Advertisement

ರೈತರಿಗೆ ನಷ್ಟ ಮಾಡಿ TTD ಗೆ ಕಡಿಮೆ ಬೆಲೆಗೆ ನಂದಿನಿ ತುಪ್ಪ ನೀಡಬೇಕಾ?

11:44 PM Aug 01, 2023 | Team Udayavani |

ಬೆಂಗಳೂರು: ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ 2 ಸ್ಥಾನದಲ್ಲಿರುವ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಸುಮಾರು 150 ಕೋಟಿ ರೂ. ಲಾಭದಲ್ಲಿದ್ದು ಗುಜರಾತ್‌ ಅಮೂಲ್‌ ಬ್ರ್ಯಾಂಡ್‌ಗೆ ತೀವ್ರ ಪೈಪೋಟಿ ನೀಡುತ್ತಿದೆ. ನೆರೆ ರಾಜ್ಯ ಕೇರಳ ಕೂಡ ಇದೀಗ ಸುಮಾರು 1.5 ಲಕ್ಷ ಲೀಟರ್‌ ನಂದಿನಿ ಹಾಲು ಪೂರೈಕೆಗೆ ಬೇಡಿಕೆ ಸಲ್ಲಿಸಿದೆ.ಆದರೆ ತಿರುಪತಿ ಲಡ್ಡುಗೆ ನಂದಿನಿ ತುಪ್ಪ ನೀಡುವ ವಿಚಾರವನ್ನು ಈಗ ಬಿಜೆಪಿ ರಾಜಕೀಯಗೊಳಿಸಲು ಹೊರಟಿದೆ. ಕೆಎಂಎಫ್ ಈ ನಾಡಿನ ರೈತರ ಸಂಸ್ಥೆ. ನಮ್ಮ ರೈತರಿಗೆ ನಷ್ಟ ಮಾಡಿ ಕಡಿಮೆ ಬೆಲೆಗೆ ತಿರುಪತಿ ಲಡ್ಡು ತಯಾರಿಸಲು ನಂದಿನಿ ತುಪ್ಪ ನೀಡಬೇಕಾ?.

Advertisement

– ಇದು ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ ಅವರ ಮಾತು.

“ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಕೆಎಂಎಫ್ನ ಹೊಸ ಕ್ರಿಯಾ ಯೋಜನೆ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಮಾತನಾಡಿದ್ದಾರೆ.

 ಕೆಎಂಎಫ್ ಕಟ್ಟಿಬೆಳೆಸಲು ನಿಮ್ಮ ಕನಸುಗಳೇನು?
ಹಲವು ಯಶೋಗಾಥೆ ಬರೆದಿರುವ ಕೆಎಂಎಫ್ವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಹೊಸದಾಗಿ ಚಾಕೊಲೆಟ್‌ ಪ್ಲಾಂಟ್‌, ಪುಟಾಣಿ ಮಕ್ಕಳಿಗಾಗಿ ಆಹಾರ ಉತ್ಪನ್ನಗಳ ತಯಾರಿಕೆ ಸೇರಿದಂತೆ ಹಲವು ಹೊಸ ಬ್ರ್ಯಾಂಡ್‌ಗಳನ್ನು ಗ್ರಾಹಕರಿಗೆ ಪರಿಚಯಿಸುವ ಇರಾದೆ ಇದೆ. ಸದ್ಯ ಮಹಾಮಂಡಳ ವ್ಯಾಪ್ತಿಯಲ್ಲಿ ಪ್ರತಿ ದಿನ 85 ಲಕ್ಷ ಲೀಟರ್‌ ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಅದನ್ನು 1 ಕೋಟಿ ಲೀಟರ್‌ಗೆ ಏರಿಕೆ ಮಾಡುವ ಉದ್ದೇಶ ಇದೆ.

