು ಕಾಯುತ್ತಿರುವ ರಾಜಕೀಯ ಶಕ್ತಿಗಳು ಚಳವಳಿಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡಿವೆಯೇ? ಜಲ್ಲಿಕಟ್ಟಿಗೂ ಗಣರಾಜ್ಯೋತ್ಸವಕ್ಕೂ ಏನು ಸಂಬಂಧ? ಪ್ರತಿಭಟನೆಕಾರರು ಏಕೆ ಜ.26ರಂದು ಕರಾಳ ದಿನ ಆಚರಿಸಲು ನಿರ್ಧರಿಸಿದ್ದಾರೆ? ಜಲ್ಲಿಕಟ್ಟು ಮೇಲಿದ್ದ ನಿಷೇಧವನ್ನು ತೆರವುಗೊಳಿಸಲು ತ್ವರಿತವಾಗಿ ನಿರ್ಧಾರ ಕೈಗೊಂಡ ಪ್ರಧಾನಿ ಮೋದಿಗೆಕೆ ಧಿಕ್ಕಾರ ಕೂಗಬೇಕು? ಹೀಗೆ ಹಲವಾರು ಪ್ರಶ್ನೆಗಳು ಉದ್ಭವವಾಗಿವೆ.
ಬೃಹತ್ ಪ್ರತಿಭಟನೆಯಲ್ಲಿ ಜಿಹಾದಿ ಮತ್ತು ಎಲ್‌ಟಿಟಿಇ ಪರವಾಗಿರುವ ಶಕ್ತಿಗಳು ನುಸುಳಿಕೊಂಡಿವೆ. ಪಾಕ್ ಬೇಹುಪಡೆ ಐಎಸ್‌ಐ ಚಳವಳಿಯನ್ನು ದಿಕ್ಕುತಪ್ಪಿಸಲು ಹಣಸಹಾಯ ಮಾಡಿದೆ ಎಂದು ಕೆಲವು ವರದಿಗಳು ಹೇಳಿವೆ. ಜಲ್ಲಿಕಟ್ಟು ಪ್ರತಿಭಟನೆಯಲ್ಲಿ ಉಗ್ರ ಹಾಫಿಜ್ ಸಯೀದ್, ಉಸಾಮ ಬಿನ್ ಲಾದನ್, ಎಲ್‌ಟಿಟಿಇ ನಾಯಕ ಪ್ರಭಾಕರನ್ ಪೋಸ್ಟರ್‌ಗಳನ್ನು ಪ್ರದರ್ಶಿಸಿರುವುದು ಕೂಡ ಗಂಭೀರವಾದ ವಿಷಯ. ಪೊಲೀಸರೇ ರಿಕ್ಷಾಗಳಿಗೆ ಬೆಂಕಿ ಹಚ್ಚಿರುವ ಮತ್ತು ಮಹಿಳೆಯರು ಮಕ್ಕಳೆಂದು ನೋಡದೆ ಥಳಿಸಿರುವ ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇವರು ನಿಜವಾದ ಪೊಲೀಸರಾ ಅಥವಾ ಪೊಲೀಸ್ ವೇಷದಲ್ಲಿದ್ದ ದೇಶದ್ರೋಹಿಗಳಾ ಎನ್ನುವುದನ್ನು ಕೂಡ ಪತ್ತೆ ಹಚ್ಚಬೇಕು.
ಜಲ್ಲಿಕಟ್ಟು ಹೋರಾಟವನ್ನು ನೆಪವಾಗಿಟ್ಟುಕೊಂಡು ಅಸಹಿಷ್ಣು ಮಾದರಿಯ ಚಳವಳಿಗೆ ವೇದಿಕೆ ಸಿದ್ಧಪಡಿಸುವ ಷಡ್ಯಂತ್ರ ಇತ್ತು ಎಂಬ ಅನುಮಾನವೂ ಇದೆ. ಹೀಗಾಗಿ ಹಿಂಸಾಚಾರದ ಹಿಂದಿನ ಕಾಣದ ಕೈಗಳನ್ನು ಹೊರಗೆಳೆಯುವ ಅಗತ್ಯವಿದೆ. ಸ್ವತಂತ್ರ ತನಿಖಾ ಸಂಸ್ಥೆಯಿಂದ ಈ ಕುರಿತು ತ್ವರಿತವಾಗಿ ತನಿಖೆ ನಡೆಸಿ ಸತ್ಯ ಹೊರಬರುವಂತೆ ಮಾಡುವುದು ಸರಕಾರದ ಕರ್ತವ್ಯ.