 ಮಾರುಕಟ್ಟೆಯಲ್ಲಿ ಅಮೂಲ್‌ಗೆ ಸವಾಲೊಡ್ಡಿ ನಿಲ್ಲಲು ಕೆಎಂಎಫ್ ಎಷ್ಟು ಸಶಕ್ತ?
ಅಮೂಲ್‌ ಅಷ್ಟೇ ಅಲ್ಲ , ಎಲ್ಲ ಹಾಲಿನ ಉತ್ಪನ್ನಗಳಿಗೂ ನಂದಿನಿ ಸವಾಲೊಡ್ಡುತ್ತದೆ. ಕಾರಣ ನಮ್ಮ ಎಲ್ಲ ಉತ್ಪನ್ನಗಳು ಗುಣಮಟ್ಟದಲ್ಲಿ ನಂ.1. ಅಮೂಲ್‌ ಆನ್‌ಲೈನ್‌ ಮಾರಾಟಕ್ಕೆ ಅಡಿಯಿಟ್ಟಿದೆ, ನಾವೂ ಸಿದ್ಧವಾಗುತ್ತಿದ್ದೇವೆ. ನಮ್ಮೆಲ್ಲಾ ಉತ್ಪನ್ನಗಳು ಫಾಸ್ಟ್‌ ಮೂವಿಂಗ್‌ ಇದೆ. ಅಮೂಲ್‌ಗಿಂತ ನಾವೇನು ಕಡಿಮೆಯಿಲ್ಲ. ಹಾಲಿನ ಉತ್ಪಾದನೆಯಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿದ್ದೇವೆ. ಗುಜರಾತ್‌ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಅಮೂಲ್‌ ತೀವ್ರ ಪೈಪೋಟಿ ನೀಡುತ್ತಿದ್ದೇವೆ. ಕಳೆದ ವರ್ಷ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ 110 ಕೋಟಿ ರೂ.ಲಾಭದಲ್ಲಿತ್ತು. ಈ ವರ್ಷ 150 ಕೋಟಿ ರೂ.ಲಾಭದಲ್ಲಿದೆ.

Advertisement

 ಕೇರಳದಲ್ಲಿ ನಂದಿನಿ ಗೋ ಬ್ಯಾಕ್‌ ಚಳವಳಿ ಆರಂಭವಾಗಿತ್ತಲ್ವಾ?
ಕೇರಳ ಸಚಿವರೊಬ್ಬರು ಬೈ ಮಿಸ್ಟೇಕ್‌ ಆಗಿ ಆ ರೀತಿ ಹೇಳಿದ್ದಾರೆ. ಆದರೆ ಅಲ್ಲಿನ ಜನರಾಗಲಿ, ಡೈರಿಗಳಾಗಲಿ ಆ ರೀತಿ ಹೇಳಿಲ್ಲ. ಆ ಹಿನ್ನೆಲೆಯಲ್ಲೆ ಈಗ ಕೇರಳ ದಿನಾಲು 1.5 ಲಕ್ಷ ಲೀಟರ್‌ ಹಾಲು ಪೂರೈಕೆ ಮಾಡುವಂತೆ ಕೆಎಂಎಫ್ನಲ್ಲಿ ಬೇಡಿಕೆ ಸಲ್ಲಿಸಿದೆ. ಈ ಬಗ್ಗೆ ಮಾತುಕತೆ ಕೂಡ ನಡೆದಿದೆ. ಕೆಎಂಎಫ್ ಮತ್ತು ಕೇರಳ ನಡುವಿನ ಬಾಂಧವ್ಯ ಚೆನ್ನಾಗಿದೆ. ಓಣಂ ಹಬ್ಬಕ್ಕಾಗಿ 50 ಲಕ್ಷ ಲೀಟರ್‌ ಹಾಲು ಪೂರೈಕೆ ಮಾಡುವಂತೆ ಕೇರಳ ನಿಯೋಗ ಮನವಿ ಮಾಡಿದ್ದು ಕೆಎಂಎಫ್ ಇದಕ್ಕೆ ಒಪ್ಪಿಗೆ ನೀಡಿದೆ.

 ಈಗಿರುವ ಹಾಲು ಒಕ್ಕೂಟಗಳನ್ನು ವಿಭಜಿಸುವ ಆಲೋಚನೆ ಇದೆಯಾ?
ಅಂತಹ ಯಾವುದೇ ಸಾಹಸಕ್ಕೆ ನಾವು ಕೈ ಹಾಕುವುದಿಲ್ಲ. ಇರುವಂತಹ ಒಕ್ಕೂಟಗಳನ್ನು ಬೇರ್ಪಡೆ ಮಾಡೋದಿಲ್ಲ. ಈ ಹಿಂದೆ ಕೋಲಾರ -ಚಿಕ್ಕಬಳ್ಳಾ ಪುರ ಹಾಲು ಒಕ್ಕೂಟ ವಿಭಜನೆಗೆ ಕೈಹಾಕಿದ್ದರು. ಆದರೆ ಅದು ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ಈಗ ಒಂದೇ ಒಕ್ಕೂಟವಾಗಿದೆ.

 ಇತ್ತೀಚೆಗೆ ಹೈನುಗಾರಿಕೆಯಿಂದ ರೈತರು ವಿಮುಖರಾಗುತ್ತಿದ್ದಾರಾ?
ಹೌದು, ರೈತರಿಗೆ ಹೈನುಗಾರಿಕೆಯಿಂದ ವಕೌìಟ್‌ ಆಗ್ತಿಲ್ಲ. ಆ ಹಿನ್ನೆಲೆಯಲ್ಲಿ ರೈತರು ಹಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಹಿಂದೆ 15 ರಾಸು ಸಾಕುತ್ತಿದ್ದವನು ಈಗ 10 ಹಸುವಿಗೆ ಬಂದು ತಲುಪಿದ್ದಾನೆ. ಒಂದೆರಡು ಹಸು ಕಟ್ಟಿದವನು ಮಾರಾಟ ಮಾಡಿದ್ದಾನೆ. ಪಶು ಆಹಾರ ದರ ಹೆಚ್ಚಳವಾಗಿದೆ. ಆ ಹಿನ್ನೆಲೆಯಲ್ಲಿ ಹೈನುಗಾರಿಕೆಯಿಂದ ರೈತ ವಿಮುಖರಾಗುತ್ತಿದ್ದಾರೆ. ರೈತರನ್ನು ಮತ್ತೆ ಕರೆತರುವ ನಿಟ್ಟಿನಲ್ಲಿ ಸರಕಾರ ಈಗ 3 ರೂ. ಹಾಲಿನ ದರ ಏರಿಕೆ ಮಾಡಿದೆ. ಎಸ್ಸಿ, ಎಸ್ಟಿ ಸಮುದಾಯದವರಿಗೆ 2 ಹಸು ನೀಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.

ತಿರುಪತಿ ಲಡ್ಡು ವಿವಾದಕ್ಕೆ ನಿಮ್ಮ ಪ್ರತಿಕ್ರಿಯೆ?

ಕೆಎಂಎಫ್ 2005ರಿಂದಲೂ ಟೆಂಡರ್‌ ಮೂಲಕ ತಿರುಪತಿ-ತಿರುಮಲ ದೇವಸ್ಥಾನ ಟ್ರಸ್ಟ್‌ಗೆ ತುಪ್ಪ ಪೂರೈಕೆ ಮಾಡುತ್ತಿದೆ. ಆದರೆ ಈಗ ಕಡಿಮೆ ಬೆಲೆ ನಂದಿನಿ ತುಪ್ಪ ನೀಡಿ ಎಂದು ಟಿಟಿಡಿ ಕೇಳುತ್ತಿದೆ. ಹೀಗಾಗಿ ನಾವು ಕಡಿಮೆ ಬೆಲೆಗೆ ನಂದಿನಿ ತುಪ್ಪ ಪೂರೈಕೆ ಮಾಡಲು ಸಿದ್ಧರಿಲ್ಲ. ಆದರೆ ಬೇಕು ಅಂತಾನೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಿ.ಟಿ. ರವಿ ಅವರು ಕೆಎಂಎಫ್ ವಿಚಾರದಲ್ಲಿ ರಾಜಕಾರಣ ಬೆರೆಸಲು ಹೊರಟಿದ್ದಾರೆ. ಟಿಟಿಡಿ ಟ್ರಸ್ಟ್‌ ಕೆ.ಜಿ.ಗೆ 20, 30, 40 ರೂ. ಕಡಿಮೆ ಬೆಲೆಗೆ ತುಪ್ಪ ನೀಡಿ ಎನ್ನುತ್ತಿದೆ. ಕೆಎಂಎಫ್ ರೈತರ ಸಂಸ್ಥೆ. ನಷ್ಟ ಮಾಡಿಕೊಂಡು ಅವರಿಗೆ ಕೊಡಬೇಕಾ? ಕಡಿಮೆ ಆಗುವ ಹಣವನ್ನು ಕಟೀಲು, ಸಿ.ಟಿ. ರವಿ ಭರಿಸುತ್ತಾರಾ? ಈಗಾಗಲೇ ರೈತರಿಗೆ ನೀಡಿದ್ದ 3 ರೂ. ಅನ್ನು ವಿರೋಧಿಸಿದ್ದಾರೆ. ಇಂತಹವರು ಕೆಎಂಎಫ್ ಹಾಲು-ತುಪ್ಪ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ.

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next